ಕಲೆಗೆ ಜೀವ ತುಂಬಿದ್ದು ಶಿಲ್ಪಿ ಜಕಣಾಚಾರಿ

ಶಿಲ್ಪಕಲೆ ಭಾರತೀಯ ಸಂಸ್ಕೃತಿಯ ಜೀವಾಳ: ಕೃಷ್ಣಮೂರ್ತಿ

212

Get real time updates directly on you device, subscribe now.

ತುಮಕೂರು: ವಿಶ್ವದ ವಿವಿಧ ಸಂಸ್ಕೃತಿಗಳ ಸಾಲಿನಲ್ಲಿ ಭಾರತೀಯ ಸಂಸ್ಕೃತಿಯು ವಿಶಿಷ್ಟ ಸ್ಥಾನ ಹೊಂದಿದ್ದು, ಶಿಲ್ಪಕಲೆಯು ಭಾರತೀಯ ಸಂಸ್ಕೃತಿಯ ಜೀವಾಳ ಎಂದು ನಿವೃತ್ತ ಪ್ರಾಚಾರ್ಯ ಡಾ.ಕೆ.ವಿ. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿಯ ಸಹಯೋಗದಲ್ಲಿ ನಡೆದ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಅಮರ ಶಿಲ್ಪಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ವಿಶ್ವಕರ್ಮ ಸಮುದಾಯವು ಪಂಚಕರ್ಮಗಳಾದ ಶಿಲ್ಪಿ, ಸ್ವರ್ಣಕಾರ, ಕಂಚುಗಾರ, ಬಡಗಿ ಹಾಗೂ ಕಮ್ಮಾರ ಕಸುಬುಗಳನ್ನು ಕೈಗೊಂಡು ನಾಗರಿಕತೆ ಹಾಗೂ ಸಂಸ್ಕೃತಿಯನ್ನು ಅಭಿವೃದ್ಧಿ ಪಡಿಸುತ್ತಾ ಬಂದಿದೆ. ಶಿಲ್ಪಿ ಜಕಣಾಚಾರಿಯು ಶಿಲ್ಪಕಲೆಯಲ್ಲಿ ಅದ್ವಿತೀಯ ಸಾಧನೆ ಮಾಡಿ ನಮ್ಮ ಸಂಸ್ಕೃತಿಯನ್ನು ಉತ್ತುಂಗ ಸ್ಥಾನಕ್ಕೇರುವಂತೆ ಮಾಡಿದ್ದಾರೆ ಎಂದು ತಿಳಿಸಿದರು.
ವಿಶ್ವಕರ್ಮ ಸಮುದಾಯದ ಮುಖಂಡ ನಾಗರಾಜ್‌ ಮಾತನಾಡಿ, ಒಬ್ಬ ಶಿಲ್ಪಿಯು ತಾಯಿಯಂತೆ ಒಂದು ಕಲ್ಲನ್ನು ಪೋಷಿಸಿ, ಅದಕ್ಕೊಂದು ರೂಪ ಕೊಟ್ಟು ಲೋಕಾರ್ಪಣೆ ಮಾಡುತ್ತಾನೆ. ಉನ್ನತ ಕೌಶಲ್ಯ ಹೊಂದಿರುವ ಅದೆಷ್ಟೋ ಮಂದಿ ಶಿಲ್ಪಿಗಳು ನಮ್ಮ ನಾಡಿನಲ್ಲಿದ್ದು, ಅವಕಾಶಗಳಿಂದ ವಂಚಿತರಾಗಿದ್ದಾರೆ. ಶಿಲ್ಪಿ, ಬಡಗಿ, ಕಮ್ಮಾರ ಕಸುಬನ್ನು ಅನುಸರಿಸುತ್ತಿರುವ ಹಾಗೂ ಅವಕಾಶಗಳಿಂದ ವಂಚಿತರಾಗಿರುವವರಿಗೆ ಸಮಾಜದಲ್ಲಿ ಅವಕಾಶ ಕಲ್ಪಿಸಿ ಅವರು ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಅಭಿವೃದ್ಧಿ ಹೊಂದುವಂತೆ ಮಾಡಬೇಕು ಎಂದರು.
ಮಹಾನಗರ ಪಾಲಿಕೆ ಉಪ ಆಯುಕ್ತ ಮಹೇಶ್‌ ಮಾತನಾಡಿ, ಅಮರ ಶಿಲ್ಪಿ ಜಕಣಾಚಾರಿಯ ಸಂಸ್ಮರಣಾ ದಿನವನ್ನು ಆಚರಿಸುವ ಮೂಲಕ ವಿಶ್ವಕರ್ಮ ಸಮುದಾಯದ ಪಂಚ ಕರ್ಮಚಾರಿಗಳಿಗೆ ಗೌರವ ಹಾಗೂ ಅಭಿನಂದನೆ ಸಲ್ಲಿಸಲಾಗುತ್ತಿದೆ, ಸಮಾಜದಲ್ಲಿ ವಿಶ್ವಕರ್ಮ ಸಮುದಾಯದ ಪಂಚ ವೃತ್ತಿ ನಶಿಸಿ ಹೋಗದಂತೆ ಅಭಿವೃದ್ಧಿ ಪಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್‌, ಬಿ.ವಿ.ಗಂಗರಾಜಾಚಾರ್‌, ಪಿ.ಟಿ. ನರಸಿಂಹಮೂರ್ತಿ, ಚಂದ್ರಾಚಾರ್‌, ಗಜೇಂದ್ರಚಾರ್‌ ಸೇರಿದಂತೆ ಸಮುದಾಯದ ಮುಖಂಡರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!