ವಿದ್ಯಾರ್ಥಿಗಳೇ ನಮ್ಮ ದೇಶದ ಭವಿಷ್ಯ

ಅಬ್ದುಲ್‌ ಕಲಾಂರ ಆದರ್ಶ ಪಾಲನೆಗೆ ವೀರೇಶಾನಂದ ಶ್ರೀ ಕರೆ

112

Get real time updates directly on you device, subscribe now.

ಮಧುಗಿರಿ: ವಿದ್ಯಾರ್ಥಿಗಳು ದೇಶದ ನಿಜವಾದ ಭವಿಷ್ಯ, ಅಬ್ದುಲ್‌ ಕಲಾಂ ಸೇರಿದಂತೆ ಮಹನೀಯರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ಸು ಗಳಿಸಿ ಎಂದು ತುಮಕೂರಿನ ಶ್ರೀರಾಮಕೃಷ್ಣ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಎಂಜಿಎಂ ಶಾಲೆಯಲ್ಲಿ ಬುಧವಾರ ಶ್ರೀಸಿದ್ಧಾರ್ಥ ಶಿಕ್ಷಣ ಸಂಸ್ಥೆ, ಹಾಲಪ್ಪ ಪ್ರತಿಷ್ಠಾನ ಹಾಗೂ ಶ್ರೀ ಸತ್ಯಸಾಯಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಸರ್ಕಾರಿ ಶಾಲೆಗಳ ಉನ್ನತಿಕರಣ ಹಾಗೂ ಶಾಲಾ ಪೀಠೋಪಕರಣ ಮತ್ತು ಕ್ರೀಡಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿ ದೆಸೆ ಜೀವನದ ಅತ್ಯಂತ ಶ್ರೇಷ್ಠ ಘಟ್ಟ, ಜೀವನದಲ್ಲಿ ಅರ್ಥಹೀನವಾಗಿ ಕಳೆದ ಸಮಯ ಅತ್ಯಮೂಲ್ಯ ಕಾಲಘಟ್ಟದ ನಷ್ಟ, ಸಮಯ ಎಲ್ಲಕ್ಕಿಂತ ಶ್ರೇಷ್ಠ, ದೇವರು ಎಲ್ಲರಿಗೂ ಕೊಟ್ಟ ಶ್ರೇಷ್ಠ ಸಂಪನ್ಮೂಲ ಸಮಯ, ಇಂದು ಒಂದು ಉತ್ತಮ ಶಾಲೆ ತೆರೆದರೆ ನಾಳೆ ನೂರು ಜೈಲುಗಳನ್ನು ಮುಚ್ಚಬಹುದು, ಶಿಕ್ಷಕರು ಮಕ್ಕಳಿಗೆ ನೈತಿಕತೆಯ ಚೌಕಟ್ಟಿನಲ್ಲಿ ಸುಂದರ ಪರಿಸರ ಪರಿಚಯಿಸಬೇಕಿದೆ, ಸೋಮಾರಿತನ ಶಾಪ, ಅತಿಯಾದ ಅವಲಂಬನೆ ಅಘೋಷಿತ ಗುಲಾಮಗಿರಿ, ಪ್ರತಿಯೊಬ್ಬರೂ ಸ್ವಾವಲಂಬಿಗಳಾಗಿ ಜೀವನ ನಿರ್ವಹಿಸಿ, ಜೀವನದ ಪ್ರಯಾಣದಲ್ಲಿ ಪ್ರತಿಯೊಬ್ಬರಿಗೂ ಏಣಿಯ ಅವಶ್ಯಕತೆ ಇದೆ. ನಿಂತ ಜಾಗದಲ್ಲಿ ಯಾರಿಗೂ ಯಶಸ್ಸು ದೊರೆಯುವುದಿಲ್ಲ, ಮೇಲೆ ಏರಿದಂತೆ ಕೆಳಗಿರುವ ಜನರನ್ನು ಕಂಡು ಅಪಹಾಸ್ಯ ಮಾಡುವುದೂ ಸರಿಯಲ್ಲ, ಜೀವನ ಸಾಹಸದ ಕಥೆ, ಅದನ್ನು ಸವಾಲಾಗಿ ಸ್ವೀಕರಿಸಿ ಎಂದು ಕರೆ ನೀಡಿದರು.
ಪ್ರಕೃತಿಯಲ್ಲಿ ಪ್ರಾಮಾಣಿಕತೆಗೆ ದೇವರು ಬಹಳಷ್ಟು ಬೆಲೆ ನೀಡುತ್ತಾನೆ, ಕೊಡುವ ಭಾವನೆ ಸಮಾಜದಲ್ಲಿ ತೆನೆಯಂತೆ ಬೆಳೆಯಬೇಕು, ಕಲಿಕೆ ಜೀವನದ ನಿರಂತರ ಪ್ರಕ್ರಿಯೆ, ಹಿರಿಯರ ಮಾತುಗಳನ್ನು ಜವಾಬ್ದಾರಿಯುತವಾಗಿ ಸ್ವೀಕರಿಸಿ ಜೀವನದಲ್ಲಿ ಯಶಸ್ಸು ಗಳಿಸಿ, ಹಣ ಇರುವವರೆಲ್ಲಾ ದಾನಿಗಳಲ್ಲ, ಉಳ್ಳವರು ಬಡವರಿಗೆ ದೀನ- ದಲಿತರಿಗೆ ಮಾನವೀಯತೆಯ ರೂಪದಲ್ಲಿ ಸಹಾಯಹಸ್ತ ಚಾಚಬೇಕು ಎಂದರು.
ಪ್ರತೀ ದಿನ ದೇಶದಲ್ಲಿ ಸುಮಾರು 1 ಕೋಟಿ ರೈತರು, ಜನ ಸಾಮಾನ್ಯರು ತಮ್ಮ ಕಚೇರಿ ಕೆಲಸಕ್ಕಾಗಿ ತಮ್ಮ ಕೆಲಸ ಕಾರ್ಯ ಬಿಟ್ಟು ಕಂದಾಯ ಇಲಾಖೆಗೆ ಅಲೆಯುತ್ತಿದ್ದು, ಇದರಿಂದ ಸಂಪನ್ಮೂಲ ನಷ್ಟವುಂಟಾಗುತ್ತಿದೆ. ಕಂದಾಯ ಇಲಾಖೆಗೆ ಅಲೆಯದೆ ಕೆಲಸ ನಿರ್ವಹಿಸಿದಲ್ಲಿ ಜಿಡಿಪಿ ದರ ಶೇ.2 ರಷ್ಟು ಏರಿಕೆಯಾಗಲಿದೆ ಎಂದು ಅಂಕಿ ಅಂಶಗಳೇ ತಿಳಿಸಿದ್ದು, ಇದು ನಮ್ಮ ದೇಶದ ವ್ಯವಸ್ಥೆ ಯಾವ ರೀತಿ ಇದೆ ಎಂಬುದನ್ನು ಇಲ್ಲಿ ಅರಿಯಬಹುದಾಗಿದೆ ಎಂದರು.
ರಾಷ್ಟ್ರ ಕವಿ ಕುವೆಂಪು ರಾಮಕೃಷ್ಣ ಆಶ್ರಮದ ಶಿಶು ಮತ್ತು ಹಳೇಯ ವಿದ್ಯಾರ್ಥಿ, ಅವರಿಗೆ ಜ್ಞಾನ ಪೀಠ ಪ್ರಶಸ್ತಿ ಬಂದಾಗ ಆಶ್ರಮವನ್ನು ಸ್ಮರಿಸಿ ಸ್ವೀಕರಿಸಿದರು ಎಂದು ಸ್ಮರಿಸಿದ ಅವರು ಮಧುಗಿರಿಗೆ ಎಂಜಿಎಂ ಶಾಲೆ, ಮೈಸೂರಿನ ಮಹಾರಾಣಿ ಶಾಲೆಯಂತೆ ಮಾದರಿಯಾಗಿದೆ, ಮುರಳೀಧರ ಹಾಲಪ್ಪನವರು ಉತ್ತಮ ಕೆಲಸ ಮಾಡುತ್ತಿದ್ದು, ಇದು ಇತರರಿಗೆ ಪ್ರೇರಣೆಯಾಗಲಿ ಎಂದರು.
ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಅವಕಾಶಗಳಿವೆ, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದವರು ಇಂದು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ, ಸರ್ಕಾರದ ವತಿಯಿಂದ ಇಂದು ಆಂಗ್ಲ ಮಾಧ್ಯಮ ಆರಂಭಿಸಿ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಪೀಟೋಪಕರಣ ಮತ್ತು ಇತರೆ ಕ್ರೀಡಾ ಸಾಮಗ್ರಿಗಳ ಕೊರತೆ ಕಂಡು ಬರುತ್ತಿದೆ. ಇದನ್ನು ಮನಗಂಡು ಶ್ರೀಸಿದ್ಧಾರ್ಥ ಶಿಕ್ಷಣ ಸಂಸ್ಥೆ, ಹಾಲಪ್ಪ ಪ್ರತಿಷ್ಠಾನ ಹಾಗೂ ಶ್ರೀಸತ್ಯಸಾಯಿ ಟ್ರಸ್ಟ್ ವತಿಯಿಂದ ಪೀಟೋಪಕರಣ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಕಠಿಣ ಪರಿಶ್ರಮವಿದ್ದರೆ ಏನು ಬೇಕಾದರೂ ಸಾಧಿಸಬಹುದು. ಪೋಷಕರು ತಮ್ಮ ಮಕ್ಕಳ ಬಗ್ಗೆ ಹಲವಾರು ಕನಸು ಕಂಡಿದ್ದು, ಪೋಷಕರ ಕನಸುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪಣತೊಡಬೇಕು ಎಂದರು.
ಎಂಜಿಎಂ ಶಾಲೆಯ ಅಧ್ಯಕ್ಷ ಡಿ.ಜಿ. ಶಂಕರನಾರಾಯಣ ಶೆಟ್ಟಿ, ಕಾರ್ಯದರ್ಶಿ ಎಂ.ಎಸ್. ಶಂಕರನಾರಾಯಣ್‌, ಧಾರ್ಮಿಕ ಮುಖಂಡ ಎಂ.ಜಿ. ಶ್ರೀನಿವಾಸ ಮೂರ್ತಿ, ಫ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ.ವೆಂಕಟರಾಮು, ಬಿಇಓ ನಂಜುಂಡಯ್ಯ, ಎಂಜಿಎಂ ಶಾಲೆಯ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ, ರಿಜ್ವಾನ್‌ ಪಾಷ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!