ಜ.04, 05 ರಂದು ಅಂಗವಿಕಲರಿಗೆ ಕೌಶ್ಯಲಾಭಿವೃದ್ಧಿ ತರಬೇತಿ

270

Get real time updates directly on you device, subscribe now.

ತುಮಕೂರು:ಬೆಂಗಳೂರಿನ ದಿ ಅಸೋಸಿಯೇಷನ್‌ ಆಫ್‌ ಪೀಪಲ್‌ ವಿತ್‌ ಡಿಸೆಬಿಲಿಟಿ ಸಂಸ್ಥೆಯ ವತಿಯಿಂದ ಜನವರಿ 04 ರಂದು ಕೊರಟಗೆರೆ ಮತ್ತು 05 ರಂದು ಪಾವಗಡ ತಾಲೂಕಿನಲ್ಲಿ ಅಂಗವಿಕಲರಿಗಾಗಿ ಉದ್ಯೋಗಾಧಾರಿತ ತರಬೇತಿ ಮತ್ತು ಪ್ಲೇಸ್‌ಮೆಂಟ್‌ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಎಪಿಡಿ ಸಂಸ್ಥೆಯ ತರಬೇತಿ ಮತ್ತು ಉದ್ಯೋಗ ವಿಭಾಗದ ವ್ಯವಸ್ಥಾಪಕರಾದ ಲೇಖಾ.ಜೆ. ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1959ರಲ್ಲಿ ಅಂಗವಿಕಲರಾದ ಹೇಮಾ ಎಂಬುವವರಿಂದ ಆರಂಭಗೊಂಡ ಎಪಿಡಿ ಸಂಸ್ಥೆ ಅಂದಿನಿಂದಲೂ ಬೆಂಗಳೂರು ನಗರವನ್ನು ಕೇಂದ್ರವಾಗಿಟ್ಟುಕೊಂಡು ಅಂಗವಿಕಲರ ಸಬಲೀಕರಣಕ್ಕೆ ಶ್ರಮಿಸುತ್ತಿದೆ. ಅಜೀಮ್‌ ಪ್ರೇಮಜಿ ಅವರ ಸಹಕಾರದೊಂದಿಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಆಂಗವಿಕಲರಿಗಾಗಿ ಕೈಗೊಳ್ಳಲಾಗಿದೆ ಎಂದರು.
ಅಂಗವಿಕಲರಿಗೆ ಸಾರ್ವಜನಿಕರಿಂದ ಅಗತ್ಯವಿರುವ ಕರುಣೆಯಲ್ಲ, ಸಹಾಯವಿಲ್ಲ, ಈ ನಿಟ್ಟಿನಲ್ಲಿ ದೈಹಿಕ ಸಾಮರ್ಥಕ್ಕೆ ಅನುಗುಣವಾಗಿ ವಿವಿಧ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡು ಅಂಗವಿಕಲರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಸಂಸ್ಥೆ ಬೆಂಗಳೂರು ನಗರದ ಹೊರಗು ಕೆಲಸ ಮಾಡುತ್ತಿದ್ದು, ಪ್ರಸ್ತುತ ತುಮಕೂರು ಜಿಲ್ಲೆಯ ಕೊರಟಗೆರೆ ಮತ್ತು ಪಾವಗಡ ತಾಲೂಕಿನ ಅಂಗವಿಕಲರಿಗೆ ತರಬೇತಿ ನೀಡಿ, ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಜನವರಿ 04 ಮತ್ತು 05 ರಂದು ತರಬೇತಿ ಹಮ್ಮಿಕೊಳ್ಳಲಾಗಿದೆ, ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ಈ ತರಬೇತಿ ಆಯೋಜಿಸಲಾಗಿದೆ ಎಂದರು.
ಪಾವಗಡ ತಾಲೂಕು ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದು, ಜೊತೆಗೆ ಜಿಲ್ಲೆಯಲ್ಲಿಯೇ ಹೆಚ್ಚು ಅಂಗವಿಕಲರನ್ನು ಹೊಂದಿರುವ ತಾಲೂಕಾಗಿದೆ, ಅಲ್ಲದೆ ತುಮಕೂರು ಜಿಲ್ಲೆ ಕೈಗಾರಿಕಾ ಹಬ್ ಆಗಿ ಗುರುತಿಸಿಕೊಳ್ಳುತ್ತಿದ್ದು, ಅಂಗವಿಕಲರಿಗೆ ಸೂಕ್ತ ತರಬೇತಿ ದೊರೆತರೆ ಅವರು ಸಹ ಸ್ವಾಭಿಮಾನಿಯಾಗಿ ಬದಕಲು ಸಾಧ್ಯ ಎಂಬುದನ್ನು ಮನಗಂಡು ಈ ತರಬೇತಿ ಆಯೋಜಿಸಲಾಗಿದೆ, ಸಂಸ್ಥೆಯಿಂದ ಪ್ರತಿವರ್ಷ ಎರಡು ಸಾವಿರ ಜನರಿಗೆ ತರಬೇತಿ ನೀಡುತ್ತಿದ್ದು, ಶೇ.80 ರಷ್ಟು ಜನರು ಉದ್ಯೋಗ ಪಡೆಯುತ್ತಿದ್ದಾರೆ,ರಿಲಯನ್ಸ್, ವಿಶಾಲ್‌, ಮೇಗಾ ಮಾರ್ಟ್‌, ಸ್ಟಾರ್‌ ಬಜಾರ್‌, ಆದಿತ್ಯಬಿರ್ಲಾ ಗ್ರೂಪ್‌, ವಿಂದ್ಯಾ ಇನ್ಟೊ ಮೀಡಿಯಾ, ವಾಸುದೇವ ಅಡಿಗಾಸ್‌, ಮಿಟ್ಟಿ ಕೆಫೆ ಸೇರಿದಂತೆ ಹಲವಾರು ಕಂಪನಿಗಳು ನಮ್ಮೊಂದಿಗೆ ಸಂಪರ್ಕದಲ್ಲಿದ್ದು, ಅಂಗವಿಕಲರ ಕೌಶಲ್ಯ ಮತ್ತು ದೈಹಿಕ ಸಾಮರ್ಥ್ಯ ಆಧರಿಸಿ ಉದ್ಯೋಗ ನೀಡಿದ್ದಾರೆ ಎಂದು ಲೇಖಾ.ಜೆ. ತಿಳಿಸಿದರು.
ಜನವರಿ 04 ಮತ್ತು 05 ರಂದು ನಡೆಯುವ ತರಬೇತಿಯೂ ಸಂಪೂರ್ಣ ಉಚಿತವಾಗಿದ್ದು, ಶಿಬಿರಕ್ಕೆ ಬರುವ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗುವುದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ ಅವರು ಹೆಚ್ಚಿನ ಮಾಹಿತಿಗಾಗಿ ಮಂಜುನಾಥ್‌- 7795485585 ಮತ್ತು ರಾಮಾಂಜನೇಯ 9901055092ಗೆ ಸಂಪರ್ಕಿಸುವಂತೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮಂಜುನಾಥ್‌, ರಾಮಾಂಜನೇಯ ಮತ್ತು ಜಗದೀಶ್‌ ಇದ್ದರು.

Get real time updates directly on you device, subscribe now.

Comments are closed.

error: Content is protected !!