ನಕಲಿ ಕಾರ್ಮಿಕರ ಕಾರ್ಡ್‌ ವಜಾಕ್ಕೆ ಆಗ್ರಹ

127

Get real time updates directly on you device, subscribe now.

ಕುಣಿಗಲ್‌: ನಕಲಿ ಕಾರ್ಮಿಕರ ಕಾರ್ಡ್‌ ವಿತರಣೆ ಖಂಡಿಸಿ, ನಕಲಿ ಕಾರ್ಮಿಕರ ಕಾರ್ಡ್ ಗಳನ್ನು ವಜಾಗೊಳಿಸುವಂತೆ ಆಗ್ರಹಿಸಿ ಶ್ರಮಜೀವಿ ಕಟ್ಟಡ ನಿರ್ಮಾಣ ಕಾರ್ಮಿಕರ ಹಿತರಕ್ಷಣಾ ಸಮಿತಿ ವತಿಯಿಂದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬುಧವಾರ ತಾಲೂಕು ಕಚೇರಿ ಆವರಣದಲ್ಲಿ ಸಮಿತಿ ಅಧ್ಯಕ್ಷ ಕೃಷ್ಣರಾಜು ನೇತೃತ್ವದಲ್ಲಿ ಸಂಘಟಿತರಾದ ಕಾರ್ಮಿಕ ಸಂಘದ ಪದಾಧಿಕಾರಿಗಳು ಪ್ರತಿಭಟನಾ ಸಭೆ ನಡೆಸಿದರು.
ಈ ವೇಳೆ ಕೃಷ್ಣರಾಜು ಮಾತನಾಡಿ, ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆ ಸರಕಾರ ಮಂಡಳಿ ರಚಿಸಿದೆ, ಕಾರ್ಮಿಕರ ಗುರುತಿಸಲು ಸೂಕ್ತ ಮಾನದಂಡ ನಿಗದಿಪಡಿಸಿ ಕಾರ್ಡ್‌ ನೀಡುತ್ತಿದೆ, ಆದರೆ ಕೆಲವರು ಮಾರುತಿ ವ್ಯಾನ್‌ನಲ್ಲಿ ಹಳ್ಳಿ ಹಳ್ಳಿಗೆ ತೆರಳಿ ಅರ್ಹರಲ್ಲದವರಿಗೂ ದಲ್ಲಾಳಿಗಳ ಮೂಲಕ ಹಣ ಪಡೆದು ಕಾರ್ಮಿಕರ ಕಾರ್ಡ್‌ ನೀಡುತ್ತಿದ್ದಾರೆ. 2006 ರಿಂದ 2018ರ ವರೆಗೆ ತಾಲೂಕಿನಲ್ಲಿ ಕೇವಲ ಐದುವರೆ ಸಾವಿರ ಕಾರ್ಮಿಕರ ಕಾರ್ಡ್‌ಗಳಿದ್ದವು, 2022 ಜನವರಿ ಮಾಹೆಗೆ ಸುಮಾರು 18 ಸಾವಿರ ಕಾರ್ಮಿಕ ಕಾರ್ಡ್ ಗಳಿವೆ. ಕಾರ್ಮಿಕರಲ್ಲದವರಿಗೆ ಹೆಚ್ಚಿನ ಕಾರ್ಡ್‌ ವಿತರಣೆಯಾಗುವ ಮೂಲಕ ಅರ್ಹ ಕಾರ್ಮಿಕರಿಗೆ ಅದರಲ್ಲೂ ವಿಶೇಷವಾಗಿ ಕಟ್ಟಡ ಕಾರ್ಮಿಕರಿಗೆ ಸರ್ಕಾರದ ಸವಲತ್ತು ವಂಚನೆಯಾಗಿದೆಮ ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಅಕ್ರಮ ಕಾರ್ಮಿಕರ ಪತ್ತೆ ಮಾಡುವಲ್ಲಿ ಆಸಕ್ತಿ ವಹಿಸುತ್ತಿಲ್ಲ. ಇದರಿಂದಾಗಿ ಸರ್ಕಾರದ ಸವಲತ್ತು ಅನರ್ಹರ ಪಾಲಾಗುತ್ತಿದೆ, ಇನ್ನಾದರೂ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಅನರ್ಹ ಕಾರ್ಮಿಕರ ಪತ್ತೆ ಹಚ್ಚಿ ಅಂತಹವರ ಕಾರ್ಡ್‌ಗಳನ್ನು ವಜಾ ಮಾಡಬೇಕು, ಈ ನಿಟ್ಟಿನಲ್ಲಿ ಇಲಾಖೆಯ ಹಿರಿಯಾಧಿಕಾರಿಗಳಿಗೂ ಮನವಿ ನೀಡಿದ್ದೇವೆ, ನಿಗದಿತ ಅವಧಿಯೊಳಗೆ ಸೂಕ್ತ ಕ್ರಮ ಕೈಗೊಳ್ಳದೆ ಹೋದಲ್ಲಿ ಅಗತ್ಯ ಕ್ರಮಕ್ಕೆ ಅಧಿಕಾರಿಗಳ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ ಎಂದರು.
ಸಮಿತಿಯ ಕಾರ್ಯದರ್ಶಿ ರೇಣುಕಪ್ಪ, ಪದಾಧಿಕಾರಿಗಳಾದ ಮಲ್ಲಣ್ಣ, ಶಿವಣ್ಣ, ನಾಗರಾಜ್‌, ಸುಬಾನ್‌, ವೆಂಕಯ್ಯ, ನರಸಿಂಹರಾವ್‌, ಮಹಾಲಿಂಗಯ್ಯ ಇತರರು ಇದ್ದರು. ಉಪತಹಶೀಲ್ದಾರ್‌ ಗೋವಿಂದರಾಜು ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Get real time updates directly on you device, subscribe now.

Comments are closed.

error: Content is protected !!