ಕುಣಿಗಲ್: ಪುರಸಭೆಯ ಅಧ್ಯಕ್ಷರಾಗಿ ರಂಗಸ್ವಾಮಿ, ಉಪಾಧ್ಯಕ್ಷರಾಗಿ ತಬಸ್ಸುಮ್ ಸದಾಖತ್‌ವುಲ್ಲಾ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಇದ್ದರೂ ಅಧ್ಯಕ್ಷ ಗಾದಿಗೆ ಆಕಾಂಕ್ಷಿಗಳು ಹೆಚ್ಚಿದ್ದ ಕಾರಣ ತೀವ್ರ ಕುತೂಹಲ ಕೆರಳಿಸಿತ್ತು, ಕಾಂಗ್ರೆಸ್ ನ ಸದಸ್ಯ ಅರುಣ್ ಕುಮಾರ್ ಕೊನೆವರೆಗೂ ತೀವ್ರ ಪೈಪೋಟಿ ನೀಡಿದ್ದರು. ಹಿಂದಿನ ಬಾರಿ ಅವಕಾಶ ವಂಚಿತವಾಗಿದ್ದ ಮೂರು ಬಾರಿ ಕಾಂಗ್ರೆನಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ಹಿರಿಯ ಸದಸ್ಯ ರಂಗಸ್ವಾಮಿಯವರನ್ನೆ ಆಯ್ಕೆ ಮಾಡುವಂತೆ ಪಕ್ಷದ ಹೈಕಮಾಂಡ್ ಆದ ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ರಂಗನಾಥ್ ಸೂಚಿಸಿದ್ದರ ಮೇರೆಗೆ ರಂಗಸ್ವಾಮಿಯರನ್ನು ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಲು ಸೂಚಿಸಲಾಯಿತು. ಉಪಾಧ್ಯಕ್ಷ ಸ್ಥಾನಕ್ಕೂ ತೀವ್ರ ಪೈಪೋಟಿ ಇದ್ದ ಕಾರಣ ಅಧಿಕಾರವಧಿಯನ್ನು ಎಂಟು ತಿಂಗಳಿಗೆ ಸೀಮಿತಗೊಳಿಸಿ ತಬಸ್ಸುಮ್ ಸದಾಖತ್‌ವುಲ್ಲಾ ಅವರನ್ನು ಉಮೇದುವಾರಿಕೆ ಸಲ್ಲಿಸಲು ಸೂಚಿಸಲಾಯಿತು.
ಸ್ಪಷ್ಟ ಬಹುಮತ ಇಲ್ಲದ ಕಾರಣ ವಿರೋಧ ಪಕ್ಷ ಬಿಜೆಪಿಯ ಸದಸ್ಯರು ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದರೆ, ಜೆಡಿಎಸ್ ನಿಂದ ಆಯ್ಕೆಯಾಗಿದ್ದ ಶಬೀನ್‌ತಾಜ್, ಮಂಜುಳಾ ಕೈಪಾಳೆಯ ಬೆಂಬಲಿಸಿ ಚುನಾವಣೆ ಕಣದಲ್ಲಿ ಪಾಲ್ಗೊಂಡರು. ಚುನವಣಾಧಿಕಾರಿಯಾದ ತಹಶೀಲ್ದಾರ್ ಮಹಾಬಲೇಶ್ವರ್ ಒಂದೆ ನಾಮಪತ್ರ ಸಲ್ಲಿಕೆಯಾದ ಮೇರೆಗೆ ಅವಿರೋಧ ಆಯ್ಕೆ ಎಂದು ಘೋಷಿಸಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದ ಶಾಸಕ ಡಾ.ರಂಗನಾಥ್, ಕೊವಿಡ್ ಸಮಸ್ಯೆಯಿಂದ ಸರ್ಕಾರದಿಂದ ಹೆಚ್ಚಿನ ಅನುದಾನ ನಿರೀಕ್ಷೆ ಮಾಡಲಾಗದು. ಆದರೂ ಇರುವ ಸಂಪನ್ಮೂಲ ಕ್ರೂಡಿಕರಿಸಿಕೊಂಡು ಪಟ್ಟಣದ ನಾಗರಿಕರಿಗೆ ಉತ್ತಮ ಸೇವೆ ನೀಡುವತ್ತಾ ಕಾಂಗ್ರೆಸ್ ಪಕ್ಷ ಪುರಸಭೆ ಆಡಳಿತ ಶ್ರಮಿಸುತ್ತದೆ, ಅವಿರೋಧ ಆಯ್ಕೆಗೆ ಸಹಕರಿಸಿದ ವಿರೋಧ ಪಕ್ಷಗಳಿಗೆ ಅಭಿನಂದನೆ ಸಲ್ಲಿಸಿದರು.
ನೂತನ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ತಾವು ಐದು ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮೂರು ಬಾರಿ ಆಯ್ಕೆಯಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ತೀವ್ರ ಆಕಾಂಕ್ಷಿಯಾಗಿದ್ದರೂ ಯಾರು ಸೂಕ್ತ ಸಹಕಾರ ನೀಡಲಿಲ್ಲ, ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ರಂಗನಾಥ್ ಗುರುತಿಸಿ ಸ್ಥಾನಮಾನ ನೀಡಿದ್ದಾರೆ, ಪಟ್ಟಣದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಸಾಕಷ್ಟು ನಿರೀಕ್ಷೆ ಇದ್ದು ಅಧಿಕಾರವಧಿಯಲ್ಲಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಶ್ರಮಿಸುತ್ತೇನೆ ಎಂದರು.
ಉಪಾಧ್ಯಕ್ಷೆ ತಬಸ್ಸುಮ್ ಸದಾಖತ್‌ವುಲ್ಲಾ, ಸ್ಥಾಯಿ ಸಮಿತಿ ಅಧ್ಯಕ್ಷ ಸಮೀವುಲ್ಲಾ, ಮುಖ್ಯಾಧಿಕಾರಿ ರವಿಕುಮಾರ್ ಸೇರಿದಂತೆ ಕಾಂಗ್ರೆಸ್ ಪುರಸಭೆ ಸದಸ್ಯರು ಇತರರು ಇದ್ದರು.
Get real time updates directly on you device, subscribe now.
Prev Post
Next Post
Comments are closed.