ವಿದ್ಯಾರ್ಥಿ ಮೇಲೆ ಅಡುಗೆ ಭಟ್ಟನಿಂದ ಹಲ್ಲೆ- ಕ್ರಮಕ್ಕೆ ಆಗ್ರಹ

427

Get real time updates directly on you device, subscribe now.

ಕುಣಿಗಲ್: ಹಾಸ್ಟೆಲ್ ನಲ್ಲಿ ನೀಡುತ್ತಿರುವ ಆಹಾರ, ಚಹಾ ಗುಣಮಟ್ಟದ ಬಗ್ಗೆ ಪ್ರಶ್ನಿಸಿದ ವಿದ್ಯಾರ್ಥಿಗೆ ದಿನಗೂಲಿ ಅಡುಗೆ ಕೆಲಸ ಮಾಡುವವನ ಕಡೆಯವರು ರಸ್ತೆಯಲ್ಲಿ ಮನಬಂದಂತೆ ಹಲ್ಲೆ ನಡೆಸಿ ನಂತರ ಕ್ಷಮೆಯಾಚಿಸಿರುವ ಘಟನೆ ನಡೆದಿದೆ.
ಪಟ್ಟಣದ 21ನೇ ವಾರ್ಡ್ ನಲ್ಲಿರುವ ಸಮಾಜಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಅಡುಗೆ ಕೆಲಸ ಮಾಡುವ ಕೆಲವರನ್ನು ದಿನಗೂಲಿ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಸಾಂಬಾರ್ ಗೆ ಉಪ್ಪು ಹೆಚ್ಚಿಗೆ ಹಾಕಿದ್ದನ್ನು ಅಂದು ಯಾರೂ ಸರಿಯಾಗಿ ಊಟ ಮಾಡಲಿಲ್ಲ, ಈ ಬಗ್ಗೆ ವಿದ್ಯಾರ್ಥಿ ಅರುಣ ಎಂಬಾತ ಪ್ರಶ್ನಿಸಿದ್ದಕ್ಕೆ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಹರೀಶ್ ಎಂಬಾತ ಕೊಟ್ಟಿದ್ದನ್ನು ತಿನ್ನಬೇಕು ಎಲ್ಲರೂ ಸುಮ್ಮನೆ ಇರುವಾಗ ನಿನ್ನದೇನು ಎಂದು ಎಚ್ಚರಿಕೆ ನೀಡಿದ್ದು, ಬುಧವಾರ ಚಹಾ ಗುಣಮಟ್ಟ ಸರಿ ಇಲ್ಲ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಅರುಣ ಕಾಲೇಜಿಗೆ ಹೋಗುವಾಗ ಹರೀಶ್ ನ ಕಡೆಯವರು ಎನ್ನಲಾದ ಮೂವರು ಯುವಕರು, ಅರುಣನನ್ನು ಅಡ್ಡಗಟ್ಟಿ ಹರೀಶ್ ಗೆ ಸುಮ್ಮನೆ ತೊಂದರೆ ಕೊಟ್ಟರೆ ಸರಿಯಲ್ಲ ಎಂದು ಹೇಳಿ ಮನಬಂದಂತೆ ಥಳಿಸಿ ಪರಾರಿಯಾಗಿದ್ದಾರೆ.
ಒದೆ ತಿಂದ ವಿದ್ಯಾರ್ಥಿ, ಗುರುವಾರ ಬೆಳಗ್ಗೆ ಘಟನೆಯನ್ನು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿ ಮುಖಂಡರಾದ ಕೇಶವ್, ರವೀಶ್ ಅವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಹಾಸ್ಟೆಲ್ ಗೆ ಆಗಮಿಸಿದ ವಿದ್ಯಾರ್ಥಿ ಮುಖಂಡರು, ಹರೀಶ್ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಾರ್ಡನ್ ಹನುಮಂತಪ್ಪನವರಿಗೆ ಮನವಿ ನೀಡಿ, ಹರೀಶ್ ನ ಕಡೆಯಿಂದ ಹಲ್ಲೆ ಮಾಡಿದವರ ಮೇಲೆ ಪೊಲೀಸರಿಗೆ ದೂರು ನೀಡಲು ಮುಂದಾದಾಗ ಸ್ಥಳಕ್ಕೆ ಆಗಮಿಸಿದ ಹಲ್ಲೆ ನಡೆಸಿದ ಯುವಕರು, ಮುಖಂಡರ ಸಮ್ಮುಖದಲ್ಲಿ ಮುಂದಿನ ದಿನಗಳಲ್ಲಿ ಈ ರೀತಿ ಆಗುವುದಿಲ್ಲ ಎಂದು ಕ್ಷಮೆಯಾಚಿಸಿದ ಮೇರೆಗ ಪ್ರಕರಣ ತಿಳಿಗೊಂಡಿತು. ಇತ್ತ ಸಮಾಜಕಲ್ಯಾಣ ಇಲಾಖಾಧಿಕಾರಿಗಳು ದಿನಗೂಲಿ ನೌಕರನ ವೇತನ ತಡೆ ಹಿಡಿದು ಕೆಲಸದಿಂದ ಅಮಾನತು ಮಾಡುವ ಭರವಸೆ ನೀಡಿದ ಮೇರೆಗೆ ಪ್ರಕರಣ ಸುಖಾಂತ್ಯ ಕಂಡಿದೆ.

Get real time updates directly on you device, subscribe now.

Comments are closed.

error: Content is protected !!