ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆಗಾಗಿ ಹೋರಾಟ 11ಕ್ಕೆ

113

Get real time updates directly on you device, subscribe now.

ತುಮಕೂರು: ಭಾರತೀಯ ಕಿಸಾನ್‌ ಸಂಘ, ಕರ್ನಾಟಕ ಪ್ರದೇಶ ವತಿಯಿಂದ ಜನವರಿ 11 ರಂದು ರಾಜ್ಯದ ಎಲ್ಲಾ ತಾಲೂಕು ಕೇಂದ್ರದಲ್ಲಿ ರೈತರಿಗೆ ಉತ್ಪಾದನಾ ವೆಚ್ಚ ಆಧಾರಿತ ಲಾಭದಾಯಕ ಬೆಲೆ ಸಿಗಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿ, ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ್‌ ಹೊನ್ನೇನಹಳ್ಳಿ ತಿಳಿಸಿದ್ದಾರೆ.
ನಗರದ ಶ್ರೀರಾಮಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಈ ಸಂಬಂಧ ಜನವರಿ 01 ರಿಂದ 10ರ ವರೆಗೆ ಜನ ಜಾಗೃತಿ ಸಭೆ ಆಯೋಜಿಸಲಾಗಿದೆ, ಇಡೀ ದೇಶದಾದ್ಯಂತ ಜನವರಿ 11 ರಂದು ಏಕಕಾಲಕ್ಕೆ ಈ ಪ್ರತಿಭಟನೆ ನಡೆಯಲಿದೆ ಎಂದರು.
ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದ ಕಾರಣ ಕೃಷಿ ನಷ್ಟದಲ್ಲಿದೆ. ಇದೇ ಕಾರಣದಿಂದ ಇಂದಿನ ಯುವಜನತೆ ಕೃಷಿಯಿಂದ ವಿಮುಖರಾಗುತಿದ್ದಾರೆ, ಮಾರುಕಟ್ಟೆಯಲ್ಲಿರುವ ಎಲ್ಲಾ ಸರಕಗಳ ಮೇಲೆ ಉತ್ಪಾದಕ ಉತ್ಪಾದನಾ ವೆಚ್ಚ ಮತ್ತು ಲಾಭವನ್ನು ಸೇರಿಸಿ ಬೆಲೆ ನಿಗದಿಪಡಿಸುವಂತೆ ರೈತರು ಉತ್ಪಾದಿಸುವ ಹಾಲು, ಹಣ್ಣು, ತರಕಾರಿ, ಆಹಾರೋತ್ಪನ್ನಗಳಿಗೂ ಆತನೆ ಬೆಲೆ ನಿಗದಿಪಡಿಸುವಂತಾಗಬೇಕು. ಈ ನಿಟ್ಟಿನಲ್ಲಿ ಸರಕಾರ ರೈತರ ಪರವಾಗಿ ನಿಲ್ಲಬೇಕು ಎಂಬುದು ಭಾರತೀಯ ಕಿಸಾನ್‌ ಸಂಘದ ಆಗ್ರಹವಾಗಿದೆ ಎಂದರು.
ಸರಕಾರ ರೈತರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಾರುಕಟ್ಟೆಯ ಹೊರಗೆ ಮತ್ತು ಒಳಗೆ ಎಲ್ಲಿಯೂ ಸರಕಾರ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ರೈತರ ಉತ್ಪನ್ನಗಳನ್ನು ಕೊಳ್ಳದಂತೆ ಸರಕಾರ ನೋಡಿಕೊಳ್ಳಬೇಕು, ಇತ್ತೀಚಿನ ದಿನಗಳಲ್ಲಿ ರೈತರ ಮಕ್ಕಳಿಗೆ, ಅದರಲ್ಲಿಯೂ ಕೃಷಿ ನಿರತ ಯುವಜನರಿಗೆ ಹೆಣ್ಣು ಕೊಡಲು ಯಾರು ಮುಂದೆ ಬರುತ್ತಿಲ್ಲ, ಹಾಗಾಗಿ ಕೃಷಿ ನಿರತ ಗಂಡು ಮಕ್ಕಳನ್ನು ಮದುವೆ ಮಾಡಿಕೊಳ್ಳುವ ಹೆಣ್ಣುಮಕ್ಕಳಿಗೆ ಸಹಾಯಧನ ನೀಡುವ ಕಾಯ್ದೆ ರೂಪಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ, ಈ ಎಲ್ಲಾ ಬೇಡಿಕೆಗಳನ್ನು ಇಟ್ಟುಕೊಂಡು ಜನವರಿ 11 ರಂದು ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ, ಒಂದು ವೇಳೆ ಸರಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋಬಳಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಹೋರಾಟ ರೂಪಿಸಿ, ರಾಷ್ಟ್ರಪತಿಗಳಿಗೆ ಪತ್ರ ಚಳವಳಿ ನಡೆಸಲಾಗುದು ಎಂದು ವಿಜಯಕುಮಾರ್‌ ಹೊನ್ನೇನಹಳ್ಳಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ಕಿಸಾನ್‌ ಸಂಘದ ಸಿ.ಎಸ್‌.ಗಂಗಾಧರಸ್ವಾಮಿ ಚೌಡೇನಹಳ್ಳಿ, ದಕ್ಷಿಣ ಪ್ರಾಂತ ಕಾರ್ಯದರ್ಶಿ ಸುರೇಶ್‌ ನೆಲಮಂಗಲ, ದಕ್ಷಿಣ ಪ್ರಾಂತೀಯ ಕಾರ್ಯಕಾರಣಿ ಸದಸ್ಯ ಸಂತೋಷ ಹಾರೋನಹಳ್ಳಿ, ಜಿಲ್ಲಾ ಕಾರ್ಯಕಾರಣಿ ಸದಸ್ಯ ಜಗದೀಶ್‌, ಡಿ.ಮಹಾಲಿಂಗಪ್ಪ,ತಾಲೂಕು ಕಾರ್ಯದರ್ಶಿ ನರಸೇಗೌಡ, ತುರುವೇಕೆರೆ ಅಧ್ಯಕ್ಷ ಸಿದ್ದಲಿಂಗಪ್ಪ, ತಿಪಟೂರು ಅಧ್ಯಕ್ಷ ಚಂದ್ರಶೇಖರ್‌ ಬಿ.ಎಸ್‌., ಕಾರ್ಯದರ್ಶಿ ರವಿ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!