ನಂದಿನಿ ಹಾಲಿನ ಡೈರಿ ತೆರೆಯಲು ಒತ್ತಾಯ

ಪಿ.ಕಲ್ಲಹಳ್ಳಿ ಗ್ರಾಮಸ್ಥರಿಂದ ತುಮುಲ್‌ ಅಧ್ಯಕ್ಷರ ಕಚೇರಿ ಎದುರು ಪ್ರತಿಭಟನೆ

218

Get real time updates directly on you device, subscribe now.

ತುಮಕೂರು: ತುರುವೇಕೆರೆ ತಾಲೂಕು ಪಿ.ಕಲ್ಲಹಳ್ಳಿ ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಂಘದಿಂದ ನಂದಿನಿ ಡೈರಿ ಹಾಲು ಅಳೆಸಲು ಅಗತ್ಯ ವ್ಯವಸ್ಥೆ ಮಾಡಬೇಕು ಹಾಗೂ ಹಾಲು ತೆಗೆದುಕೊಂಡು ಹೋಗಲು ವಾಹನದ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಪಿ.ಕಲ್ಲಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾರ್ಯಕರ್ತರು ತುಮುಲ್‌ ಅಧ್ಯಕ್ಷರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಮಮತ ಮತ್ತು ಶಾಂತ ಮಹಲಿಂಗಯ್ಯ ಅವರ ನೇತೃತ್ವದಲ್ಲಿ ಸಹಕಾರ ಸಂಘದ ನಿರ್ದೇಶಕರು, ಮಹಿಳಾ ಹಾಲು ಉತ್ಪಾದಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೂಡಲೇ ಡೈರಿ ಚಾಲನೆಗೆ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಪಿ.ಕಲ್ಲಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಮಮತ, ನಮ್ಮ ಸಂಘಕ್ಕೆ 2020ರ ಅಕ್ಟೋಬರ್‌ 24 ರಂದು ಚುನಾವಣೆ ನಡೆದು ನಾವೆಲ್ಲರೂ ಒಮ್ಮತದಿಂದ ಆಯ್ಕೆಯಾಗಿದ್ದೇವೆ, 2021ರ ಏಪ್ರಿಲ್‌ 01 ರಂದು ನಡೆದ ಸಂಘದ ಸಾಮಾನ್ಯ ಸಭೆಯಲ್ಲಿ ತುಮಕೂರು ಹಾಲು ಒಕ್ಕೂಟದಿಂದ ಷೇರು ಪಡೆಯಲು ಅನುಮತಿ ಪಡೆದು, 24-04-2021 ರಂದು ಷೇರು ಹಣ ಕಟ್ಟಿ ರಸೀದಿ ಪಡೆಯಲಾಗಿದೆ, 2021 ರ ಮೇ 13 ರಂದು ನಡೆದ ಸಭೆಯಲ್ಲಿ ಚರ್ಚೆ ನಡೆಸಿ ನಂದಿನಿ ಹಾಲು ಖರೀದಿ ಕೇಂದ್ರ ತೆರೆಯಲು ತೀರ್ಮಾನ ಕೈಗೊಂಡು, ಪಿ.ಕಲ್ಲಹಳ್ಳಿ ಗ್ರಾಮದಲ್ಲಿ ಡೈರಿ ತೆರೆಯಲು ಅವಕಾಶ ನೀಡುವಂತೆ ಮನವಿ ಮಾಡಲಾಗಿತ್ತು, ಆದರೆ ಇದುವರೆಗೂ ನಮಗೆ ಡೈರಿಯವರು ಅನುಮತಿ ನೀಡಿಲ್ಲ ಎಂದು ದೂರಿದರು.
ಹಲವಾರು ಲಿಖಿತ ಅರ್ಜಿಗಳನ್ನು ಗ್ರಾಮದಲ್ಲಿ ಡೈರಿ ತೆರೆಯುವಂತೆ ಕ್ರಮ ಕೈಗೊಳ್ಳಲು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಗ್ರಾಮದಲ್ಲಿ ಸುಮಾರು 90 ಜನ ಮಹಿಳಾ ಹಾಲು ಉತ್ಪಾದಕರಿದ್ದು, ದಿನವಹಿ ಗ್ರಾಮದಿಂದ ಬೆಳಗ್ಗೆ ಮತ್ತು ಸಂಜೆ ಸೇರಿ 750 ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ, ಎನ್‌.ಮಾವಿನಹಳ್ಳಿ ಡೈರಿಯವರು ತೆರೆದಿರುವ ಉಪ ಕೇಂದ್ರಕ್ಕೆ ಹಾಲು ಹಾಕುತ್ತಿದ್ದೇವೆ, ಕೆಲವರು ಖಾಸಗಿ ಡೈರಿಗೆ ಹಾಕುತ್ತಿದ್ದಾರೆ, ಗ್ರಾಮದಲ್ಲಿ ಉಪಕೇಂದ್ರಕ್ಕೆ ಬದಲಾಗಿ ಪಿ.ಕಲ್ಲಹಳ್ಳಿ ಗ್ರಾಮದಲ್ಲಿಯೇ ಮುಖ್ಯ ಹಾಲು ಸಂಗ್ರಹ ಕೇಂದ್ರ ತೆರೆಯಬೇಕೆಂಬುದು ನಮ್ಮ ಸಂಘದ ಆಗ್ರಹವಾಗಿದೆ, ಹಾಗಾಗಿ ತುಮಕೂರು ಹಾಲು ಒಕ್ಕೂಟದವರು ಕೂಡಲೇ ಪಿ.ಕಲ್ಲಹಳ್ಳಿ ಗ್ರಾಮದಲ್ಲಿ ಮುಖ್ಯ ಹಾಲು ಸಂಗ್ರಹ ಕೇಂದ್ರ ತೆರೆದು ಹಾಲು ಖರೀದಿಸಲು ಅವಕಾಶ ಮಾಡಿಕೊಡಬೇಕು ಹಾಗೂ ಹಾಲು ತೆಗೆದುಕೊಂಡು ಹೋಗುವ ವಾಹನದ ಮಾರ್ಗ ಸರಿಪಡಿಸಬೇಕೆಂದು ಆಗ್ರಹಿಸುತ್ತೇವೆ ಎಂದರು.
ಪ್ರತಿಭಟನಾನಿರತ ಮಹಿಳೆಯರಿಂದ ಮನವಿ ಸ್ವೀಕರಿಸಿ ಮಾತನಾಡಿದ ತುಮುಲ್‌ ನಿರ್ದೇಶಕ ಡಿ.ಕೃಷ್ಣಕುಮಾರ್‌, ಈ ಸಂಬಂಧ ಹಾಲು ಒಕ್ಕೂಟದ ಅಧ್ಯಕ್ಷ ಮಹಲಿಂಗಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದು, ಅವರು 2022ರ ಜನವರಿ 16 ರಂದು ಪಿ.ಕಲ್ಲಹಳ್ಳಿ ಗ್ರಾಮದಲ್ಲಿ ನಂದಿನಿ ಹಾಲಿನ ಡೈರಿ ತೆರೆಯಲು ಒಪ್ಪಿಗೆ ಸೂಚಿಸಿದ್ದು, ಅಂದು ಡೈರಿ ತೆರೆಯುವ ಭರವಸೆ ನೀಡಿದರು.
ಈ ವೇಳೆ ತುಮುಲ್‌ ನಿರ್ದೇಶಕರಾದ ಹಳೆಮನೆ ಶಿವನಂಜಪ್ಪ, ಎಸ್‌.ಆರ್‌.ಗೌಡ, ಪಿ.ಕಲ್ಲಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನಂದಿನಿ, ಮಮತ ಹೆಚ್‌.ಎಸ್‌., ಈಶ್ವರಿ, ನಳಿನಾಕ್ಷಿ, ಅಂಬಿಕಾ, ಚೈತ್ರ, ಪ್ರಮೀಳಾ, ಚಂದ್ರಕಲಾ, ಪಂಕಜ, ಹುಚ್ಚಮ್ಮ, ಶಿವಮ್ಮ ಸೇರಿದಂತೆ ಗ್ರಾಮದ ಹಲವು ಮಹಿಳೆಯರು ಇದ್ದರು.

Get real time updates directly on you device, subscribe now.

Comments are closed.

error: Content is protected !!