ಸರ್ಕಾರ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲಿ: ಎಂ.ಎಲ್.ಸಿ

247

Get real time updates directly on you device, subscribe now.

ತುಮಕೂರು: ಕಳೆದ 12 ದಿನಗಳಿಂದ ಕನಿಷ್ಠ ವೇತನ ಹಾಗೂ ಸೇವಾ ಭದ್ರತೆಗಾಗಿ ಆಗ್ರಹಿಸಿ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರನ್ನು ಸರಕಾರ ನಡೆಸಿಕೊಳ್ಳುತ್ತಿರುವ ರೀತಿ ಸರಿಯಲ್ಲ ಎಂದು ವಿಧಾನಪರಿಷತ್‌ ಸದಸ್ಯ ಚಿದಾನಂದ್‌ ಎಸ್‌.ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಧರಣಿ ನಿರತ ಅತಿಥಿ ಉಪನ್ಯಾಸಕರನ್ನು ಭೇಟಿಯಾಗಿ ಅವರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ಅತಿಥಿ ಉಪನ್ಯಾಸಕರು ಭಿಕ್ಷೆ ಕೇಳುತ್ತಿಲ್ಲ, ಬದಲಾಗಿ ತಮ್ಮ ದುಡಿಮೆಗೆ ತಕ್ಕ ಪ್ರತಿಫಲ ಕೇಳುತ್ತಿದ್ದಾರೆ, ಈಗಾಗಲೇ ಒರಿಸ್ಸಾ ಸೇರಿದಂತೆ ಹಲವಾರು ರಾಜ್ಯ ಸರಕಾರಗಳು ಅತಿಥಿ ಉಪನ್ಯಾಸಕರ ಬೇಡಿಕೆಗೆ ಸ್ಪಂದಿಸಿ, ಅವರ ವೇತನ ಹೆಚ್ಚಳ ಮಾಡಿವೆ, ಹಾಗೆಯೇ ರಾಜ್ಯ ಸರಕಾರವೂ ಅತಿಥಿ ಉಪನ್ಯಾಸಕರ ನೆರವಿಗೆ ಬರಬೇಕೆಂಬುದು ನನ್ನ ಮನವಿಯಾಗಿದೆ ಎಂದರು.
ಕಳೆದ ಹತ್ತಾರು ವರ್ಷಗಳಿಂದ ಅತಿಥಿ ಉಪನ್ಯಾಸಕರು, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ 14300 ಕ್ಕೂ ಪಾಠ ಪ್ರವಚನಗಳನ್ನು ಯಾವುದೇ ನಿರ್ವಂಚನೆಯಿಲ್ಲದೆ ನಡೆಸಿಕೊಂಡು ಬರುತ್ತಿದ್ದಾರೆ, ಹಾಗಾಗಿ ಉನ್ನತ ಶಿಕ್ಷಣ ಇಲಾಖೆ ಸುಸೂತ್ರವಾಗಿ ಕೆಲಸ ಮಾಡಲು ಸಾಧ್ಯವಾಗಿದೆ, ಅವರಿಲ್ಲದೆ ಪದವಿ ಕಾಲೇಜುಗಳು ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯವಿಲ್ಲ, ಈಗ ನೀಡುತ್ತಿರುವ ವೇತನ ಯಾವುದಕ್ಕೂ ಸಾಲದು, ಓರ್ವ ಪಾನ್‌ವಾಲಾ ದಿನಕ್ಕೆ ಒಂದು ಸಾವಿರದಿಂದ 5000 ರೂ. ಗಳ ವರೆಗೆ ದುಡಿಯುವಂತಹ ಸ್ಥಿತಿ ಇದೆ, ಹಾಗಿರುವಾಗ ಕಷ್ಟಪಟ್ಟು ಓದಿ, ನೀಟ್‌, ಸ್ಲೆಟ್‌, ಪಿಹೆಚ್‌ಡಿ ಪಾಸು ಮಾಡಿ ಶಿಕ್ಷಕ ವೃತ್ತಿ ಆಯ್ಕೆ ಮಾಡಿಕೊಂಡಿರುವ ಇವರನ್ನು ಅತ್ಯಂತ ಕೀಳಾಗಿ ಕಾಣುವುದು ಸರಿಯಲ್ಲ, ಅವರಿಗೂ ಸಹ ಹೆಂಡತಿ, ಮಕ್ಕಳು ಇದ್ದಾರೆ, ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕಾಗಿರುವುದು ಸರಕಾರದ ಕರ್ತವ್ಯ, ಈ ವಿಚಾರವಾಗಿ ನಾನು ಸರಕಾರ ಹಾಗೂ ಸಂಬಂಧಪಟ್ಟ ಸಚಿವರ ಬಳಿ ಮಾತನಾಡುವುದಾಗಿ ಎಂಎಲ್‌ಸಿ ಚಿದಾನಂದ ಎಸ್‌.ಗೌಡ ಭರವಸೆ ನೀಡಿದರು.
ಸರಕಾರ ಕೋವಿಡ್‌ ಹಿನ್ನೆಲೆಯಲ್ಲಿ ಹಲವಾರು ಹೊಸ ನಿಯಮಗಳನ್ನು ಜಾರಿಗೆ ತಂದಿದೆ, ಅದರ ಭಾಗವಾಗಿ ಪ್ರತಿಭಟನೆ, ಧರಣಿ ನಿಷೇಧಿಸುವ ಸಾಧ್ಯತೆ ಇದೆ, ಒಂದು ವೇಳೆ ಹಾಗಾದರೆ ತಾವುಗಳು ಹೋರಾಟ ಕೈಬಿಡಬೇಕಾಗುತ್ತದೆ, ನಿಮ್ಮಗಳ ಹಾಗೂ ಸರಕಾರದ ಹಿತದೃಷ್ಟಿಯಿಂದ ತಾವೆಲ್ಲರೂ ಪ್ರತಿಭಟನೆ ಕೈಬಿಡಿ, ನಿಮ್ಮಗಳ ಪರವಾಗಿ ಸರಕಾರದ ಬಳಿ ಮಾತನಾಡುತ್ತೇನೆ ಎಂದರಲ್ಲದೆ, ಪೊಲೀಸರು ಸಹ ಸರಕಾರದ ಕೋವಿಡ್‌ ನಿಯಮ ಪಾಲಿಸುವಾಗ ಅತ್ಯಂತ ಗೌರವಯುತ ವಾಗಿ ನಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೈ.ಹೆಚ್‌.ಹುಚ್ಚಯ್ಯ ಮಾತನಾಡಿ, ಸರಕಾರ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಬೇಕು, ಸೇವಾ ಭದ್ರತೆ ಮತ್ತು ಕನಿಷ್ಠ ವೇತನಕ್ಕಾಗಿ ಧರಣಿ ನಡೆಸುತ್ತಿದ್ದಾರೆ, ಇದನ್ನು ಲಘುವಾಗಿ ಪರಿಗಣಿಸಬಾರದು ಎಂದರು.
ಧರಣಿ ವೇಳೆ ನಿವೃತ್ತ ಪ್ರಾಚಾರ್ಯ ಪೊ.ಕೆ.ವಿ.ಕೃಷ್ಣಮೂರ್ತಿ, ಅತಿಥಿ ಉಪನ್ಯಾಸಕರಾದ ಡಾ.ಕುಮಾರ್‌, ಡಾ.ಶಿವಣ್ಣ ತಿಮ್ಮಲಾಪುರ, ನಾಗಣ್ಣ.ಜಿ.ಕೆ, ಡಾ.ಮಲ್ಲಿಕಾರ್ಜುನ, ಡಾ.ಶಿವಯ್ಯ, ಡಾ.ಗುಡ್ಡಣ್ಣ, ಗಂಗಾಂಭಿಕೆ, ಅಂಬಿಕಾ, ಹೇಮಾವತಿ, ಅಂಜನಮೂರ್ತಿ, ಸುನಿಲ್‌ಕುಮಾರ್‌, ಮಹದೇವ್‌, ಚೇತನ ಡಿ.ರಾಜ್, ಎಂ.ಶ್ರೀನಿವಾಸ್‌, ಹರೀಶ್‌ಕುಮಾರ್‌, ರಮಾ, ರಾಜೇಶ್ವರಿ, ನಾಗೇಂದ್ರ, ಮಂಜುನಾಥ್‌, ಶನಿವಾರಪ್ಪ, ರವೀಂದ್ರ ಮತ್ತಿತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!