ಸಚಿವರಾಗುವುದಕ್ಕೆ ನಾಗೇಶ್‌ ಅರ್ಹರಲ್ಲ

ಅತಿಥಿ ಉಪನ್ಯಾಸಕರ ನಿರ್ಲಕ್ಷ್ಯಕ್ಕೆ ಸರ್ಕಾರದ ವಿರುದ್ಧ ಆಕ್ರೋಶ

372

Get real time updates directly on you device, subscribe now.

ತುಮಕೂರು: ಅತಿಥಿ ಉಪನ್ಯಾಸಕರನ್ನು ಅವಮಾನಿಸಿರುವ ಬಿ.ಸಿ.ನಾಗೇಶ್‌ ಅವರಿಗೆ ಸಚಿವ ಸ್ಥಾನ ನೀಡಿರುವುದು ಜಿಲ್ಲೆಗೆ ಅವಮಾನ ಮಾಡಿದಂತೆ, ಅಂತಹ ವ್ಯಕ್ತಿ ಸಚಿವ ಸ್ಥಾನದಲ್ಲಿರುವುದಕ್ಕೆ ಯಾವುದೇ ಅರ್ಹತೆ ಇಲ್ಲ ಎಂದು ದಲಿತ ಮುಖಂಡ ಕೊಟ್ಟಶಂಕರ್‌ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿ, ಅತಿಥಿ ಉಪನ್ಯಾಸಕರು ಇಲ್ಲದೇ ಹೋಗಿದ್ದರೆ 20 ವರ್ಷಗಳಿಂದ ಪದವಿ ಶಿಕ್ಷಣ ತರಗತಿಗಳೇ ನಡೆಯುತ್ತಿರಲಿಲ್ಲ, ತರಗತಿಗಳು ಸುಗಮವಾಗಿ ನಡೆದು ಲಕ್ಷಾಂತರ ವಿದ್ಯಾರ್ಥಿಗಳು ಪದವಿ ಪಡೆಯಲು ಕಾರಣವಾಗಿರುವ ಅತಿಥಿ ಉಪನ್ಯಾಸಕರ ಬಗ್ಗೆ ಅವಹೇಳನ ಮನಸ್ಥಿತಿ ಇರುವ ಸಚಿವರು ಇರುವುದು ದುರಾದೃಷ್ಟಕರ ಎಂದರು.
ಅತಿಥಿ ಉಪನ್ಯಾಸಕರಿಗೆ ಬೇರೆ ಉದ್ಯೋಗ ಮಾಡಲು ಅವಕಾಶವಿತ್ತಲ್ಲವೇ ಎಂದು ಪ್ರಶ್ನಿಸುವ ಶಿಕ್ಷಣ ಸಚಿವರಿಗೆ ಕನಿಷ್ಠ ವೇತನಕ್ಕೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಗೊತ್ತಿರಲಿಲ್ಲವೇ? ನ್ಯಾಯಯುತ ಬೇಡಿಕೆಯೊಂದಿಗೆ ಹೋರಾಟ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಬೇಡಿಕೆ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಬೇಕಾದವರೇ, ಹೀಯಾಳಿಸುತ್ತಿದ್ದಾರೆ ಎಂದರೆ ಹೋರಾಟವನ್ನು ಸರ್ಕಾರ ಲಘುವಾಗಿ ಪರಿಗಣಿಸುವಂತೆ ಕಾಣಿಸುತ್ತಿದೆ ಎಂದರು.
ರಾಜ್ಯದಲ್ಲಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಹೋರಾಟಕ್ಕೆ ವಿವಿಧ ಸಂಘಟನೆಗಳು, ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ, ವಿದ್ಯಾರ್ಥಿಗಳು ವ್ಯವಸ್ಥಿತ ಪಾಠ ಪ್ರವಚನಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದರು ಸಹ ಬಿಜೆಪಿ ಸರ್ಕಾರಕ್ಕೆ ಕಿವಿ, ಬಾಯಿ ಎರಡು ಇಲ್ಲದಂತೆ ಕಾಣುತ್ತಿದೆ, ಇಂತಹ ಅಂತಕರಣವಿಲ್ಲದ ಸರ್ಕಾರಕ್ಕೆ ಸರಿಯಾದ ಪಾಠ ಕಲಿಸಬೇಕಿದೆ ಎಂದು ಕರೆ ನೀಡಿದರು.
ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ಅಧ್ಯಕ್ಷ ಸುನೀಲ್ ಕುಮಾರ್‌ ಮಾತನಾಡಿ, ಕಳೆದ 22 ದಿನಗಳಿಂದ ನಡೆಯುತ್ತಿರುವ ಉಪನ್ಯಾಸಕರ ಹೋರಾಟದ ಬಗ್ಗೆ ಸರ್ಕಾರ ಗಮನ ಹರಿಸದೇ ಇರುವುದು ವಿಪರ್ಯಾಸ, ವಿದ್ಯಾರ್ಥಿಗಳು ಪಾಠ ಪ್ರವಚನವಿಲ್ಲದೆ ಪರದಾಡುತ್ತಿದ್ದು, ಸರ್ಕಾರ ಅತಿಥಿ ಉಪನ್ಯಾಸಕ ಬೇಡಿಕೆ ಈಡೇರಿಕೆಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದ ಅವರು, ಅವಹೇಳನಕಾರಿಯಾಗಿ ಮಾತನಾಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಹೋರಾಟದಲ್ಲಿ ರೇವಣಸಿದ್ದಯ್ಯ, ಭಾನುಪ್ರಕಾಶ್‌, ಛಲವಾದಿ ಶೇಖರ್‌, ರಂಜನ್‌, ಜಯಣ್ಣ, ಕೆಂಪರಾಜು, ಸುರೇಶ್‌, ಜೆ.ಸಿ.ರಂಗಧಾಮಯ್ಯ, ಅಂಜನ್ ಮೂರ್ತಿ, ಶಿವಣ್ಣತಿಮ್ಲಾಪುರ, ಚೈತ್ರ ಸೇರಿದಂತೆ ಕೊಡಿಗೇನಹಳ್ಳಿ, ಮಧುಗಿರಿ, ಮಿಡಗೇಶಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!