ಕೆರೆ, ಕಟ್ಟೆಗಳನ್ನುಅಭಿವೃದ್ಧಿ ಮಾಡಿ: ಸ್ವಾಮೀಜಿ

160

Get real time updates directly on you device, subscribe now.

ಗುಬ್ಬಿ: ಮಠ ಮಂದಿರಗಳನ್ನು ಅಭಿವೃದ್ಧಿ ಪಡಿಸುವಂತೆ ಗ್ರಾಮದ ಕೆರೆ, ಕಟ್ಟೆಗಳನ್ನುಅಭಿವೃದ್ಧಿ ಪಡಿಸಬೇಕು ಎಂದು ಸಿದ್ಧರಬೆಟ್ಟದ ವೀರಭದ್ರೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು .
ತಾಲ್ಲೂಕಿನ ದೊಡ್ಡಗುಣಿ ಗ್ರಾಮದಲ್ಲಿ ಕೆರೆ ಹೂಳು ಎತ್ತುವುದು ಹಾಗೂ ಕೆರೆಯ ಅಭಿವೃದ್ಧಿಗೆ ಗ್ರಾಮದಲ್ಲಿ ಜೋಳಿಗೆ ಹಿಡಿದು ಭಿಕ್ಷಾಟನೆ ಮಾಡಿ ಮಾತನಾಡಿ, ಪುರಾತನ ಕಾಲದಲ್ಲಿ ಗ್ರಾಮದಲ್ಲಿ ದೇವಾಲಯ ಹಾಗೂ ಕೆರೆ ಕಟ್ಟಿಸುತ್ತಿದ್ದರು, ಇದರಿಂದ ಗ್ರಾಮದಲ್ಲಿ ಧಾರ್ಮಿಕ ನಂಬಿಕೆ ಹಾಗೂ ಸಂಸ್ಕಾರ ಒಂದು ಕಡೆ ನೆಲೆಗೊಂಡರೆ ಇನ್ನೊಂದು ಕಡೆ ಕೆರೆ ಕಟ್ಟಿದ ಕಾರಣ ಕೃಷಿ ಕುಲ ಕಸಬಾಗಿತ್ತು, ಆದರೆ ಇತ್ತೀಚೆಗೆ ಕೆರೆಗಳನ್ನು ನುಂಗುವ ಸ್ಥಿತಿ ನಿರ್ಮಾಣವಾಗಿದ್ದು ಇದರಿಂದ ಮುಂದಿನ ಭವಿಷ್ಯ ಡೋಲಾಯಮಾನವಾಗುತ್ತಿದೆ, ಇಂತಹ ಕೆರೆಗಳನ್ನು ಉಳಿಸಿ ಅಲ್ಲಿ ನೀರು ತುಂಬಿಸಿದರೆ ಮುಂದಿನ ಭವಿಷ್ಯ ಉಳಿಯುತ್ತದೆ ಎಂದರು.
ದೊಡ್ಡಗುಣಿ ಕೆರೆ ಸಾಕಷ್ಟು ವಿಶಾಲತೆಯಿಂದ ಕೂಡಿರುವುದರಿಂದ ಈ ಕೆರೆ ತುಂಬಿದರೆ ನೂರಾರು ಎಕರೆಯಷ್ಟು ಕೃಷಿ ಭೂಮಿಗೆ ಸುತ್ತಲಿನ ಸುಮಾರು 20 ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರಿನ ಬವಣೆ ನೀಗುತ್ತದೆ, ಹಾಗಾಗಿ ಸರಕಾರ ಈ ಕೆರೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕೆರೆ ತುಂಬಿಸುವ ಕೆಲಸ ಮಾಡಬೇಕು, ಅನ್ನಕ್ಕೆ ಸರಿ ಸಮಾನವಾಗಿ ನೀರು ಇರುವುದರಿಂದ ನೀರನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕಾಗಿದೆ, ಒಮ್ಮೊಮ್ಮೆ ಅತಿ ಹೆಚ್ಚು ಮಳೆಯಾಗಿ ಪ್ರವಾಹ ಸೃಷ್ಟಿಸಿದರೆ, ಕೆಲವೊಮ್ಮೆ ಪ್ರಕೃತಿ ಬರಗಾಲ ಸೃಷ್ಟಿ ಮಾಡುತ್ತಿದೆ, ಹಾಗಾಗಿ ಬಿದ್ದಂತಹ ಮಳೆ ನೀರನ್ನು ಕೆರೆಯಲ್ಲಿ ಸಂರಕ್ಷಣೆ ಮಾಡುವ ಕರ್ತವ್ಯವನ್ನು ನಾವು ಮಾಡಬೇಕಾಗಿದೆ ಎಂದರು.
ಸಣ್ಣನೀರಾವರಿ ಸಚಿವರಾದ ಜೆ.ಸಿಮಾಧುಸ್ವಾಮಿ ಅವರು ಸಮಗ್ರ ನೀರಾವರಿ ವ್ಯವಸ್ಥೆಯನ್ನು ಜಿಲ್ಲೆಗೆ ಮಾಡಬೇಕೆಂದು ಪಣ ತೊಟ್ಟಿರುವುದು ಸಂತಸದ ವಿಚಾರ, ದೊಡ್ಡಗುಣಿ ಕೆರೆಯನ್ನು ಸಹ ತುಂಬಿಸಿದಲ್ಲಿ ಈ ಭಾಗದ ಸಾವಿರಾರು ರೈತರಿಗೆ ಅನುಕೂಲವಾಗುತ್ತದೆ, ಈ ವಿಚಾರದ ಬಗ್ಗೆ ನಮ್ಮ ಜೊತೆ ದೂರವಾಣಿಯಲ್ಲಿ ಮಾತನಾಡಿದ ಅವರು ಇಲ್ಲಿ ಹಾಕಿರುವ ಮೋಟಾರ್ ಪಂಪು ಯಾವುದೇ ರೀತಿಯ ಸಮಸ್ಯೆ ಇದ್ದರೂ ಅದನ್ನು ಸರಿಪಡಿಸಿ ಅಲ್ಲಿಗೆ ನೀರಿನ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ, ಅದರ ಜೊತೆಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಕೆರೆಯ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ದೊಡ್ಡಗುಣಿ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸುಮಾರು ವರ್ಷಗಳಿಂದ ಈ ಕೆರೆ ತುಂಬಿಲ್ಲ, ಈ ಕೆರೆ ತುಂಬಿದಲ್ಲಿ ಸಾವಿರಾರು ರೈತರು ನೆಮ್ಮದಿಯಿಂದ ಉಸಿರಾಟ ಮಾಡುತ್ತಾರೆ, ಈ ಒಂದು ಕೆರೆಯಿಂದ ಸುತ್ತಮುತ್ತಲಿನ ರೈತರಿಗೆ ಜೀವನಾಡಿ ಈ ಕೆರೆಯಾಗುತ್ತದೆ, ಹಾಗಾಗಿ ಈ ಕೆರೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗ್ರಾಮದಲ್ಲಿ ಭಿಕ್ಷಾಟನೆ ಮಾಡಿದ್ದು 60 ಸಾವಿರ ಹಣ ಸಂಗ್ರಹವಾಗಿದೆ, ದಾನಿಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಕಾರ ಮಾಡಿದರೆ ಇಲ್ಲಿನ ಕೆರೆ ತುಂಬಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದಲ್ಲಿ ಜೋಳಿಗೆ ಹಿಡಿದ ಇಬ್ಬರು ಶ್ರೀಗಳು ಮನೆ ಮನೆಗೆತೆರಳಿ ಕಾಣಿಕೆಯನ್ನು ತಮ್ಮ ಜೋಳಿಗೆಯಲ್ಲಿ ಹಾಕಿಸಿಕೊಳ್ಳುವ ಮೂಲಕ ಕೆರೆಯ ಅಭಿವೃದ್ಧಿಯ ಚಿಂತನೆ ಮತ್ತು ಪ್ರತಿಯೊಂದು ಕೆರೆಯು ಉಳಿಯಬೇಕು ಎಂಬ ಜಾಗೃತಿ ಪಾಠವನ್ನು ಗ್ರಾಮಸ್ಥರಿಗೆ ತಿಳಿಸಿದರು. ಗ್ರಾಮಸ್ಥರು ಹೆಚ್ಚಿನ ರೀತಿಯಲ್ಲಿ ಭಾಗವಹಿಸಿ ಗ್ರಾಮದಲ್ಲಿ ಶ್ರೀಗಳ ಜೊತೆ ಹೆಜ್ಜೆ ಹಾಕಿದರು.

Get real time updates directly on you device, subscribe now.

Comments are closed.

error: Content is protected !!