ನಗರಗಳ ಅಭಿವೃದ್ಧಿಗೆ ಆದ್ಯತೆ: ಭೈರತಿ ಬಸವರಾಜು

ತುಮಕೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಲೋಕಾರ್ಪಣೆ

116

Get real time updates directly on you device, subscribe now.

ತುಮಕೂರು: ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌ ಅವರು ಮಹಾನಗರ ಪಾಲಿಕೆ ಆವರಣದಲ್ಲಿ ನಿರ್ಮಿಸಿರುವ ನೂತನ ಆಡಳಿತ ಕಚೇರಿ ಕಟ್ಟಡ, ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ವತಿಯಿಂದ ಕೊಳಗೇರಿ ಪ್ರದೇಶದ ನಿವಾಸಿಗಳಿಗೆ ಪುನರ್‌ವಸತಿ ಯೋಜನೆಯಡಿ ಮಾರಿಯಮ್ಮ ನಗರದಲ್ಲಿ ನಿರ್ಮಿಸಿರುವ ವಸತಿ ಸಂಕೀರ್ಣ ಉದ್ಘಾಟನೆ ಹಾಗೂ ನಗರದ ಎಂಪ್ರೆಸ್‌ ಕರ್ನಾಟಕ ಪಬ್ಲಿಕ್‌ ಶಾಲೆ ಆವರಣದಲ್ಲಿ ನಿರ್ಮಿಸಿರುವ ನೂತನ ಸಭಾಂಗಣ, ಪ್ರಯೋಗಾಲಯ ಹಾಗೂ ಗ್ರಂಥಾಲಯ ಕಟ್ಟಡಗಳನ್ನು ಲೋಕಾರ್ಪಣೆ ಮಾಡಿದರು.
ಎಂಪ್ರೆಸ್‌ ಕರ್ನಾಟಕ ಪಬ್ಲಿಕ್‌ ಶಾಲೆಯ ನೂತನ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿ ಮಾತನಾಡಿ, 8 ಕೋಟಿ ರೂ. ವೆಚ್ಚದಲ್ಲಿ ನೂತನ ಆಡಳಿತ ಕಚೇರಿ ಕಟ್ಟಡ, 14.01 ಕೋಟಿ ರೂ. ವೆಚ್ಚದಲ್ಲಿ ಮಾರಿಯಮ್ಮ ನಗರದಲ್ಲಿ ವಸತಿ ಸಂಕೀರ್ಣ ಹಾಗೂ 13.54 ಕೋಟಿ ರೂ. ವೆಚ್ಚದಲ್ಲಿ ನಗರದ ಎಂಪ್ರೆಸ್‌ ಕರ್ನಾಟಕ ಪಬ್ಲಿಕ್‌ ಶಾಲೆ ಆವರಣದಲ್ಲಿ ನೂತನ ಸಭಾಂಗಣ, ಪ್ರಯೋಗಾಲಯ ಹಾಗೂ ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಿ ಲೋಕಾರ್ಪಣೆಗೊಳಿಸಲಾಗಿದೆ ಎಂದು ತಿಳಿಸಿದರು.
ನಗರದಲ್ಲಿ ಕ್ರೀಡಾಂಗಣ, ರಸ್ತೆ, ಸ್ಮಾರ್ಟ್‌ ಶಾಲೆ, ಉದ್ಯಾನವನ, ಸರ್ಕಾರಿ ಆಸ್ಪತ್ರೆ, ಸಿಸಿ ಟಿವಿ ಅಳವಡಿಕೆ ಸೇರಿದಂತೆ ಹಲವಾರು ಯೋಜನೆಗಳಿಗೆ ಸ್ಮಾರ್ಟ್‌ ಸಿಟಿ ಭದ್ರಬುನಾದಿ ಹಾಕಿದೆ, ಇದರಿಂದ ಇನ್ನಾರು ತಿಂಗಳಲ್ಲಿ ನಗರದ ಸ್ವರೂಪ ಬದಲಾಗಲಿದೆ, ತುಮಕೂರು ನಗರವನ್ನು ಮಾದರಿ ನಗರವನ್ನಾಗಿ ನಿರ್ಮಿಸಲು ನಾವು ಕಟಿಬದ್ಧರಾಗಿದ್ದೇವೆ ಎಂದರಲ್ಲದೆ, ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಜನರ ನಿರೀಕ್ಷೆಯಂತೆ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಕೊಳಗೇರಿ ನಿವಾಸಿಗಳ 87 ಬಡ ಕುಟುಂಬಗಳಿಗಾಗಿ ಮಾರಿಯಮ್ಮ ನಗರದಲ್ಲಿ ವಸತಿ ಸಂಕೀರ್ಣ ನಿರ್ಮಿಸಿರುವುದು ಸ್ಮಾರ್ಟ್‌ಸಿಟಿ ಯೋಜನೆಯ ಮತ್ತೊಂದು ಹೆಗ್ಗಳಿಕೆಯಾಗಿದೆ, ಪ್ರಸಕ್ತ ವರ್ಷ ಮೂಲಭೂತ ಸೌಕರ್ಯಗಳಿಂದ ವಂಚಿತವಾದ ನಗರ ಪ್ರದೇಶಗಳ ಪಟ್ಟಿ ಸಲ್ಲಿಸಲು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರಲ್ಲದೆ, ನಗರಾಭಿವೃದ್ಧಿ ಕಾಮಗಾರಿಗಳಲ್ಲಿ ನ್ಯೂನ್ಯತೆಗಳಿದ್ದಲ್ಲಿ ಅವುಗಳನ್ನು ಸರಿಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದರು.
ನಂತರ ಸಚಿವರು ಮಾರಿಯಮ್ಮ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ನೀಡಿದರು. ಸ್ಲಂಬೋರ್ಡ್‌ ಸಂಚಾಲಕ ನರಸಿಂಹಮೂರ್ತಿ ಮಾತನಾಡಿ, ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಕನಸನ್ನು ನನಸು ಮಾಡುವ ಮೂಲಕ ಮಾರಿಯಮ್ಮ ನಗರದ ಕೊಳಗೇರಿ ಜನರ ಜೀವನ ಶೈಲಿ ಬದಲಿಸುವ ಪ್ರಯತ್ನ ಮಾಡಲಾಗಿದೆ. ಕೊಳಗೇರಿ ನಿವಾಸಿಗಳ ಹೋರಾಟಕ್ಕೆ ಜಯ ದೊರೆತಿದ್ದು, ಕೊಳಗೇರಿ ನಿವಾಸಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸಿದ ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಅಭಿನಂದಿಸಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ.ನಾಗೇಶ್‌ ವೆಬಿನಾರ್‌ ಮೂಲಕ ಮಾತನಾಡಿ, ಸರ್ವ ಶಿಕ್ಷ ಅಭಿಯಾನದಡಿ ವಿದ್ಯಾರ್ಥಿಗಳ ಭೌತಿಕ ಮಟ್ಟ ಹಾಗೂ ಜ್ಞಾನಾರ್ಜನೆ ಹೆಚ್ಚಿಸುವ ದೃಷ್ಟಿಯಿಂದ ನಗರದ ಎಂಪ್ರೆಸ್‌ ಶಾಲೆಯನ್ನು ಸ್ಮಾರ್ಟ್‌ ಶಾಲೆಯನ್ನಾಗಿ ಮಾರ್ಪಾಡು ಮಾಡಲಾಗಿದೆ, ಅಲ್ಲದೆ ಮಕ್ಕಳ ಅಭ್ಯಾಸಕ್ಕೆ ಅನುಕೂಲವಾಗುವಂತೆ ನೂತನ ಆಡಿಟೋರಿಯಂ ಕಟ್ಟಡ, ಪ್ರಯೋಗಾಲಯ ನಿರ್ಮಿಸಲಾಗಿದ್ದು, ವಿದ್ಯಾರ್ಥಿಗಳು ಸ್ವಚ್ಛತೆ ಕಾಪಾಡಿಕೊಂಡು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಕೋವಿಡ್‌ನಂತಹ ಮಹಾಮಾರಿಯನ್ನು ನಿಯಂತ್ರಿಸಲು 15 ವರ್ಷ ಮೇಲ್ಪಟ್ಟ ಮಕ್ಕಳು ತಪ್ಪದೇ ಕೋವಿಡ್‌ ಲಸಿಕೆ ಪಡೆಯಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಸೇರಿದಂತೆ ಕಡ್ಡಾಯವಾಗಿ ಕೋವಿಡ್‌ ನಿಯಮ ಪಾಲನೆ ಮಾಡಬೇಕೆಂದು ವಿದ್ಯಾರ್ಥಿಗಳು ಕಿವಿಮಾತು ಹೇಳಿದರು.
ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ಮಾತನಾಡಿ, ವಿದ್ಯಾರ್ಥಿಗಳು ಮೊದಲು ತಮ್ಮ ಶಾಲೆ, ಜಿಲ್ಲೆಯ ಬಗ್ಗೆ ಅಭಿಮಾನ ಹೊಂದಿರಬೇಕು, ಜಿಲ್ಲೆಯ ಸಕಾರಾತ್ಮಕ ಅಭಿವೃದ್ಧಿಯನ್ನು ನಾವು ಪ್ರೀತಿಸಬೇಕು ಎಂದು ತಿಳಿಸಿದರಲ್ಲದೆ, ಕೋವಿಡ್‌ 3ನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ವಿದ್ಯಾರ್ಥಿಗಳು ಕೋವಿಡ್‌ ನಿಯಮಗಳನ್ನು ಪಾಲಿಸುವ ಮೂಲಕ ತಮ್ಮ ಮನೆಯಲ್ಲಿರುವ ಹಿರಿಯರನ್ನು ಕೋವಿಡ್‌ನಿಂದ ರಕ್ಷಿಸಬೇಕು ಎಂದು ತಿಳಿಸಿದರು.
ಮೇಯರ್‌ ಕೃಷ್ಣಪ್ಪ ಮಾತನಾಡಿ, ನಗರದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಉಂಟಾಗಿರುವ ಅನಾನುಕೂಲಗಳನ್ನು ಶೀಘ್ರ ಸರಿಪಡಿಸಲಾಗುವುದು, ನಾಗರಿಕರು ಪಾಲಿಕೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಕಾನೂನು ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಸ್‌.ಬಸವರಾಜು, ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಟೂಡಾ ಅಧ್ಯಕ್ಷ ಬಾವಿಕಟ್ಟೆ ನಾಗೇಶ್‌, ಉಪವಿಭಾಗಾಧಿಕಾರಿ ಅಜಯ್‌, ಸ್ಮಾರ್ಟ್‌ಸಿಟಿ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ, ಪಾಲಿಕೆ ಆಯುಕ್ತೆ ರೇಣುಕಾ, ಎಂಪ್ರೆಸ್‌ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!