ಹುಳಿಯಾರು: ಬೋರನಕಣಿವೆ ಜಲಾಶಯದಿಂದ ಕೆಂಕೆರೆ, ಹೊಯ್ಸಲಕಟ್ಟೆ, ಗಾಣಧಾಳು ಹಾಗೂ ಬರಕನಹಾಲ್ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಹುಳಿಯಾರು ಪಟ್ಟಣಕ್ಕೆ ಕೊಡುತ್ತಿರುವ ಮಾದರಿಯಲ್ಲಿ ಶುದ್ಧ ನೀರನ್ನು ಕೊಡಲಾಗುವುದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಹುಳಿಯಾರು ಸಮೀಪದ ತಿಮ್ಲಾಪುರ ಕೆರೆ ಹೇಮಾವತಿ ನದಿ ನೀರಿನಿಂದ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಸಚಿವರು ಬಾಗಿನ ಅರ್ಪಿಸಿ ಮಾತನಾಡಿ, ಸಣ್ಣ ನೀರಾವರಿ ಇಲಾಖೆಯಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 122 ಕೆರೆಗೆ ಒಟ್ಟು 260 ಕೋಟಿ ರೂ. ತಿಪಟೂರು ತಾಲ್ಲೂಕಿಗೆ 200 ಕೋಟಿ ರೂ. ಅನುದಾನ ನೀಡಲಾಗಿದೆ. ಮುಂದೆ ತುರುವೇಕೆರೆ ತಾಲ್ಲೂಕಿಗೆ 80 ಕೋಟಿ ರೂ. ಬೆಳ್ಳಾವಿ, ಕೋರಾ, ಕಳ್ಳಂಬೆಳ್ಳ ಹೋಬಳಿಗೆ 260 ಕೋಟಿ ರೂ. ಮಂಜೂರು ಮಾಡಿಸಿರುತ್ತೇನೆ ಎಂದರು.
ಇದೇ ಹೇಮಾವತಿ ನೀರಿತ್ತು, ಇದೇ ವ್ಯವಸ್ಥೆಯಿತ್ತು, ಆದರೆ ತುಮಕೂರು ಜಿಲ್ಲೆ ನೀರು ನೋಡುತ್ತಿರಲಿಲ್ಲ. ಪ್ರತಿ ಸಲ ನೀರಿಗಾಗಿ ಹೋರಾಟ, ಗಲಾಟೆ ನಡೆಯುತ್ತಿತ್ತು. ಆದರೆ 3 ವರ್ಷಗಳಿಂದ ಜಿಲ್ಲೆಯಲ್ಲಿ ನೀರಿಗಾಗಿ ಒಂದೇ ಒಂದು ಹೋರಾಟ ನಡೆದಿಲ್ಲ. ಆ ರೀತಿ ಜಿಲ್ಲೆಯಲ್ಲಿ ನೀರು ಹರಿಸಿದ್ದೇನೆ, ಮತ ನೀಡಿ ಗೆಲ್ಲಿಸಿದ ಮತದಾರರು ಹೆಮ್ಮೆ ಪಡುವಂತೆ ಆಡಳಿತ ಮಾಡುತ್ತಿರುವ ತೃಪ್ತಿ ನನಗಿದೆ ಎಂದು ತಿಳಿಸಿದರು.
ಹುಳಿಯಾರು ಮತ್ತು ಚಿಕ್ಕನಾಯಕನಹಳ್ಳಿ ಎಪಿಎಂಸಿಗಳಿಗೆ ತಲಾ ಎರಡೆರಡು ಕೋಟಿ ರೂ. ಮಂಜೂರು ಮಾಡಿಸಿದ್ದೇನೆ, ನೀರು ಮತ್ತು ಕರೆಂಟ್ ಕೊಟ್ಟರೆ ನಮ್ಮ ಹಳ್ಳಿಯ ಜನ ನೆಮ್ಮದಿಯಿಂದ ಜೀವನ ನಡೆಸುತ್ತಾರೆ. ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ನೀರು ಮತ್ತು ವಿದ್ಯುತ್ ಗೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡುತ್ತಿದ್ದೇನೆ. ಬಗರ್‌ಹುಕುಂ ಜಮೀನು ಮಂಜೂರು ಮಾಡುವುದೊಂದು ಬಾಕಿ ಉಳಿದಿದೆ ಎಂದು ತಿಳಿಸಿದರು.
ಪಪಂ ಅಧ್ಯಕ್ಷ ಕೆ.ಎಂ.ಎಲ್ ಕಿರಣ್, ಉಪಾಧ್ಯಕ್ಷೆ ಶೃತಿಸನತ್, ಸದಸ್ಯರುಗಳಾದ ಹೇಮಂತ್ ಕುಮಾರ್, ಬೀಬೀಫಾತೀಮಾ, ಟಿ.ಸಂಧ್ಯ, ಚಂದ್ರಶೇಖರರಾವ್, ರತ್ನಮ್ಮ, ಜಿಪಂ ಮಾಜಿ ಸದಸ್ಯೆ ಮಂಜುಳಮ್ಮ, ತಾಪಂ ಮಾಜಿ ಅಧ್ಯಕ್ಷ ಕೆಂಕೆರೆನವೀನ್, ಹೊಸಹಳ್ಳಿಜಯಣ್ಣ, ನಿರಂಜನ್, ಕೇಶವಮೂರ್ತಿ, ಹರ್ಷ, ಕೆಂಕೆರೆ ಗ್ರಾಪಂ ಅಧ್ಯಕ್ಷ ಕೆ.ಸಿ.ವಿಕಾಸ್, ದೊಡ್ಡಬಿದರೆ ಗ್ರಾಪಂ ಅಧ್ಯಕ್ಷ ರಂಗಸ್ವಾಮಿ, ಬಿಜೆಪಿ ಮುಖಂಡರಾದ ಬುಕ್ಕಾಪಟ್ಟಣ ಮಂಜುನಾಥ್, ಬರಕನಹಾಲ್ ವಿಶ್ವನಾಥ್, ನಂದಿಹಳ್ಳಿಶಿವಣ್ಣ, ಅಶೋಕ್ ಬಾಬು, ರಾಮಣ್ಣ, ಶಿವರಾಜ್, ಬಸವರಾಜು ಮತ್ತಿತರರು ಇದ್ದರು.
ಬೋರನಕಣಿವೆಯಿಂದ ಗ್ರಾಮಗಳಿಗೆ ಕುಡಿಯುವ ನೀರು
Get real time updates directly on you device, subscribe now.
Comments are closed.