ಕೋರ್‌ ಕಮಿಟಿಯಿಂದ ಸೊಗಡು ಔಟ್?

ಪಕ್ಷವಿರೋಧಿ ಚಟುವಟಿಕೆ ಮಾಡಿದ್ರಾ ಮಾಜಿ ಸಚಿವ ಎಸ್‌.ಶಿವಣ್ಣ

414

Get real time updates directly on you device, subscribe now.

ತುಮಕೂರು: ಬಿಜೆಪಿಯ ನಿಷ್ಠೆಯ ನಾಯಕ, ನೇರ ನುಡಿಯ ವ್ಯಕ್ತಿತ್ವದ ಸೊಗಡು ಶಿವಣ್ಣ ಶಾಸಕರಾಗಿ, ಮಂತ್ರಿಯಾಗಿ ಜನ ಸೇವೆ ಮಾಡಿ ಬಿಜೆಪಿ ಕಾರ್ಯಕರ್ತರ ನೆಚ್ಚಿನ ನಾಯಕರೆನಿಸಿಕೊಂಡವರಾಗಿದ್ದಾರೆ.
ಮುಲಾಜಿಲ್ಲದೆ ಅನ್ಯಾಯದ ವಿರುದ್ಧ ಧೈರ್ಯವಾಗಿ ಮಾತನಾಡುವ ಸೊಗಡು ಶಿವಣ್ಣ 4 ಬಾರಿ ತುಮಕೂರು ನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದವರು, ಬಿಜೆಪಿ ಪಕ್ಷ ಸಂಘಟನೆಗೆ ತನ್ನದೆ ಕೊಡುಗೆ ನೀಡಿದವರು ಸೊಗಡು ಶಿವಣ್ಣ, ಆದರೆ ಹೈಕಮಾಂಡ್‌ಗೆ ಸೊಗಡು ಶಿವಣ್ಣರ ಬಗ್ಗೆ ಯಾವ ದೂರು ಸಲ್ಲಿಕೆ ಆಯಿತೋ ಗೊತ್ತಿಲ್ಲ. ಪಕ್ಷವಿರೋಧಿ ಚಟುವಟಿಕೆ ಅಡಿಯಲ್ಲಿ ಕೋರ್‌ ಕಮಿಟಿಯಿಂದ ಸೊಗಡು ಶಿವಣ್ಣ ಅವರನ್ನು ದಿಢೀರ್‌ ಎಂದು ಹೊರಹಾಕಲಾಗಿದೆ ಎಂಬ ಮಾತು ಬಿಜೆಪಿ ಪಾಳೆಯದಿಂದಲೇ ಕೇಳಿ ಬರುತ್ತಿದೆ.
ನಗರದ ಟೌನ್‌ಹಾಲ್‌ ಬಳಿ ಚಿಕ್ಕಮಗಳೂರು ದತ್ತ ಪೀಠಕ್ಕೆ ಯಾತ್ರೆ ತೆರಳುವ ಸಂಬಂಧ ಉಂಟಾದ ವಾಗ್ವಾದ ತಾರಕಕ್ಕೇರಿ, ವಿಶ್ವ ಹಿಂದೂ ಪರಿಷತ್‌ ಮುಖಂಡರೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ್ದರು ಎನ್ನಲಾದ ಘಟನೆ ಇದಕ್ಕೆ ಕಾರಣವಾಯಿತೆ ಎಂಬ ಮಾತು ಬಿಜೆಪಿ ಕಾರ್ಯಕರ್ತರು ಮಾತಾಡಿಕೊಳ್ಳುತ್ತಿದ್ದಾರೆ.
ಅಷ್ಟೇ ಅಲ್ಲ, ಮೇಲ್ಮನೆ ಎಂಎಲ್‌ಸಿ ಚುನಾವಣೆಯಲ್ಲಿ ಶಿವಣ್ಣ ಅವರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿಲ್ಲ ಎಂದೂ ಅವರ ಮೇಲೆ ಆಪಾದಿಸಲಾಗಿದೆ, ಜಿಲ್ಲೆಯಲ್ಲಿ ಇಬ್ಬರು ಸಚಿವರು, ಮೂವರು ಶಾಸಕರು, ಓರ್ವ ಎಂಎಲ್‌ಸಿ ಇದ್ದೂ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಸಾಧ್ಯವಾಗದ ದುರ್ದೈವ ಬಿಜೆಪಿಯದ್ದು, ಆದರೆ ಸೊಗಡು ಶಿವಣ್ಣರ ಮೇಲೆ ಈ ಆಪಾದನೆ ಏಕೆ ಬಂದಿತೋ ಗೊತ್ತಿಲ್ಲ.
ಈಚೆಗೆ ಮಠಕ್ಕೆ ಭೇಟಿ ಕೊಟ್ಟ ಕೆಲ ಸಚಿವರ ಬಳಿಯು ಸೊಗಡು ಶಿವಣ್ಣ ನಯವಾಗಿ ಮಾತನಾಡದೆ ಮಾತಿಗೆ ಮುಂಚೆ ಅಪ್ಪ ಮಗ ಎಂದು ಸಂಬೋಧಿಸುತ್ತಾರೆ ಎಂದೂ ಕಾರ್ಯಕರ್ತರೊಬ್ಬರು ದೂರಿದ್ದಾರೆ.
ತುಮಕೂರು ಬಿಜೆಪಿ ಅಸ್ತಿತ್ವ ಕಳೆದುಕೊಳ್ಳುತ್ತಿದ್ಯ ಎಂಬ ಪ್ರಶ್ನೆ ಶುರುವಾಗಿದ್ದು, ಇದಕ್ಕೆ ಅಪ್ಪ- ಮಕ್ಕಳೇ ಕಾರಣ ಎಂದು ಇನ್ನೂ ಕೆಲ ಕಾರ್ಯಕರ್ತರು ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ, ಪಕ್ಷ ವಿರೋಧಿ ಚಟುವಟಿಕೆ ಎಲ್ಲಿಂದ ಶುರುವಾಗಿದೆ ಎಂಬುದು ಶೀಘ್ರದಲ್ಲೆ ಗೊತ್ತಾಗಲಿದೆ, ಬಿಜೆಪಿಯಿಂದ ಕೆಜೆಪಿಗೆ ಹೋದವರು ಪಕ್ಷ ವಿರೋಧಿಗಳಲ್ಲವೇ? ಕೆಲವರ ಕಾಲ್ಗುಣದಿಂದ ತುಮಕೂರು ಬಿಜೆಪಿ ಗ್ರಹಚಾರ ಸರಿಯಿಲ್ಲ, ಇನ್ನಾರು ತಿಂಗಳಲ್ಲಿ ನಿಜವಾದ ಪಕ್ಷ ವಿರೋಧಿ ಯಾರೆಂಬುದು ಜನತೆಗೆ ತಿಳಿಯಲಿದೆ ಎಂದು ಕಾರ್ಯಕರ್ತರೊಬ್ಬರು ಹೇಳಿದ್ದಾರೆ.
ಈ ಬಗ್ಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಅವರನ್ನು ಮಾತನಾಡಿಸಿದಾಗ, ಸೊಗಡು ಶಿವಣ್ಣ ಅವರನ್ನು ಕೋರ್‌ ಕಮಿಟಿಯಿಂದ ವಜಾಗೊಳಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ, ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದಷ್ಟೇ ಹೇಳಿದರು.
ಮಾಜಿ ಸಚಿವ ಸೊಗಡು ಶಿವಣ್ಣ ಕೂಡ ನನಗೇನು ಗೊತ್ತಿಲ್ಲ, ನಾನೇನು ಹೇಳುವುದಿಲ್ಲ , ಇನ್ನೂ ಏನೇನು ಮಾಡುತ್ತಾರೋ.. ಮಾಡಲಿ ಎಂದಷ್ಟೇ ಹೇಳಿದರು.
ತತ್ವ, ಸಿದ್ಧಾಂತ ನಂಬಿದ ಪಕ್ಷದ ನಾಯಕರಲ್ಲಿ ಒಗ್ಗಟ್ಟು ಮರೆಯಾಗುತ್ತಿದೆ, ಕಾಲೆಳೆಯುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ. ತುಮಕೂರು ಬಿಜೆಪಿ ಒಡೆದ ಮನೆಯಾಗೇ ಉಳಿಯುವುದಾ? ಹೈಕಮಾಂಡ್‌ ಈ ಬಗ್ಗೆ ಎಚ್ಚೆತ್ತುಕೊಂಡು ಎಲ್ಲವನ್ನೂ ಸರಿದೂಗಿಸುತ್ತಾ ಎಂಬುದು ಬಿಜೆಪಿ ಕಾರ್ಯಕರ್ತರ ಪ್ರಶ್ನೆಯಾಗಿದೆ.

Get real time updates directly on you device, subscribe now.

Comments are closed.

error: Content is protected !!