ಸರ್ಕಾರ ಉಡಾಫೆ ತೋರುವುದು ಬಿಡಲಿ: ಗೌರಿಶಂಕರ್

ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲಿ

133

Get real time updates directly on you device, subscribe now.

ತುಮಕೂರು: ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸಲು ಸರ್ಕಾರ ಉಡಾಫೆ ತೋರುತ್ತಿದೆ, ಅವರ ಮನವಿ ಸ್ವೀಕರಿಸಲು ಯೋಗತ್ಯೆ ಇಲ್ಲದ ಅಯೋಗ್ಯ ಸರ್ಕಾರ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‌ ದೂರಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಹೋರಾಟದಲ್ಲಿ ಭಾಗಿಯಾಗಿ ಮಾತನಾಡಿ, ಅಧಿವೇಶನ ನಡೆಯುವ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರು ಮನವಿ ಸಲ್ಲಿಸಲು ಬಂದರೂ ಸ್ವೀಕರಿಸಲಿಲ್ಲ, ಯುಜಿಸಿ ಮಾರ್ಗಸೂಚಿಗಳನ್ವಯ ಕೆಲಸ ಮಾಡಲು ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದು ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯೇ ಎಂದರು.
ಕೋವಿಡ್‌ ಕಾಲದಲ್ಲಿ ಶಾಲಾ ಕಾಲೇಜು ಬಂದ್‌ ಆಗಿತ್ತು, ಆಗಿನಿಂದಲೂ ಉದ್ಯೋಗ ಇಲ್ಲದೇ ಜೀವನ ನಡೆಸಲು ಅನ್ಯ ಕೆಲಸ ಮಾಡಬೇಕಾಯಿತು, ಇದು ಸರ್ಕಾರದ ಗಮನಕ್ಕೆ ಬರಲಿಲ್ಲವೇ? ಸಮ್ಮಿಶ್ರ ಸರ್ಕಾರದಲ್ಲಿ ಅತಿಥಿ ಉಪನ್ಯಾಸಕರಿಗೆ ಸಂಬಳ ಹೆಚ್ಚಿಸಿ ಆದೇಶ ಹೊರಡಿಸಿತ್ತು, ಆದರೆ ಆ ಆದೇಶವನ್ನು ಹಿಂಪಡೆಯುತ್ತಾರೆ, ಅವರ ಬೇಡಿಕೆ ಈಡೇರಿಸಲು ಮುಂದಾಗುತ್ತಿಲ್ಲ ಎಂದು ದೂರಿದರು.
ಜೆಒಸಿ, ಮೊರಾರ್ಜಿ ಶಾಲೆಯ ಅರೆಕಾಲಿಕ ನೌಕರರನ್ನು ಕೆಲಸಕ್ಕೆ ತೆಗೆದುಕೊಂಡಂತೆ ಇವರನ್ನು ಕಾಯಂಗೊಳಿಸಬೇಕು, ಯುಜಿಸಿ ಮಾರ್ಗಸೂಚಿಯಂತೆ ಸಂಬಳ ನೀಡಬೇಕು, ಸರ್ಕಾರದ ಉದಾಸೀನತೆಯಿಂದ ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳ ಪರಿಸ್ಥಿತಿ ಏನಾಗಬೇಕು? ಅತಿಥಿ ಉಪನ್ಯಾಸಕರು ಇಲ್ಲದೇ ಹೋದರೆ ಪಾಠ ಮಾಡುವರು ಯಾರು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಅತಿಥಿ ಉಪನ್ಯಾಸಕರಿಗೆ ಭದ್ರತೆ ಕಲ್ಪಿಸಬೇಕು ಎಂದು ಆಗ್ರಹಿಸಿದ ಅವರು ಅತಿಥಿ ಉಪನ್ಯಾಸಕರ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇನೆ, ಹೋರಾಟದಲ್ಲಿ ಭಾಗಿವಹಿಸುವ ಮೂಲಕ ಅತಿಥಿ ಉಪನ್ಯಾಸಕ ಬೇಡಿಕೆ ಈಡೇರಿಸುವವರಿಗೆ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳಿದರು.
ರಾಜಕಾರಣಕ್ಕಾಗಿ ಪಾದಯಾತ್ರೆ ಮಾಡುವವರು ಅತಿಥಿ ಉಪನ್ಯಾಸಕರ ಸಮಸ್ಯೆ ಬಗ್ಗೆ ಗಮನ ಹರಿಸಬೇಕು, ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಅತಿಥಿ ಉಪನ್ಯಾಸಕರ ಹೋರಾಟ ಬೆಂಬಲಿಸುವ ಮೂಲಕ ಅವರ ಹೋರಾಟಕ್ಕೆ ಸಹಕಾರ ನೀಡಬೇಕಿರುವುದು ಎಲ್ಲರ ಜವಾಬ್ದಾರಿ ಎಂದರು.
ಅಭಿವೃದ್ಧಿ ಮಾಡಿರುವುದಾಗಿ ವೇದಿಕೆ ಮೇಲೆ ಕಿತ್ತಾಡೋದು ಬಿಟ್ಟು, ತಮ್ಮ ಪೌರುಷವನ್ನು ಅತಿಥಿ ಉಪನ್ಯಾಸಕ ಬೇಡಿಕೆ ಈಡೇರಿಸಿದರೆ ಸಚಿವರನ್ನು ಒಪ್ಪಬಹುದು, ಅಂತಹ ಕೆಲಸವನ್ನು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರು ಮಾಡಲಿ, ಅದನ್ನು ಬಿಟ್ಟು ರಾಜಕಾರಣಕ್ಕೆ ತೊಡೆತಟ್ಟುವುದನ್ನು ಬಿಡಲಿ ಎಂದು ಕಿವಿ ಮಾತು ಹೇಳಿದರು.
ಜೆಡಿಎಸ್‌ ಮುಖಂಡ ಬೆಳಗುಂಬ ವೆಂಕಟೇಶ್‌ ಮಾತನಾಡಿ ಅತಿಥಿ ಉಪನ್ಯಾಸಕ ಹೋರಾಟದ ಬಗ್ಗೆ ಸರ್ಕಾರ ಗಮನ ಹರಿಸದೇ ಇರುವುದು ದುರದೃಷ್ಟಕರ, ಅತಿಥಿ ಉಪನ್ಯಾಸಕರ ಸಂಬಳದಲ್ಲಿ ಜೀವನ ನಡೆಸುವುದಕ್ಕೆ ಸಾಧ್ಯವೇ ಎನ್ನುವುದನ್ನು ಅರಿತುಕೊಳ್ಳಬೇಕಿದೆ, ಉಪನ್ಯಾಸಕರಿಲ್ಲದೇ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದು, ಸರ್ಕಾರ ತುರ್ತಾಗಿ ಈ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಅತಿಥಿ ಉಪನ್ಯಾಸಕರು ತುಮಕೂರಿನಿಂದಲೇ ಪಾದಯಾತ್ರೆ ಹಮ್ಮಿಕೊಂಡು ಹೋರಾಟ ತೀವ್ರಗೊಳಿಸಬೇಕು, ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‌, ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಸಂಪೂರ್ಣವಾಗಿ ಬೆಂಬಲ ನೀಡುತ್ತೇವೆ, ಹೋರಾಟದ ಯಶಸ್ಸಿಗೆ ಸಹಕರಿಸುವುದಾಗಿ ಹೇಳಿದರು.
ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ಕಳೆದ ಇಪ್ಪತ್ತು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ, ಬಡ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗಿದ್ದರು ಸಹ ಸರ್ಕಾರ ಗಮನಹರಿಸುತ್ತಿಲ್ಲ, ಸರ್ಕಾರಕ್ಕೆ ಶ್ರೀಮಂತರ ಮಕ್ಕಳ ಬಗ್ಗೆ ಗಮನ ಇದೆಯೇ ಹೊರತು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡುತ್ತಿಲ್ಲ ಎಂದು ಆಕೋಶ ವ್ಯಕ್ತಪಡಿಸಿದರು.

Get real time updates directly on you device, subscribe now.

Comments are closed.

error: Content is protected !!