ತುಮಕೂರು: ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಏಕಕಾಲಕ್ಕೆ ಇಬ್ಬರು ನೂತನ ಅಧ್ಯಕ್ಷರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶಿಸಿದ್ದಾರೆ.
ಊರ್ಡಿಗೆರೆ ಲಕ್ಷ್ಮೀಶ್ ಅವರನ್ನು ತುಮಕೂರು ನಗರ, ಗ್ರಾಮಾಂತರ, ಕುಣಿಗಲ್, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ ತಾಲ್ಲೂಕಿನ ಜವಾಬ್ದಾರಿ ನೀಡಲಾಗಿದೆ. ಮೂಲತಃ ಸಂಘ ಪರಿವಾರದಿಂದ ಬಂದಂತಹ ಲಕ್ಷ್ಮೀಶ್ ಅವರನ್ನು ಈ ಹಿಂದೆ ದಾವಣಗೆರೆ ವಿಭಾಗದ ಸಹ ಪ್ರಭಾರಿಯಾಗಿ ರಾಜ್ಯ ಬಿಜೆಪಿ ನೇಮಿಸಿತ್ತು.
ಶಿರಾದ ಬಿಜೆಪಿ ಪ್ರಭಾವಿ ನಾಯಕ ಬಿ.ಕೆ.ಮಂಜುನಾಥ್ ಅವರನ್ನು ಈ ಹಿಂದೆ ನಿಗಮ ಮಂಡಲಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ಬಿಜೆಪಿಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಇವರು ಈಗ ಶಿರಾ, ಮಧುಗಿರಿ, ಕೊರಟಗೆರೆ, ಪಾವಗಡ ತಾಲ್ಲೂಕುಗಳನ್ನು ಪ್ರತಿನಿಧಿಸುವಂತೆ ಈ ಭಾಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಆದರೆ, ಜಿಲ್ಲಾ ಬಿಜೆಪಿಯನ್ನು ವಿಭಜಿಸಿ ಇಬ್ಬರನ್ನು ಅಧ್ಯಕ್ಷರನ್ನಾಗಿ ಮಾಡುವ ಅವಶ್ಯಕತೆ ಆದರೂ ಏನಿತ್ತು ಎಂಬ ಪ್ರಶ್ನೆ ಕಾರ್ಯಕರ್ತರಲ್ಲಿ ಎದ್ದಿದೆ. ಈ ಗೊಂದಲದ ನೇಮಕಾತಿ ಬಗ್ಗೆ ಸಾಕಷ್ಟು ಚರ್ಚೆಯು ಶುರುವಾಗಿದೆ.
ಎರಡನೇ ಬಾರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದ ಸುರೇಶ್ಗೌಡ ಪಕ್ಷದಲ್ಲಿದ್ದ ಸಾಕಷ್ಟು ಆಂತರಿಕ ಗೊಂದಲ ನಿವಾರಿಸಿಕೊಂಡು ಮುನ್ನಡೆಸಿದ್ದರು, ಶಿರಾ ವಿಧಾನಸಭೆ ಉಪ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸಿ.ಎಂ.ರಾಜೇಶ್ಗೌಡ ಅವರನ್ನು ಗೆಲುವಿನ ದಡ ಸೇರಿಸಿದ್ದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೆಸರು ಮತ್ತೊಮ್ಮೆ ಕೇಳಿ ಬಂದಿತ್ತು, ಈ ಹಿಂದೆ ಅಧ್ಯಕ್ಷರಾಗಿಯೂ ದುಡಿದಿದ್ದರು, ಪಕ್ಷ ಸಂಘಟನೆ ಮಾಡಿದ್ದರು, ಮತ್ತೊಮ್ಮೆ ವರಿಷ್ಠರ ಪಟ್ಟಿಯಲ್ಲಿ ಜ್ಯೋತಿಗಣೇಶ್ ಹೆಸರು ಕೇಳಿ ಬಂದಿತ್ತು. ಹಾಗೆಯೇ ಪಿಕಾರ್ಡ್ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣ ಕುಮಾರ್ ಹೆಸರು ಇತ್ತು. ಅಲ್ಲದೆ ಬಿಜೆಪಿ ಮುಖಂಡ ಹೆಬ್ಬಾಕ ರವಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದರು. ಹೆಬ್ಬಾಕ ರವಿ ಆಯ್ಕೆ ಆಗುವುದು ಖಚಿತ ಎಂಬ ಮಾತು ಬಿಜೆಪಿ ಕಾರ್ಯಕರ್ತರಿಂದಲೇ ಕೇಳಿ ಬಂದಿತ್ತು. ಆದರೆ ಸಂಘ ಪರಿವಾರದಿಂದ ಬಂದಂತಹ ಊರ್ಡಿಗೆರೆ ಲಕ್ಷ್ಮೀಶ್, ಬಿ.ಕೆ.ಮಂಜುನಾಥ್ ಆಯ್ಕೆ ಅಂತಿಮವಾಗಿದೆ ಎನ್ನಲಾಗಿದೆ.
ಅಧ್ಯಕ್ಷ ಸ್ಥಾನ ಲಕ್ಷ್ಮೀಶ್ ಗೆ ಸವಾಲ್?
ನೂತನವಾಗಿ ಆಯ್ಕೆಯಾಗಿರುವ ಊರ್ಡಿಗೆರೆ ಲಕ್ಷ್ಮೀಶ್ಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಸಂಬಾಳಿಸುವುದು ತುಸು ಕಷ್ಟದ ಕೆಲಸವೇ ಆಗಿದೆ, ಅಧ್ಯಕ್ಷರಾದ ನಂತರ ಜಿಲ್ಲೆಯಲ್ಲಿ ಎಲ್ಲರನ್ನೂ ಒಟ್ಟಿಗೆ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ಫಲಿಸಬೇಕಿದೆ, ಗುಂಪುಗಾರಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದ್ದು, ಒಂದು ಮನೆಗೆ ಮೂರು- ನಾಲ್ಕು ಬಾಗಿಲು ಎನ್ನುವಂತಾಗಿದೆ, ಇದನ್ನು ನಿಭಾಯಿಸುವುದು ಅವರಿಗೆ ಸವಾಲಿನ ಪ್ರಶ್ನೆಯಾಗಿದೆ.ಬಿ.ಕೆ.ಮಂಜುನಾಥ್ ಸೀಮಿತ ತಾಲ್ಲೂಕುಗಳನ್ನು ನೀಡಿರುವುದರಿಂದ ಜವಾಬ್ದಾರಿ ಯುತವಾಗಿ ಕಾರ್ಯನಿರ್ವಹಿಸುತ್ತಾರೆ ಎಂಬ ಮಾತು ಕೇಳಿ ಬಂದಿದೆ.
ಪಕ್ಷ ನಿಷ್ಠೆಗೆ ಬೆಲೆ ಇಲ್ಲ: ಸುರೇಶ್ ಗೌಡ
ಮಾಜಿ ಶಾಸಕ ಬಿ.ಸುರೇಶ್ ಗೌಡ ಅವರು ಆರ್ಎಸ್ಎಸ್, ಬಿಜೆಪಿ ಜೊತೆಗೆ ಗುರುತಿಸಿಕೊಂಡು ಬಂದಿದ್ದು, ಯಡಿಯೂರಪ್ಪ ಜತೆಗೆ ಆಪ್ತರಾಗಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿಸಿದ್ದರು, ನಂತರ ಯಡಿಯೂರಪ್ಪ ಕೆಜೆಪಿ ಸ್ಥಾಪಿಸಿ ಪಕ್ಷದಿಂದ ಹೊರ ನಡೆದರೂ ಸುರೇಶ್ ಗೌಡ ಪಕ್ಷ ನಿಷ್ಠೆ ಮೆರೆದಿದ್ದರು. ಕೆಜೆಪಿ ಸೇರುವಂತೆ ಸಾಕಷ್ಟು ಒತ್ತಡಗಳಿದ್ದರೂ ಪಕ್ಷವನ್ನೇ ನಂಬಿ ರಾಜಕಾರಣ ಮುಂದುವರಿಸಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸೆ.27, 2021 ರಂದು ಸುರೇಶ್ ಗೌಡ ರಾಜೀನಾಮೆ ನೀಡಿದ್ದರು. ಪಕ್ಷದೊಳಗಿನ ಆಂತರಿಕ ಒತ್ತಡದಿಂದ ಅವರು ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಹೇಳಲಾಗಿತ್ತು.
ಅಧಿಕಾರವಧಿ ಒಂದು ವರ್ಷ ಬಾಕಿಯಿರುವಾಗಲೇ ರಾಜೀನಾಮೆ ನೀಡಿದ್ದು ಸಾಕಷ್ಟು ಕುತೂಹಲಕ್ಕೂ ಕಾರಣವಾಗಿತ್ತು. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಜಿಲ್ಲಾಧ್ಯಕ್ಷ ಸ್ಥಾನ ತ್ಯಜಿಸಿಲಾಗಿದೆ ಎಂದು ಅವರು ಹೇಳಿದ್ದರು.
ಪ್ರಬಲ ಸಮುದಾಯದಿಂದ ಬಂದಂತಹ ಸುರೇಶ್ ಗೌಡರನ್ನು ಪಕ್ಷದ ವರಿಷ್ಠರು ಕಡೆಗಣಿಸುತ್ತಿದ್ದಾರಾ? ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಸುರೇಶ್ ಗೌಡರ ಸೋಲಿಗೆ ಬಿಜೆಪಿ ನಾಯಕರೇ ಕಾರಣರಾದರಾ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
Comments are closed.