ಸ್ಮಾರ್ಟ್ ಸಿಟಿಯಲ್ಲಿ ತುಮಕೂರಿಗೆ ಮೊದಲ ಸ್ಥಾನ

ಮಹಾತ್ಮ ಗಾಂಧಿ ಯೋಜನೆಯಡಿ 125 ಕೋಟಿ ರೂ. ಅನುದಾನ: ಭೈರತಿ ಬಸವರಾಜು

1,259

Get real time updates directly on you device, subscribe now.

ತುಮಕೂರು: ತುಮಕೂರು ನಗರದ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ ಮಾತ್ರವಲ್ಲದೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 125 ಕೋಟಿ ರೂ. ಅನುದಾನವನ್ನು ಸರ್ಕಾರ ನೀಡಿದ್ದು, ನಗರವನ್ನು ಬೆಂಗಳೂರಿನ ಉಪನಗರವನ್ನಾಗಿ ಅಭಿವೃದ್ಧಿ ಪಡಿಸಲು ಆದ್ಯತೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌ ತಿಳಿಸಿದರು.
ಪಾಲಿಕೆ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿರುವ ಸ್ಮಾರ್ಟ್ ಸಿಟಿಗಳಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಮೊದಲನೇ ಸ್ಥಾನದಲ್ಲಿದ್ದು, ದೇಶದಲ್ಲಿ ಒಂಭತ್ತನೇ ಸ್ಥಾನ ಪಡೆದುಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಮೂಲಭೂತ ಸೌಕರ್ಯ ಹೆಚ್ಚಿಸಲು ಒತ್ತು ನೀಡಲಾಗಿದೆ, ಸ್ಮಾರ್ಟ್ ಸಿಟಿ ಕಾಮಗಾರಿಗಳಿಗಾಗಿ ಈಗಾಗಲೇ 580 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಉಳಿದ ಕಾಮಗಾರಿಗಳಿಗೆ 420 ಕೋಟಿ ರೂ. ಖರ್ಚು ಮಾಡಲು ಸಿದ್ಧವಿದ್ದೇವೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದಲ್ಲಿ ಒಟ್ಟು 109 ಕಾಮಗಾರಿ ಪೂರ್ಣಗೊಂಡಿದ್ದು, ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಮಾರ್ಚ್‌ ಮಾಹೆಯ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು.
ಸ್ಮಾರ್ಟ್ ಸಿಟಿಯಲ್ಲಿ ಅವ್ಯವಸ್ಥೆಗಳ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸ್ಮಾರ್ಟ್ ಸಿಟಿಯಲ್ಲಿ ಉಂಟಾಗಿರುವ ಲೋಪದೋಷ ಸರಿಪಡಿಸಲಾಗುವುದು, ಯೋಜನೆಯಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಅರಿವಿದ್ದು, ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದ ಅವರು, ನಗರ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ಸಕ್ರಮಗೊಳಿಸುವ ಉದ್ದೇಶದಿಂದ ಅಕ್ರಮ ಸಕ್ರಮ ಯೋಜನೆ ಜಾರಿಗೆ ತರಲಾಗುವುದು. ಈ ಯೋಜನೆ ಜಾರಿಗೊಳಿಸುವುದರಿಂದ ಜನರಿಗೂ ಅನುಕೂಲವಾಗುವುದಲ್ಲದೆ ಸರಕಾರಕ್ಕೂ ಆದಾಯ ಬರುವ ಜೊತೆಗೆ ಹೆಚ್ಚಿನ ಮೂಲ ಸೌಕರ್ಯ ಕಲ್ಪಿಸಲೂ ಅನುಕೂಲವಾಗುತ್ತದೆ ಎಂದರು.
ಬರುವ ಫೆಬ್ರವರಿ ಮಾಹೆಯಲ್ಲಿ ನಗರ ಪರ್ಯಟನೆ ಮಾಡಿ ಸ್ಮಾರ್ಟ್ ಸಿಟಿ ಯೋಜನೆ ಮತ್ತು ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡುತ್ತೇನೆ, ನಗರದ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ವಿಶೇಷ ಅನುದಾನ: ಮೂಲಸೌಕರ್ಯದಿಂದ ವಂಚಿತವಾಗಿರುವ ಸ್ಥಳೀಯ ಸಂಸ್ಥೆಗಳಿಗೆ ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ ಕಾರಣದಿಂದ ಅನುದಾನ ನೀಡಲು ಸಾಧ್ಯವಾಗಿಲ್ಲ, ಈ ವರ್ಷ ವಿಶೇಷ ಅನುದಾನ ನೀಡಲು ಮುಖ್ಯಮಂತ್ರಿ ಒಪ್ಪಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಜಿ.ಎಸ್‌.ಬಸವರಾಜು, ಮೇಯರ್‌ ಬಿ.ಜಿ.ಕೃಷ್ಣಪ್ಪ, ಉಪ ಮೇಯರ್‌ ನಾಜಿಮಾಬಿ ಇದ್ದರು.

Get real time updates directly on you device, subscribe now.

Comments are closed.

error: Content is protected !!