ತುಮಕೂರು: ಸಾಹಿತ್ಯದ ಬರವಣಿಗೆ ಬದ್ಧತೆಯಿಂದ ಸಾಗಿದಾಗ ಮಾತ್ರ ಪವಿತ್ರತೆ ಕಾಣಲು ಸಾಧ್ಯ, ಉತ್ತಮ ವಿಚಾರಗಳನ್ನು ಸಾಹಿತ್ಯದ ಮೂಲಕ ಜನರಿಗೆ ಮುಟ್ಟಿಸುವ ಕಾಯಕವನ್ನು ಲೇಖಕ ಬಹಳ ಸಮರ್ಥವಾಗಿ ಮಾಡಬೇಕು, ಈ ನೆಲೆಯಲ್ಲಿ ಉತ್ತಮ ಪುಸ್ತಕಗಳು ಸಮಾಜದಲ್ಲಿ ಮೂಡಿಬರಬೇಕು, ಈ ಪುಸ್ತಕಗಳು ಜನರಿಗೆ ಸಾರ್ವಕಾಲಿಕ ಸತ್ಯ ಮನದಟ್ಟು ಮಾಡಿಕೊಡಬೇಕು. ಸಾಹಿತ್ಯದ ಚಿತ್ತ ಚಾರಿತ್ರ್ಯ ನಿರ್ಮಾಣದತ್ತ ಸಾಗಬೇಕು ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ನಗರದ ವಿಜ್ಞಾನ ಕಾಲೇಜು, ತುಮಕೂರು ವಿಶ್ವವಿದ್ಯಾಲಯ, ನ್ಯೂಸ್ ಕರ್ನಾಟಕ ಡಾಟ್ ಕಾಮ್ ಮಂಗಳೂರು ಹಾಗೂ ಎಸ್‌ಎಲ್ಎನ್ ಪಬ್ಲಿಕೇಷನ್ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಖ್ಯಾತ ಅಂಕಣಕಾರರಾದ ಡಾ.ಪ್ರಿಯಾಂಕ ಎಂ.ಜಿ ಅವರ ಕಾಲ ನಾ..! ಮತ್ತು ಹದಿಹರೆಯದವರ ನಿತ್ಯ ಗೊಂದಲಗಳ ಗುಟ್ಟು ಎಂಬ ಎರಡು ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಒಬ್ಬ ವ್ಯಕ್ತಿಯ ಶ್ರೇಷ್ಠ ವ್ಯಕ್ತಿತ್ವಕ್ಕೆ ಸಕಾರಾತ್ಮಕ ಚಿಂತನೆಗಳು ಅತ್ಯಗತ್ಯ, ಜೀವನ ಒಂದು ಸಂಹಿತೆ ಎಂಬುದನ್ನು ನಾವು ಬಾಲ್ಯದಲ್ಲೇ ಮಕ್ಕಳಿಗೆ ಪರಿಚಯಿಸಬೇಕು, ಜೀವನವನ್ನು ಎಂದಿಗೂ ಲಘುವಾಗಿ ಪರಿಗಣಿಸಬಾರದು, ಸಾಹಿತ್ಯಕ್ಕೆ ಅದ್ಬುತವಾದ ಶಕ್ತಿಯಿದೆ, ಕುವೆಂಪು, ಡಿವಿಜಿ, ಟಿ.ಎಸ್.ವೆಂಕಣ್ಣಯ್ಯ, ಮಾಸ್ತಿ ಮುಂತಾದ ಮಹಾತ್ಮರು ತಮ್ಮ ಸಾಹಿತ್ಯದ ಮೂಲಕ ನೀಡಿದ ಜೀವನ ಸಂದೇಶಗಳು ನಾಗರಿಕತೆಯನ್ನು ಅತ್ಯುನ್ನತ ಮಟ್ಟಕ್ಕೆ ತಲುಪುವಂತೆ ಮಾಡಿವೆ, ಹಾಗಾಗಿ ಅರ್ಥವಿಲ್ಲದ ದುರ್ಬಲ ವಿಷಯಗಳ ಪ್ರಚಾರಕ್ಕೆ ಹೆಚ್ಚು ಆದ್ಯತೆ ನೀಡಬಾರದು ಎಂದರು.
ಜನರಲ್ಲಿ ಸಾಹಿತ್ಯದ ಆಸಕ್ತಿ ಇಲ್ಲವೆಂಬುದು ಸುಳ್ಳಿನ ಸಂಗತಿಯಾಗುತ್ತದೆ, ಆದ್ದರಿಂದ ಅವರಿಗೆ ನೈತಿಕ ಮತ್ತು ಶ್ರೇಷ್ಠ ಮಟ್ಟದ ಚಿಂತನೆಗಳನ್ನು ಸಾಹಿತ್ಯದ ಮೂಲಕ ಪರಿಚಯಿಸಿ ಕೊಡಬೇಕು, ವ್ಯಕ್ತಿ ಯಲ್ಲಿ ನೈತಿಕ ಮೌಲ್ಯಗಳಿಲ್ಲದಿದ್ದರೆ ಶ್ರೀಮಂತಿಕೆಯನ್ನು ಆನಂದಿಸಲಾರ, ಹಾಗೆಯೇ ಬಡತನವನ್ನು ಸಹಿಸಲಾರ, ಬಯಕೆಗಳ ಈಡೇರಿಕೆಗೆ ಅನೈತಿಕ ಮಾರ್ಗ ಸಲ್ಲದು, ಧರ್ಮ, ನೀತಿ ಹಾಗೂ ಮೌಲ್ಯ ಆಧಾರಿತವಾದ ನೆಲೆಯಲ್ಲಿ ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವುದರ ಮೂಲಕ ಪ್ರತಿಯೊಬ್ಬರು ಸಮಾಜದ ಸ್ವಾಸ್ಥ್ಯಕ್ಕೆ ಕಾರಣವಾಗಬೇಕು, ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಮಾತ್ರ ನಾವು ಹಕ್ಕನ್ನು ಪಡೆಯಲು ಅರ್ಹರಾಗುತ್ತೇವೆ, ನೈತಿಕ ಮೌಲ್ಯಗಳ ಚೌಕಟ್ಟಿನಲ್ಲಿ ನಮ್ಮ ಜೀವನ ಸಾಗಬೇಕು, ಈ ನೆಲೆಯಲ್ಲಿ ಲೇಖಕಿ ಡಾ.ಪ್ರಿಯಾಂಕ ಎಂ.ಜಿ. ಸಾಹಿತ್ಯದ ಮೂಲಕ ಉತ್ತಮ ಚಿಂತನೆಗಳನ್ನು ನಡೆಸಿದ್ದಾರೆ ಎಂದರು.
ಕೃತಿಗಳನ್ನು ಲೋಕಾರ್ಪಣೆ ಮಾಡಿದ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಡಾ.ವೈ.ಎಸ್.ಸಿದ್ದೇಗೌಡ ಮಾತನಾಡಿ, ಲೇಖಕಿ ತಮ್ಮ ಕೃತಿಗಳ ಮೂಲಕ ಸಮಾಜಕ್ಕೆ ಆರೋಗ್ಯಕರ ಚಿಂತನೆಗಳನ್ನು ನೀಡಿದ್ದಾರೆ, ಮೌಲ್ಯ, ಶಿಕ್ಷಣಕ್ಕೆ ಹೆಚ್ಚಿನ ಮನ್ನಣೆ ನೀಡುವ ಮೂಲಕ ಯುವ ಪೀಳಿಗೆಯಲ್ಲಿ ಆತ್ಮವಿಶ್ವಾಸ ಇಮ್ಮಡಿಗೊಳಿಸಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ತುಮಕೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ಕೆ.ಶಿವಚಿತ್ತಪ್ಪ ಮಾತನಾಡಿ, ಸಾಹಿತ್ಯದ ಅಧ್ಯಯನ ಮನುಷ್ಯನ ಬದುಕಿಗೆ ವಿಶಿಷ್ಟ ರೀತಿಯ ಸಾರ್ಥಕತೆ ತಂದು ಕೊಡುತ್ತದೆ, ವೈಜ್ಞಾನಿಕ ಮತ್ತು ವೈಚಾರಿಕತೆಯ ನೆಲೆಯಲ್ಲಿನ ವಿವೇಚನೆಗೆ ಹೆಚ್ಚಿನ ಆದ್ಯತೆ ಈ ಕೃತಿಗಳಲ್ಲಿ ಲೇಖಕಿ ನೀಡಿದ್ದಾರೆ ಎಂದರು.
ಕಾಲ ನಾ…! ಕೃತಿ ಕುರಿತು ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ಲೋಲಾಕ್ಷಿ ಎನ್.ಕೆ. ಅವರು ಈ ಕೃತಿಯು ಪ್ರಮುಖವಾಗಿ ಆರೋಗ್ಯ, ಶಿಕ್ಷಣ ಮತ್ತು ಬಡತನದ ವಿಷಯಗಳ ವಿವೇಚನೆಗೆ ಹೆಚ್ಚಿನ ಆದ್ಯತೆ ನೀಡಿದೆ, ಸಮಕಾಲಿನ ಸಮಾಜದ ತಲ್ಲಣಗಳು ಈ ಕೃತಿಯಲ್ಲಿ ಸೊಗಸಾಗಿ ಚಿತ್ರಿತವಾಗಿದೆ ಎಂದರು. ಹದಿಹರೆಯದವರ ನಿತ್ಯ ಗೊಂದಲಗಳ ಗುಟ್ಟು ಎಂಬ ಕೃತಿಯನ್ನು ಕುರಿತು ಮಾತನಾಡಿದ ಯುವ ವಿಮರ್ಶಕ ಡಾ.ಡಿ.ಸಿ.ಚಿತ್ರಲಿಂಗಯ್ಯ ಅವರು ಮನೋವಿಜ್ಞಾನದ ನೆಲೆಯಲ್ಲಿ ಲೇಖಕಿ ಹದಿಹರೆಯದವರ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಲ್ಲದೆ ಶಿಕ್ಷಕರ ಮತ್ತು ಪೋಷಕರ ಮಾರ್ಗದರ್ಶನ ಯುವ ಪೀಳಿಗೆಗೆ ಅತ್ಯಗತ್ಯ ಎಂಬುದನ್ನು ತಿಳಿಸುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ನಾಗರಾಜ ಇಳೇಗುಂಡಿ ಅವರು ಸಾಮಾಜಿಕ ಕಳಕಳಿಗೆ ಈ ಕೃತಿಗಳು ಕನ್ನಡಿ ಹಿಡಿದಿವೆ, ಲೇಖಕಿ ಸಮಾಜದ ನಾನಾ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ಸಮಸ್ಯೆಗಳ ಬಗ್ಗೆ ಸೂಕ್ತವಾದ ಪರಿಹಾರ ನೀಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾ.ಹ.ರಮಾಕುಮಾರಿ ಮಾತನಾಡಿ, ಜನ ಮತ್ತು ಸಾಹಿತಿಗಳ ನಡುವೆ ಅಂತರವಿರಬಾರದು, ಇತ್ತೀಚಿನ ಯುವ ಪೀಳಿಗೆಯು ಸಮಾಜಮುಖಿ ಚಿಂತನೆಯತ್ತ ಸಾಗಬೇಕು, ಹಾಗೆಯೇ ಮನಸ್ಸು ಮಲಿನ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಕುಮಾರಸ್ವಾಮಿ ಬೆಜ್ಜಿಹಳ್ಳಿ, ಡಾ.ಲೋಕೇಶ್ ಬಾಬು, ವಲೇರಿಯನ್ ಡಾಲ್ಮೇಡ, ಶಾಲಿನಿ, ಉಮೇಶ್, ಲೇಖಕಿ ಡಾ.ಪ್ರಿಯಾಂಕ ಎಂ.ಜಿ., ಅನ್ವಿತಾ, ಬ್ರಾಹ್ಮಿ ಇತರರು ಇದ್ದರು.
ಪುಸ್ತಕಗಳು ಸತ್ಯ ಮನದಟ್ಟು ಮಾಡಿಕೊಡಬೇಕು: ಸ್ವಾಮೀಜಿ
Get real time updates directly on you device, subscribe now.
Next Post
Comments are closed.