ಕಲ್ಪತರು ನಾಡಲ್ಲಿ ಕಳೆಗುಂದಿತಾ ಜೆಡಿಎಸ್?

ಚುನಾವಣೆಗಳಲ್ಲಿ ಸಾಲು ಸಾಲು ಸೋಲು- ಭದ್ರಕೋಟೆಯಲ್ಲೇ ಜೆಡಿಎಸ್ ಅಭದ್ರ- ನಾಯಕರ ಕಿತ್ತಾಟದಿಂದ ಪಕ್ಷ ಛಿದ್ರ!

295

Get real time updates directly on you device, subscribe now.

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ತನ್ನ ಶಕ್ತಿ ಕಳೆದುಕೊಳ್ಳುತ್ತಿದೆಯಾ? ಪಕ್ಷದಲ್ಲಿನ ನಾಯಕರ ಆಂತರಿಕ ಕದನದಿಂದ ಚುನಾವಣೆಗಳಲ್ಲಿ ಸೋಲಿನ ಕಹಿ ಅನುಭವಿಸುವಂತಾಗಿದೆಯಾ? ಜೆಡಿಎಸ್ ಭದ್ರ ಕೋಟೆ ಎನಿಸಿರುವ ಕ್ಷೇತ್ರದಲ್ಲೇ ಜೆಡಿಎಸ್ ಮಕಾಡೆ ಮಲಗುತ್ತಿರುವುದು ಯಾಕೆ? ಇಂಥ ಪ್ರಶ್ನೆಗಳನ್ನು ಬೆನ್ನತ್ತಿ ಹೊರಟಾಗ ಒಂದಷ್ಟು ಸತ್ಯವಾದ ವಿಚಾರಗಳನ್ನು ಜೆಡಿಎಸ್ ಕಾರ್ಯಕರ್ತರೇ ಬಿಚ್ಚಿಡುತ್ತಿದ್ದಾರೆ.
ಹೌದು, ಜೆಡಿಎಸ್ ತುಮಕೂರು ಜಿಲ್ಲೆಯಲ್ಲಿ ಪ್ರಬಲವಾಗಿರುವ ಪಕ್ಷ, ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳಿಗಿಂತ ಜೆಡಿಎಸ್ ಪಕ್ಷದಿಂದ ಹೆಚ್ಚು ಎಂಎಲ್ಎಗಳು ಆಯ್ಕೆಯಾಗುತ್ತಿದ್ದರು, ಆದರೆ ಕಳೆದ ವಿಧಾಸಭೆ ಚುನಾವಣೆಯಿಂದ ಜೆಡಿಎಸ್ ತನ್ನ ಶಕ್ತಿ ಕಳೆದುಕೊಂಡಂತೆ ಕಾಣುತ್ತಿದೆ, ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ವರಿಷ್ಠ ಹಾಗೂ ಮುತ್ಸದ್ಧಿ ರಾಜಕಾರಣಿ ಹೆಚ್.ಡಿ. ದೇವೇಗೌಡರೇ ಸೋಲುವಂತಾಯಿತು, ಅದಾದ ನಂತರ ಬಿ.ಸತ್ಯನಾರಾಯಣ್ ಅವರ ನಿಧನದಿಂದ ತೆರವಾಗಿದ್ದ ಶಿರಾ ಉಪ ಚುನಾವಣೆಯಲ್ಲೂ ಜೆಡಿಎಸ್ ಕಮಾಲ್ ಮಾಡಲೇ ಇಲ್ಲ, ನಂತರ ಎದುರಾದ ಎಂಎಲ್ಸಿ ಚುನಾವಣೆಯಲ್ಲೂ ಜೆಡಿಎಸ್ ಅಭ್ಯರ್ಥಿ ಅನಿಲ್ ಕುಮಾರ್ ಸೋಲಿನ ಕಹಿ ಅನುಭವಿಸುವಂತಾಯಿತು, ಈ ಎಲ್ಲಾ ಸೋಲಿಗೆ ಕಾರಣ ಪಕ್ಷದಲ್ಲಿನ ಭಿನ್ನಾಭಿಪ್ರಾಯ ಹಾಗೂ ನಾಯಕರ ಒಣ ಪ್ರತಿಷ್ಠೆ ಮತ್ತು ಯಾರನ್ನೋ ಗೆಲ್ಲಿಸಿ ನಮಗೇನು ಆಗಬೇಕು ಎಂಬ ದ್ವೇಷದ ಮನೋಭಾವ.
ಇದೇ ಸ್ಥಿತಿ ಶಿರಾ ನಗರಸಭೆ ಚುನಾವಣೆಯಲ್ಲೂ ಎದುರಾಗಿದೆ, ಹೆಚ್ಚು ಸ್ಥಾನ ಗೆದ್ದು ಹಿಂದೆ ನಗರಸಭೆ ಆಡಳಿತ ನಡೆಸಿದ್ದ ಜೆಡಿಎಸ್ ಈ ಬಾರಿ ಹೆಚ್ಚು ಸ್ಥಾನ ಗೆಲ್ಲಲಾಗದೆ ಕೇವಲ 7 ಸ್ಥಾನಗಳಿಗೆ ಮಾತ್ರ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಜೆಡಿಎಸ್ ಭದ್ರಕೋಟೆಯಾಗಿದ್ದ ಶಿರಾದಲ್ಲಿ ಅಭ್ಯರ್ಥಿಗಳು ಸೋಲಲು ಹಲವು ಕಾರಣಗಳಿವೆ, ಅದರಲ್ಲಿ ಮುಖ್ಯವಾಗಿ ಮುಖಂಡರಲ್ಲಿನ ಒಗ್ಗಟ್ಟಿನ ಕೊರತೆ, ಚುನಾವಣೆ ಬಂದಾಗ ಮುಖಂಡರು ಒಗ್ಗಟ್ಟಾಗಿ ಕಾರ್ಯತಂತ್ರ ರೂಪಿಸುವ ಮೂಲಕ ಮತದಾರನ ಮುಟ್ಟುವ ಕೆಲಸ ಮಾಡಬೇಕು, ಆದರೆ ಈ ಕೆಲಸ ಆಗಲೇ ಇಲ್ಲ, ಹಾಗೇ ನೋಡಿದ್ರೆ ಶಿರಾದಲ್ಲಿ ಜೆಡಿಎಸ್ಗೆ ಪ್ರಬಲ ನಾಯಕರೇ ಇಲ್ಲವಾಗಿರುವುದು ಮಾತ್ರ ವಿಪರ್ಯಾಸ.
ಇನ್ನು ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪಾಲಿಗೆ ಜೆಡಿಎಸ್ ಮುಖಂಡರೇ ಕಂಟಕವಾದರು, ಕೆಲವು ವಾರ್ಡ್ ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸಲು ಕುತಂತ್ರ ಮಾಡಿದ್ದು ಈಗ ಗುಟ್ಟಾಗೇನು ಉಳಿದಿಲ್ಲ, ಜೊತೆಗೆ ಪಕ್ಷದಲ್ಲಿನ ಮುಖಂಡರಲ್ಲಿನ ಹೊಂದಾಣಿಕೆ ಕೊರತೆಯಿಂದ ಶಿರಾ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಉತ್ತಮ ಸಾಧನೆ ಮಾಡಲಾಗದೆ ನಗರಸಭೆ ಚುಕ್ಕಾಣಿ ಹಿಡಿಯುವುದನ್ನು ಮಿಸ್ ಮಾಡಿಕೊಂಡಿದೆ.
ಶಿರಾ ಜೆಡಿಎಸ್ ನಲ್ಲಿನ ಆಂತರಿಕ ಕಚ್ಚಾಟ, ಒಗ್ಗಟ್ಟಿನ ಕೊರತೆಯನ್ನೇ ಕಾಂಗ್ರೆಸ್ ಲಾಭವಾಗಿ ಬಳಕೆ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಜೆಡಿಎಸ್ ಗೆ ದೊಡ್ಡ ಹೊಡೆತ ಕೊಡುವುದಕ್ಕೆ ಸಿದ್ಧತೆ ನಡೆಸಿದೆ, ನಮ್ಮ ಮುಖಂಡರ ಒಣ ಪ್ರತಿಷ್ಟೆ, ಕಾಲೆಳೆಯುವ ಕುತಂತ್ರದಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ, ಉಪ ಚುನಾವಣೆಯಲ್ಲಿ ಸೋತಾಗಿದೆ, ನಗರಸಭೆ ಚುನಾವಣೆಯಲ್ಲಿ ಎರಡಂಕಿ ದಾಟಲಾಗಿಲ್ಲ, ಇನ್ನಾದರೂ ಮುಖಂಡರು ಪಕ್ಷ ಸಂಘಟನೆಗೆ ಮುಂದಾಗಬೇಕು, ಜೆಡಿಎಸ್ ವರಿಷ್ಠರು ಶಿರಾ ಜೆಡಿಎಸ್ನ ಸ್ಥಿತಿ ಅರಿತು ಪಕ್ಷ ಉಳಿಸುವ ಕೆಲಸ ಮಾಡಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಾರುಪತ್ಯ ಸಾಧಿಸಲಿದೆ, ಎಲ್ಲಾ ಚುನಾವಣೆಗಳಲ್ಲೂ ಗೆದ್ದು ಜೆಡಿಎಸ್ಗೆ ಹೊಡೆತ ನೀಡಲಿದೆ ಎಂದು ಜೆಡಿಎಸ್ ಕಾರ್ಯಕರ್ತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಶಿರಾ ಒಂದೇ ಅಲ್ಲ, ಇಡೀ ಜಿಲ್ಲೆಯಲ್ಲಿ ಜೆಡಿಎಸ್ ಕಳೆಗುಂದಿದೆ, ಆಲದ ಮರದಂತಿದ್ದ ಪಕ್ಷದ ರೆಂಬೆ ಕೊಂಬೆಗಳೇ ಮುರಿದು ಬೀಳುತ್ತಿವೆ, ಕುಮಾರಸ್ವಾಮಿ ಮತ್ತು ದೇವೇಗೌಡರು ಪಕ್ಷದಲ್ಲಿ ಇರುವ ಕುತಂತ್ರಿಗಳು, ಸಮಯಸಾಧಕರನ್ನು ಹೊರಗಟ್ಟಿ ಪಕ್ಷ ಸಂಘಟನೆ ಮಾಡಿ ಕಾರ್ಯಕರ್ತರನ್ನು ಗಟ್ಟಿಗೊಳಿಸುವ ನಾಯಕರನ್ನು ಉಳಿಸಿಕೊಂಡಾಗ ಮಾತ್ರ ಪಕ್ಷ ಉಳಿಯಲಿದೆ, ಇಲ್ಲವಾದಲ್ಲಿ ಸರಣಿ ಸೋಲಿನ ಜೊತೆ ಪಕ್ಷ ಹೇಳ ಹೆಸರಿಲ್ಲದಂತೆ ಮುಗಿದು ಹೋಗಲಿದೆ ಎಂದು ಅಪ್ಪಟ ಜೆಡಿಎಸ್ ಕಾರ್ಯಕರ್ತರು ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ.

Get real time updates directly on you device, subscribe now.

Comments are closed.

error: Content is protected !!