ರೈತರಿಗೆ ಹಾಲಿನ ದರ ಹೆಚ್ಚು ಮಾಡಲಿ: ಶಾಸಕ

301

Get real time updates directly on you device, subscribe now.

ಗುಬ್ಬಿ: ರೈತರು ಇತ್ತೀಚೆಗೆ ಹೈನುಗಾರಿಕೆ ಮಾಡಿ ಆದಾಯಗಳಿಸುವುದು ಕಷ್ಟವಾಗಿದ್ದು ರೈತರಿಗೆ ಹಾಲಿನ ದರ ಹೆಚ್ಚು ಮಾಡಿದರೆ ಅನುಕೂಲವಾಗುತ್ತದೆ ಎಂದು ಶಾಸಕ ಎಸ್‌.ಆರ್. ಶ್ರೀನಿವಾಸ್‌ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹೊಸಕೆರೆ ಗ್ರಾಮದಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ತುಮಕೂರು ಸಹಕಾರಿ ಹಾಲು ಒಕ್ಕೂಟ ಮಲ್ಲಸಂದ್ರ, ಹಾಲು ಉತ್ಪಾದಕರ ಸಹಕಾರ ಸಂಘ ಹೊಸಕೆರೆ ಸೇರಿದಂತೆ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಬರಡು ರಾತ್ರಿ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಹಾಗೂ ಮಿಶ್ರತಳಿ ಕರು ಪ್ರದರ್ಶನ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದ ಎಲ್ಲಾ ಕೆಎಂಎಫ್‌ ಅಧ್ಯಕ್ಷರು ಸರ್ಕಾರಕ್ಕೆ ಹಾಲಿನ ದರ ಹೆಚ್ಚಳ ಮಾಡುವಂತೆ ಮನವಿ ಮಾಡಿದರೆ ವಿಧಾನ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ಮಾಡಿ ಗ್ರಾಮಾಂತರ ಭಾಗದ ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದ ಅವರು ಬಹಳ ವಿಶೇಷವಾಗಿ ಗ್ರಾಮಾಂತರ ಭಾಗದಲ್ಲಿನ ರಾಸುಗಳಿಗೆ ಚಿಕಿತ್ಸೆ ನೀಡುತ್ತಿರುವುದು ಸಂತಸದ ವಿಚಾರವಾಗಿದೆ, ಇತ್ತೀಚೆಗೆ ಕೃಷಿ ಮಾಡುವುದು ಕಷ್ಟವಾಗಿದ್ದು ಎಲ್ಲಾ ವಸ್ತುಗಳು ದುಬಾರಿಯಾಗಿವೆ, ಪೆಟ್ರೋಲಿಯಂ ವಸ್ತುಗಳ ದುಬಾರಿ ಬೆಲೆಯಿಂದಾಗಿ ರೈತರಿಗೆ ದಿನನಿತ್ಯ ಬೇಕಾಗಿರುವಂತಹ ಸಲಕರಣೆಗಳೂ ಸಾವಿರಾರು ದರದಲ್ಲಿ ಹೆಚ್ಚಾಗಿರುವುದು ರೈತರಿಗೆ ಆತಂಕವಾಗಿದೆ, ಆದರೂ ದೇಶದ ಬೆನ್ನಲುಬು ರೈತರಾಗಿರುವುದರಿಂದ ಎಷ್ಟೇ ಕಷ್ಟ ಬಂದರೂ ಕೃಷಿ ಜೀವನವನ್ನ ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಕೆಎಂಎಫ್‌ ಅಧ್ಯಕ್ಷ ಸಿ.ವಿ ಮಹಾಲಿಂಗಯ್ಯ ಮಾತನಾಡಿ, ಇತ್ತೀಚೆಗೆ ಹಾಲು ಬರುತ್ತಿರುವುದು ಸಹ ಕಡಿಮೆಯಾಗಿದೆ, ಕೊರೊನಾ ದಂತಹ ಸಂದರ್ಭದಲ್ಲಿ ಸಾಕಷ್ಟು ಹಾಲು ಡೈರಿಯಲ್ಲಿ ಶೇಖರಣೆಯಾಗುತ್ತಿತ್ತು, ಸಾಕಷ್ಟು ನಷ್ಟ ಅನುಭವಿಸಿದ್ದೇವೆ, ಆದರೂ ರೈತರಿಗೆ ಯಾವುದೇ ರೀತಿಯಲ್ಲೂ ಬಟವಾಡೆ ನಿಲ್ಲಿಸಿರಲಿಲ್ಲ, ಮುಂಬೈ ದೆಹಲಿಯಂತಹ ಭಾಗಗಳಿಗೆ ತುಮಕೂರು ಒಕ್ಕೂಟದಿಂದ ಸಾವಿರಾರು ಲೀಟರ್‌ ಹಾಲು ಸರಬರಾಜಾಗುತ್ತಿತ್ತು, ಇದರಿಂದ ಒಕ್ಕೂಟಕ್ಕೆ ಸಾಕಷ್ಟು ಆದಾಯವಿತ್ತು, ಕೊರೊನ ಬಂದ ಮೇಲೆ ಅದರ ಅರ್ಧದಷ್ಟು ಸಹ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ, ಇತ್ತೀಚೆಗೆ ಮತ್ತೆ ಆರಂಭವಾಗಿದೆ, ಇನ್ನೂ ಕೊರೊನದಿಂದ ಸಾವನ್ನಪ್ಪಿದಂತಹ ರೈತರಿಗೆ ಪರಿಹಾರ ಸಹ ನೀಡಲಾಗಿದೆ, ನಿಮ್ಮೆಲ್ಲರ ಸಹಕಾರದಿಂದ ಇಡೀ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ತಾವು ಗುಣಮಟ್ಟದ ಹಾಲು ನೀಡಿದಾಗ ವಿವಿಧ ರೀತಿಯ ಉಪ ಉತ್ಪನ್ನಗಳನ್ನು ತಯಾರು ಮಾಡಿ ಅದರಲ್ಲಿ ಲಾಭ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕೆಎಂಎಫ್‌ ನಿರ್ದೇಶಕ ಚಂದ್ರಶೇಖರ್‌ ಮಾತನಾಡಿ ಇಡೀ ಜಿಲ್ಲೆಯಲ್ಲಿಯೇ ಗುಬ್ಬಿ ತಾಲ್ಲೂಕು ಹಾಲು ಹಾಕುವುದರಲ್ಲಿ ಮೊದಲ ಸ್ಥಾನದಲ್ಲಿತ್ತು, ಆದರೆ ಇತ್ತೀಚೆಗೆ ನಾಲ್ಕನೆಯ ಸ್ಥಾನಕ್ಕೆ ನಾವು ಹೋಗಿದ್ದೇವೆ, ತಾಲ್ಲೂಕಿನ ಚೇಳೂರು, ಹೊಸಕೆರೆ ಭಾಗದಲ್ಲಿ ಮಾತ್ರ ಅತ್ಯಂತ ಹೆಚ್ಚು ಹಾಲು ಹಾಕುವುದು ಬಿಟ್ಟರೆ ಬೇರೆ ಭಾಗದಲ್ಲಿ ಹಾಲಿನ ಕೊರತೆ ಎದುರಿಸುತ್ತಿದ್ದೇವೆ ಎಂದು ತಿಳಿಸಿದರು.
ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್‌ ಮಾತನಾಡಿ, ಇಂದು ಸುಮಾರು 700 ರಾಸು ಆಗಮಿಸಿದ್ದು ಬಹಳ ವಿಶೇಷವಾಗಿತ್ತು ನಮ್ಮ ಇಲಾಖೆಯಿಂದ ಅವಶ್ಯಕತೆ ಇರುವಂತಹ ಎಲ್ಲರೀತಿಯ ಸಹಕಾರವನ್ನು ರೈತರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಜಯಣ್ಣ, ಸಂಪನ್ಮೂಲ ವ್ಯಕ್ತಿ ಡಾ.ಸಿದ್ದರಾಮಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಗೌರಮ್ಮ ನಿರಂಜನ್‌, ತುಮಕೂರು ಗ್ರಾಮಾಂತರ ಹಾಲು ಒಕ್ಕೂಟದ ನಿರ್ದೇಶಕ ರೇಣುಕಾ ಪ್ರಸಾದ್‌, ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ಗುರುರೇಣುಕರಾಧ್ಯ, ಹೊಸಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ದಕ್ಷಿಣಮೂರ್ತಿ, ಈ ಭಾಗದ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ನೂರಾರು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!