ಶಿರಾ: ಶಿರಾ ನಗರಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಅಭ್ಯರ್ಥಿಗಳಲ್ಲಿ ಇದ್ದ ಕುತೂಹಲಕ್ಕೆ ತೆರೆ ಬಿದ್ದಿದೆ, ಗೆದ್ದವರು ಸಂಭ್ರಮಿಸಿದರೆ, ಸೋತವರು ಮನೆ ಕಡೆ ಮುಖಮಾಡಿದ್ದಾರೆ.
ಪ್ರಮುಖ ಮೂರು ಪಕ್ಷಗಳಾದ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನಗರಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದವು, ಆದರೆ ಯಾವ ಪಕ್ಷವೂ ಸಂಪೂರ್ಣ ಆಡಳಿತ ಹಿಡಿಯುವಷ್ಟು ಸ್ಥಾನದಲ್ಲಿ ಗೆಲ್ಲದೆ ಫಲಿತಾಂಶ ಅತಂತ್ರ ಸ್ಥಿತಿ ತಲುಪಿದೆ.
ಹಾಗೇ ನೋಡಿದರೆ ಕಾಂಗ್ರೆಸ್ ಪಕ್ಷ 11 ಸ್ಥಾನ ಗೆಲ್ಲುವ ಮೂಲಕ ಮೊದಲ ಸ್ಥಾನದಲ್ಲಿ ನಿಂತರೆ, ಪಕ್ಷೇತರರು 8 ಸ್ಥಾನದಲ್ಲಿ ಗೆಲ್ಲುವ ಮೂಲಕ ತಮ್ಮ ಪಾರುಪತ್ಯ ಸ್ಥಾಪಿಸಿದ್ದಾರೆ, ಇನ್ನು ಜೆಡಿಎಸ್ 7 ಸ್ಥಾನದಲ್ಲಿ ಗೆಲ್ಲುವ ಮೂಲಕ ಉತ್ತಮ ಸಾಧನೆ ಮಾಡಿದೆ, ಆದರೆ ಎಂಎಲ್ಎ, ಎಂಎಲ್ಸಿ ಇದ್ದರೂ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಿಸಿಕೊಳ್ಳುವಲ್ಲಿ ವಿಫಲವಾಗಿದ್ದು, ಕೇವಲ ನಾಲ್ಕು ವಾರ್ಡ್ನಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದು, ಇದು ಕಮಲ ಪಾರ್ಟಿಗೆ ಮುಜುಗರದ ಸಂಗತಿಯೇ ಸರಿ.
ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶ ಎಂದರೆ ಅದು ಪಕ್ಷೇತ್ರರ ಗೆಲುವು, ಇಲ್ಲಿ ಯಾವುದೇ ಪಾರ್ಟಿಗಿಂತ ತಮ್ಮ ವರ್ಚಸ್ಸೇ ಗ್ರೇಟ್ ಎಂಬಂತೆ ಎಂಟು ಮಂದಿ ಆಯ್ಕೆಯಾಗುವ ಮೂಲಕ ಯಾರೇ ನಗರಸಭೆ ಆಡಳಿತ ಚುಕ್ಕಾಣಿ ಹಿಡಿದರೂ ಅಲ್ಲಿ ನಾನೇ ಕಿಂಗ್ ಮೇಕರ್ ಎಂಬಂತಾಗಿದೆ. ಬಹುತೇಕ ಕಾಂಗ್ರೆಸ್ ಜೊತೆ ಪಕ್ಷೇತರರರು ಸೇರಿ ನಗರಸಭೆ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಾಂಗ್ರೆಸ್ 11, ಜೆಡಿಎಸ್ 7, ಬಿಜೆಪಿ 4 ಮತ್ತು ಪಕ್ಷೇತರರು 8 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದು ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದ್ದು, ಇಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರ ವರ್ಚಸ್ಸು ಕೆಲಸ ಮಾಡಿದೆ. ವಾರ್ಡ್ ನಂಬರ್: 1ರಲ್ಲಿ ರಂಗರಾಜು (ಬಿಜೆಪಿ), ವಾರ್ಡ್ ನಂಬರ್: 2 ತೇಜ ಎಲ್.ಭಾನುಪ್ರಕಾಶ್ (ಕಾಂಗ್ರೆಸ್), ವಾರ್ಡ್ ನಂಬರ್: 3 ಮಂದಾರಾ ಆರ್ ಉಗ್ರೇಶ್ (ಜೆಡಿಎಸ್), ವಾರ್ಡ್ ನಂಬರ್: 4 ತ್ರಿವೇಣಿ.ಆರ್ (ಜೆಡಿಎಸ್), ವಾರ್ಡ್ ನಂಬರ್: 5 ಗೆಲುವು: ಅಂಜಿನಪ್ಪ.ಬಿ. (ಜೆಡಿಎಸ್), ವಾರ್ಡ್ ನಂಬರ್: 6 ಗಿರಿಜ ಎಸ್.ವಿಜಯ್ಕುಮಾರ್ (ಪಕ್ಷೇತರ), ವಾರ್ಡ್ ನಂಬರ್: 7 ಶಿವಶಂಕರ್ (ಕಾಂಗ್ರೆಸ್), ವಾರ್ಡ್ ನಂಬರ್: 8 ಎಸ್.ಎಲ್.ರಂಗನಾಥ್ (ಪಕ್ಷೇತರ), ವಾರ್ಡ್ ನಂಬರ್: 9 ಗೆಲುವು: ಕೆ.ರವಿಶಂಕರ್ (ಜೆಡಿಎಸ್), ವಾರ್ಡ್ ನಂಬರ್: 10 ಅಜಯ್ ಕುಮಾರ್.ಎಸ್.ಎಸ್ (ಪಕ್ಷೇತರ), ವಾರ್ಡ್ ನಂಬರ್: 11 ಮಹಮದ್ ಜಾಫರ್ (ಕಾಂಗ್ರೆಸ್), ವಾರ್ಡ್ ನಂಬರ್: 12 ಸಾನಿಯಾ ಆರ್. ಖಾದರ್ (ಪಕ್ಷೇತರ), ವಾರ್ಡ್ ನಂಬರ್: 13 ಮಹಮದ್ ಸಫೀರ್ (ಜೆಡಿಎಸ್), ವಾರ್ಡ್ ನಂಬರ್: 14 ರಫೀಉಲ್ಲಾ (ಕಾಂಗ್ರೆಸ್), ವಾರ್ಡ್ ನಂಬರ್: 15 ಇರ್ಷಾದ್ ಉನ್ನೀಸಾ (ಪಕ್ಷೇತರ), ವಾರ್ಡ್ ನಂಬರ್: 16 ಗೆಲುವು: ಸೈಯಾದಾ ಮರ್ಜಿಯಾ ಫಿರ್ ದೋಸ್ (ಕಾಂಗ್ರೆಸ್), ವಾರ್ಡ್ ನಂಬರ್: 17 ಜೀಶಾನ್ ಮೊಹಮೂದ್ (ಕಾಂಗ್ರೆಸ್), ವಾರ್ಡ್ ನಂಬರ್: 18 ಬುರ್ಹಾನ್ ಮಹಮೂದ್ (ಕಾಂಗ್ರೆಸ್),
ವಾರ್ಡ್ ನಂಬರ್: 19 ರುಖೈಯಾ ಪರ್ವೀನ್ (ಕಾಂಗ್ರೆಸ್), ವಾರ್ಡ್ ನಂಬರ್: 20 ಗೆಲುವು: ರೆಹನಾ ಖಾನಂ (ಕಾಂಗ್ರೆಸ್), ವಾರ್ಡ್ ನಂಬರ್: 22 ನಾಸಿರ್ ಖಾನ್ ಉರುಫ್ ಫಯಾಜ್ ಖಾನ್ (ಪಕ್ಷೇತರ), ವಾರ್ಡ್ ನಂಬರ್: 23 ಆಮ್ರಿನ್ ಖಾನಂ ಫರ್ಮನ್ (ಪಕ್ಷೇತರ), ವಾರ್ಡ್ ನಂಬರ್: 24 ಸಮ್ರಿನ್ ಖಾನಂ (ಪಕ್ಷೇತರ), ವಾರ್ಡ್ ನಂಬರ್: 25 ಆರ್.ರಾಮು (ಜೆಡಿಎಸ್), ವಾರ್ಡ್ ನಂಬರ್: 26 ಲಕ್ಷ್ಮೀಕಾಂತ (ಕಾಂಗ್ರೆಸ್), ವಾರ್ಡ್ ನಂಬರ್: 27 ಅಂಬುಜಾಕ್ಷಿ (ಬಿಜೆಪಿ), ವಾರ್ಡ್ ನಂಬರ್: 28 ಉಮಾ ವಿಜಯರಾಜ್ (ಬಿಜೆಪಿ), ವಾರ್ಡ್ ನಂಬರ್: 29 ಎಸ್.ಬಿ.ವಿಜಯಲಕ್ಷ್ಮಿ (ಜೆಡಿಎಸ್), ವಾರ್ಡ್ ನಂಬರ್: 30 ಸ್ವಾತಿ ಮಂಜೇಶ್ (ಬಿಜೆಪಿ), ವಾರ್ಡ್ ನಂಬರ್: 31 ಪೂಜಾ.ಪಿ (ಕಾಂಗ್ರೆಸ್) ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಅಣ್ಣತಮ್ಮಂದಿರು ಗೆಲುವು
ನಗರಸಭಾ ಚುನಾವಣೆಯಲ್ಲಿ ವಾರ್ಡ್ ನಂ. 17 ಮತ್ತು ವಾರ್ಡ್ ನಂ. 18 ರಲ್ಲಿ ಅಣ-್ಣತಮ್ಮಂದಿರು ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದ್ದಾರೆ. ಮಾಜಿ ಪುರಸಭಾ ಅಧ್ಯಕ್ಷರು, ಶಿರಾ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಲ್ಲಾಬಕಷ್ ಕೆ ಪ್ಯಾರು ಅವರ ಮಕ್ಕಳಾದ ಜೀಶಾನ್ ಮೊಹಮೂದ್ ಮತ್ತು ಬುರ್ಹಾನ್ ಮೊಹಮೂದ್ ಇಬ್ಬರೂ ಗೆಲುವು ಸಾಧಿಸಿದ್ದಾರೆ. ಮೊದಲಿನಿಂದಲೂ ಜನತೆಯ ಸಮಸ್ಯೆಗಳಿಗೆ ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದ್ದೇವೆ ಮುಂದೆಯೂ ಸಹಕರಿಸುತ್ತೇವೆ ಎಂದು ತಿಳಿಸಿದ್ದಾರೆ.
ಹೆಚ್ಚು ಮತ ಪಡೆದ ರುಖೈಯಾ ಪರ್ವೀನ್
ಶಿರಾ ನಗರಸಭೆ ಚುನಾವಣೆಯಲ್ಲಿ ವಾರ್ಡ್ ನಂ.19 ರ ರುಖೈಯಾ ಪರ್ವೀನ್ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದು ಅತಿ ಹೆಚ್ಚು ಮತಗಳನ್ನು ಪಡೆದಿದ್ದಾರೆ.
ರುಖೈಯಾ ಪರ್ವೀನ್ ಅವರು ಒಟ್ಟು 928 ಮತಗಳನ್ನು ಪಡೆದಿದ್ದಾರೆ. ಶಿರಾ ನಗರಸಭೆ ಚುನಾವಣೆಯಲ್ಲಿಯೇ ಅತಿ ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿಯಾಗಿದ್ದಾರೆ.
ಬಿಜೆಪಿ – ಕಾಂಗ್ರೆಸ್ ಎಷ್ಟೇ ಹಣ ಖರ್ಚು ಮಾಡಿದರೂ ಹೆಚ್ಚಿನ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಎಂಎಲ್ಎ, ಎಂಎಲ್ಸಿ ಇದ್ರೂ ಬಿಜೆಪಿ ಮಕಾಡೆ ಮಲಗಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಮುಖಂಡ ಕಲ್ಕೆರೆ ರವಿಕುಮಾರ್ ಹಣ ಹೊಳೆ ಹರಿಸಿದರೂ ನಿರೀಕ್ಷಿತ ಸಾಧನೆ ಮಾಡಲಿಲ್ಲ, ಇವರಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ. ಜೆಡಿಎಸ್ 7 ಸ್ಥಾನದಲ್ಲಿ ಗೆಲ್ಲುವ ಮೂಲಕ ಉತ್ತಮ ಸಾಧನೆ ಮಾಡಿದ್ದು, ಮುಂದಿನ ದಿನಗಳಲ್ಲಿ ನಡೆಯುವ ಜಿಪಂ, ತಾಪಂ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚು ಸ್ಥಾನ ಗೆದ್ದು ಜೆಡಿಎಸ್ನ ತಾಕತ್ತು ಏನೆಂದು ತೋರಿಸಲಿದ್ದೇವೆ.
। ಲಿಂಗದಹಳ್ಳಿ ಚೇತನ್ ಕುಮಾರ್,
ಜೆಡಿಎಸ್ ಮುಖಂಡ
Comments are closed.