ಕುಣಿಗಲ್: ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇದೆ ಬುಧವಾರ ಚುನಾವಣೆ ನಡೆಯಲಿದ್ದು ಬಹುಮತ ಇರುವ ಕಾಂಗ್ರೆಸ್ ಸದಸ್ಯರ ಚಿತ್ತ ಹೈಕಮಾಂಡ್‌ನತ್ತ ನೆಟ್ಟಿದೆ.
26 ಸದಸ್ಯರ ಬಲಾಬಲದ ಪುರಸಭೆಯಲ್ಲಿ 14 ಕಾಂಗ್ರೆಸ್, 4 ಬಿಜೆಪಿ, ಮೂರು ಜೆಡಿಎಸ್, ಎರಡು ಪಕ್ಷೇತರರು ಇದ್ದು ಇಬ್ಬರು ಪಕ್ಷೇತರರು ಸೇರಿದಂತೆ ಒಬ್ಬ ಜೆಡಿಎಸ್ ಸದಸ್ಯ ಕೈಪಾಳೆಯಕ್ಕೆ ಬೆಂಬಲ ಸೂಚಿಸಿದ್ದರಿಂದ ಕೈಪಾಳೆಯ 17 ಸಂಖ್ಯೆಯ ಜೊತೆ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರೂ ಸೇರಿದಂತೆ 20 ಕ್ಕೆ ಏರಿದೆ. ಈ ಮೊದಲು ಕಾಂಗ್ರೆಸ್‌ನ ನಾಗೇಂದ್ರ ಅಧ್ಯಕ್ಷರಾಗಿದ್ದು ಕೈಪಾಳೆಯದಲ್ಲೆ ಅಧಿಕಾರ ಹಂಚಿಕೆ ಸೂತ್ರದ ಮೇರೆಗೆ ಒಂದು ವರ್ಷಕ್ಕೆ ಅಧ್ಯಕ್ಷ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಲಿದೆ. ಈ ಹಿಂದೆ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್‌ನ ಕಟ್ಟಾಳು, ನಾಲ್ಕು ಬಾರಿ ಪುರಸಭೆ ಸದಸ್ಯರಾಗಿರುವ ರಂಗಸ್ವಾಮಿ ಆಯ್ಕೆ ಸ್ವಲ್ಪದರಲ್ಲೆ ಕೈ ತಪ್ಪಿತ್ತು, ಈ ಬಾರಿ ಅವರ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ, ಈ ನಿಟ್ಟಿನಲ್ಲಿ ಈಗಾಗಲೆ ರಂಗಸ್ವಾಮಿ ಪುರಸಭಾಧ್ಯಕ್ಷರು ಎಂಬ ಸುದ್ದಿ ಪಟ್ಟಣದಾದ್ಯಂತ ದಡ್ಡವಾಗಿ ಹರಡಿದೆ, ಆದರೂ ಕೈಪಾಳೆಯದ ಮತ್ತೊಬ್ಬ ಹಿರಿಯ ಸದಸ್ಯ ಅರುಣ್ ಕುಮಾರ್ ಸಹ ಆಕಾಂಕ್ಷಿಯಾಗಿದ್ದು, ಎಲ್ಲಾ ರೀತಿಯ ಲಾಬಿ ನಡೆಸಿ ಅಧ್ಯಕ್ಷ ಗಾದಿಯ ರೇಸ್ ನಲ್ಲಿದ್ದಾರೆ.
ಹೈಕಮಾಂಡ್ ಕಳೆದ ಬಾರಿಯಂತೆ ಅಧ್ಯಕ್ಷೀಯ ಅಭ್ಯರ್ಥಿಯ ಆಯ್ಕೆ ನಿಗೂಢವಾಗಿರಿಸಿದ್ದು ಮಂಗಳವಾರವೆ ಕೈಪಾಳೆಯದ ಅಭ್ಯರ್ಥಿಗಳು ಹೈಕಮಾಂಡ್‌ನ ಸೂಚನೆ ಮೇರೆಗೆ ಬೆಂಗಳೂರಿಗೆ ತೆರಳಿಲಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಅಷ್ಟೇನು ಪೈಪೋಟಿ ಇಲ್ಲದೆ ಇದ್ದರೂ ಹೈಕಮಾಂಡ್ ಸೂಚಿಸುವ ಹೆಸರೇ ಅಂತಿಮಗೊಳ್ಳಲಿದೆ. ಬಹುಮತ ಇರುವ ಕಾಂಗ್ರೆಸ್ ಸದಸ್ಯರಿಗೆ ಬಹುತೇಕ ಎಲ್ಲರಿಗೂ ಅಧಿಕಾರ ಸಿಗುವಂತೆ ನೋಡಿಕೊಳ್ಳಲು ಹೈಕಮಾಂಡ್ ಆದ ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ರಂಗನಾಥ್ ಕಾರ್ಯತಂತ್ರ ಹೆಣೆದಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳಿಗೆ ಇರುವ ಒಟ್ಟಾರೆ 60 ತಿಂಗಳ ಅವಧಿಯಲ್ಲಿ, ಲೆಕ್ಕಾಚಾರದಂತೆ ಎಲ್ಲಾ ರೀತಿಯ ಕಸರತ್ತು ಮಾಡಿ ಅಧಿಕಾರ ಹಂಚಿಕೆ ಮಾಡುತ್ತಿದ್ದು, ಆಕಾಂಕ್ಷಿಗಳು ಹೆಚ್ಚಾಗಿರುವುದು ಒಂದು ರೀತಿಯ ತಲೆನೋವಾಗಿ ಪರಿಣಮಿಸಿದೆ. ಎಲ್ಲರನ್ನು ಸಮಾಧಾನ ಪಡಿಸಿಕೊಂಡು ಸುಸೂತ್ರವಾಗಿ ಪುರಸಭಾಡಳಿತ ನಡೆಸಲು ಅಗತ್ಯ ಕಾರ್ಯ ತಂತ್ರಗಳನ್ನು ಹೈಕಮಾಂಡ್ ರೂಪಿಸುವುದು ಸವಾಲಿನ ಕೆಲಸವಾದರೂ ವಿರೋಧ ಪಕ್ಷಗಳ ಬಳಿ ಸಂಖ್ಯಾಬಲ ಇಲ್ಲದೆ ಇರುವುದು ಆಡಳಿತ ಪಕ್ಷದಲ್ಲಿ ನೆಮ್ಮದಿ ಮೂಡಿಸಿದೆ.
Get real time updates directly on you device, subscribe now.
Prev Post
Next Post
Comments are closed.