ಹುಳಿಯಾರು: ರಾಜಕೀಯವಾಗಿ ಪುನರ್ಜನ್ಮ ನೀಡಿದ ಹುಳಿಯಾರಿನ ಋಣ ತೀರಿಸಲಾಗದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಹುಳಿಯಾರು ಹಾಗೂ ತಿಮ್ಲಾಪುರ ಕೆರೆಗಳಿಗೆ ಹೇಮಾವತಿ ನೀರು ಹರಿಸಿದ ಸಲುವಾಗಿ ಅಭಿಮಾನಿಗಳು ಹುಳಿಯಾರಿನ ಪರಿವೀಕ್ಷಣಾ ಮಂದಿರದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಸೋತು ರಾಜಕೀಯ ಸಹವಾಸ ಸಾಕು ಎನ್ನುವ ಕಾಲದಲ್ಲಿ ರಾಮಕೃಷ್ಣ ಹೆಗಡೆ ಅವರ ಸೂಚನೆ ಮೇರೆಗೆ ಹುಳಿಯಾರು ಕ್ಷೇತ್ರದಿಂದ ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿದ್ದೆ, ನನ್ನ ಮೇಲೆ ಹೊರಗಿನವನು ಎನ್ನುವುದು ಸೇರಿದಂತೆ ಅನೇಕ ಅಪಪ್ರಚಾರಗಳನ್ನು ವಿರೋಧಿಗಳು ಮಾಡಿದರಾದರೂ ಹುಳಿಯಾರು ಜನತೆ ಕೈ ಹಿಡಿದರು. ಅಂದು ಹುಳಿಯಾರು ಜನ ಕೊಟ್ಟ ರಾಜಕೀಯ ಪುನರ್ಜನ್ಮದ ಫಲವಾಗಿ ಕೆಎಂಎಫ್ ಅಧ್ಯಕ್ಷನಾಗಿ, ಶಾಸಕನಾಗಿ, ಸಚಿವನಾಗಿ ರಾಜಕೀಯವಾಗಿ ಬೆಳೆದಿದ್ದೇನೆ ಎಂದರು.
ಹುಳಿಯಾರು ಪೊಲೀಸ್ ಠಾಣಾ ಕಟ್ಟಡಕ್ಕೆ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಿದ್ದೇನೆ, ಇನ್ನೊಂದು ವಾರದಲ್ಲಿ ಹುಳಿಯಾರಿನ ಪರಿವೀಕ್ಷಣ ಮಂದಿರಕ್ಕೂ ಭೂಮಿ ಪೂಜೆ ನೆರವೇರಿಸಲಿದ್ದೇನೆ. ಹುಳಿಯಾರು ಕೆರೆಗೆ ಹೇಮಾವತಿ ನೀರು ಹರಿಸಿದ್ದೇನೆ. ದಶಕಗಳಿಂದ ಗುಂಡಿ ಬಿದಿದ್ದ ಪಟ್ಟಣದ ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ್ದೇನೆ, ಹುಳಿಯಾರಿಗೆ ನೀರಿನ ಸಮಸ್ಯೆಯಾಗಬಾರದೆಂದು ಬೋರನಕಣಿವೆಗೆ ಭದ್ರಾದಿಂದ 1 ಟಿಎಂಸಿ ನೀರು ಮೀಸಲಿಟ್ಟಿದ್ದೇನೆ. ಅಲ್ಲದೆ ಶೀಘ್ರದಲ್ಲೇ ಹುಳಿಯಾರಿಗೆ ಸುಸಜ್ಜಿತ ಆಸ್ಪತ್ರೆ ನಿರ್ಮಿಸುತ್ತೇನೆ. ಇಷ್ಟು ಕೆಲಸ ಮಾಡಿದರೂ ಹುಳಿಯಾರಿನವರ ಋಣಕ್ಕೆ ಈ ಕೆಲಸಗಳು ಕಮ್ಮಿ ಎಂದರು.
ಸಣ್ಣ ನೀರಾವತಿ ಖಾತೆಯೇ ಬೇಕೆಂದು ಪಟ್ಟು ಹಿಡಿದು ಪಡೆದು ನನ್ನ ತಾಲೂಕಿಗೆ ಮಾತ್ರವಲ್ಲದೆ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇನೆ. ಕೋಲಾರ, ಚಿಕ್ಕಬಳ್ಳಾಪುರ ಕೆರೆಗಳನ್ನು ತುಂಬಿಸಿದಂತೆ ಬೆಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸಿ ತುಮಕೂರು ಗ್ರಾಮಾಂತರ ಕೆರೆಗಳನ್ನು ತುಂಬಿಸಲು ಹಣ ನೀಡಿದ್ದೇನೆ. 30 ವರ್ಷಗಳ ನಂತರ ಕುಣಿಗಲ್ ಕೆರೆ ತುಂಬಿಸಿದ್ದೇನೆ. ಭದ್ರಾ, ಎತ್ತಿನಹೊಳೆ ಹಾಗೂ ಹೇಮಾವತಿ ಯೋಜನೆಯಿಂದ ಜಿಲ್ಲೆಗೆ ಮೀಸಲಾಗಿರುವ 15 ಟಿಎಂಸಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಯಥೇಚ್ಚವಾಗಿ ಹಣ ನೀಡಿದ್ದೇನೆ ಎಂದು ವಿವರಿಸಿದರು.
ಕೋವಿಡ್‌ನ ಎರಡನೇ ಅಲೆಯಲ್ಲಿ ಜಿಲ್ಲೆಯ ಪ್ರತಿ ತಾಲೂಕು ಆಸ್ಪತ್ರೆಗಳಿಗೆ 50 ಆಕ್ಸಿಜನ್ ಬೆಡ್ ಕೊಟ್ಟಿದಲ್ಲದೆ ವೆಂಟಿಲೇಟರ್ ಸಹಿತ ಐಸಿಯು ಆರಂಭಿಸಿ ಸಾವನೋವುಗಳನ್ನು ತಡೆದಿದ್ದೇವೆ. ಈಗ 100 ಮಂದಿ ಮಕ್ಕಳ ತಜ್ಞರನ್ನು ಸೇರಿಸಿ ಸಭೆ ನಡೆಸಿ 3 ನೇ ಅಲೆಯನ್ನು ಸಮರ್ಥವಾಗಿ ಎದುರಿಸುವಂತೆ ಜಿಲ್ಲೆಯ ಆಸ್ಪತ್ರೆಗಳು ಹಾಗೂ ಕೋವಿಡ್ ಕೇರ್ ಸೆಂಟರ್ ಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದೇವೆ ಎಂದರಲ್ಲದೆ ಹುಳಿಯಾರನ್ನು ತಾಲೂಕು ಮಾಡುವ ಆಸೆಯಿದೆಯಾದರೂ ತುಮಕೂರು ಭಾಗ ಮಾಡಲು ಜಿಲ್ಲೆಯ ಯಾವ ಜನಪ್ರತಿನಿಧಿಯೂ ಕೈ ಹಾಕಿಲ್ಲ. ಬೆಳಗಾವಿ ನಂತರ 2 ನೇ ಅತೀ ದೊಡ್ಡ ಜಿಲ್ಲೆಯಾಗಿ ತುಮಕೂರು ಉಳಿಯಲಿ ಎನ್ನುವುದು ನಮ್ಮೆಲ್ಲರ ಬಯಕೆಯಾಗಿದೆ. ವಿಕೇಂದ್ರಿಕರಣದ ಕಾಲ ಕೂಡಿ ಬಂದರೆ ಹುಳಿಯಾರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದರು.
ಪಪಂ ಅಧ್ಯಕ್ಷ ಕೆ.ಎಂ.ಎಲ್ ಕಿರಣ್, ಉಪಾಧ್ಯಕ್ಷೆ ಶೃತಿಸನತ್, ಸದಸ್ಯರುಗಳಾದ ಹೇಮಂತ್ ಕುಮಾರ್, ಬೀಬೀಫಾತೀಮಾ, ಟಿ.ಸಂಧ್ಯ, ಚಂದ್ರಶೇಖರರಾವ್, ರತ್ನಮ್ಮ, ಜಿಪಂ ಮಾಜಿ ಸದಸ್ಯೆ ಮಂಜುಳಮ್ಮ, ತಾಪಂ ಮಾಜಿ ಅಧ್ಯಕ್ಷ ಕೆಂಕೆರೆನವೀನ್, ಹೊಸಹಳ್ಳಿಜಯಣ್ಣ, ನಿರಂಜನ್, ಕೇಶವಮೂರ್ತಿ, ಹರ್ಷ, ಕೆಂಕೆರೆ ಗ್ರಾಪಂ ಅಧ್ಯಕ್ಷ ಕೆ.ಸಿ.ವಿಕಾಸ್, ದೊಡ್ಡಬಿದರೆ ಗ್ರಾಪಂ ಅಧ್ಯಕ್ಷ ರಂಗಸ್ವಾಮಿ, ಬಿಜೆಪಿ ಮುಖಂಡರಾದ ಬುಕ್ಕಾಪಟ್ಟಣ ಮಂಜುನಾಥ್, ಬರಕನಹಾಲ್ ವಿಶ್ವನಾಥ್, ನಂದಿಹಳ್ಳಿಶಿವಣ್ಣ, ಅಶೋಕ್‌ಬಾಬು, ರಾಮಣ್ಣ, ಶಿವರಾಜ್, ಬಸವರಾಜು ಮತ್ತಿತರರು ಇದ್ದರು.
ರಾಜಕೀಯ ಪುನರ್ಜನ್ಮ ನೀಡಿದ್ದು ಹುಳಿಯಾರು: ಮಾಧುಸ್ವಾಮಿ
Get real time updates directly on you device, subscribe now.
Prev Post
Comments are closed.