ತುಮಕೂರು: ತುಮಕೂರು ಸೇರಿದಂತೆ 11 ಜಿಲ್ಲೆಗಳಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಬಲಗೊಳಿಸಬೇಕಾದವರು, ಹಿರಿಯ ಮುತ್ಸದ್ಧಿ ಹಾಗೂ ಸಂಸದ ಜಿ.ಎಸ್.ಬಸವರಾಜು ಕಾಮನ್ಸೆನ್ಸ್ ಇಲ್ಲದ ಹಾಗೆ ಮಾತನಾಡುವ ಮೂಲಕ ತುಮಕೂರು ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಮತ್ತೊಮ್ಮೆ ಖಾತ್ರಿಪಡಿಸಿದ್ದಾರೆ.
ಜಿಲ್ಲಾ ಬಿಜೆಪಿಯಲ್ಲಿ ಸಂಸದ ಜಿ.ಎಸ್.ಬಸವರಾಜು, ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಬಿ.ಸುರೇಶ್ಗೌಡ ನೇತೃತ್ವದ ಮೂರು ಬಣಗಳಿರುವುದು ಗುಟ್ಟಾಗೇನು ಉಳಿದಿಲ್ಲ, ಮೊನ್ನೆ ಮೊನ್ನೆಯಷ್ಟೇ ಸೊಗಡು ಶಿವಣ್ಣ ಅವರು ದತ್ತ ಪೀಠಕ್ಕೆ ಯಾತ್ರೆ ತೆರಳುವ ವಿಚಾರದಲ್ಲಿ ಕೈ ಮುಂದೆ ಮಾಡಿ ಸುದ್ದಿಯಾಗಿದ್ದರು. ಇನ್ನೂ ಮಾಜಿ ಶಾಸಕ ಸುರೇಶ್ ಗೌಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಹಿರಿಯ ಮುತ್ಸದ್ದಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು, ಇವರ ಈ ಭಿನ್ನಮತದಿಂದ ಎಂಎಲ್ಸಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಬೇಕಾಯಿತು, ಈಚೆಗೆ ನಡೆದ ಶಿರಾ ನಗರಸಭೆ ಚುನಾವಣೆಯಲ್ಲೂ ಕಾರ್ಯಕರ್ತರನ್ನು ವಿಶ್ವಾಕ್ಕೆ ಪಡೆಯದೆ ಬೇಕಾಬಿಟ್ಟಿಯಾಗಿ ಬಿ ಫಾರಂ ನೀಡಿ 4 ವಾರ್ಡ್ ಗೆದ್ದು ತೃಪ್ತಿಪಡಬೇಕಾಯಿತು. ಸೂಕ್ತ ಸ್ಥಾನ ಮಾನ ಸಿಕ್ಕಿಲ್ಲವೆಂದು ಶಾಸಕ ಮಸಾಲ ಜಯರಾಂ ಕೂಡ ಈ ಹಿಂದೆ ಸಿಡಿದೆದ್ದಿದ್ದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು ಹೆಚ್ಚಿನ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡಬೇಕಾದವರು ಒಬ್ಬರಿಗೊಬ್ಬರು ಕಚ್ಚಾಡಿಕೊಳ್ಳುವ ಮೂಲಕ ಬೀದಿರಂಪ ಮಾಡಿಕೊಳ್ಳುತ್ತಿದ್ದಾರೆ. ನಾಯಕರ ಕಿತ್ತಾಟದಿಂದ ಕಾರ್ಯಕರ್ತರೂ ರೋಸಿ ಹೋಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ಕಾವೇರುವ ಮುನ್ನವೇ ನಾಯಕರ ಪಕ್ಷಾಂತರ ಜಿಲ್ಲಾ ಬಿಜೆಪಿ ಮನೆ ಛಿದ್ರವಾಗುವುದರ ಮುನ್ಸೂಚನೆ ಆಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಸಚಿವರ ಮೇಲೆ ಕೆಂಡ ಕಾರಿದ ಸಂಸದ ಜಿ.ಎಸ್.ಬಿ
ಮಾಧುಸ್ವಾಮಿ ಝಿಂಗ್ ಪಿನ್!
ತುಮಕೂರು: ದಕ್ಷಿಣ ಕೋರಿಯಾದ ಝಿಂಗ್ ಪಿನ್ ಇದ್ದಾನಲ್ಲ, ಕೆಟ್ಟ ….. ಮಗ, ಅದೇ ತರಹ ನಮ್ಮ ಜಿಲ್ಲೆಯಲ್ಲೂ ಈವಾಗ ಮಂತ್ರಿಯಾಗಿದ್ದಾನೆ, ಅವನು ಅದೇ ತರಹ ನಡೆದುಕೊಳ್ಳುತ್ತಿದ್ದಾನೆ, ಇವನು ನಮ್ಮ ಜಿಲ್ಲೆಯನ್ನೇ ಹಾಳು ಮಾಡಿಬಿಟ್ಟಿದ್ದಾನೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಸಂಸದ ಜಿ.ಎಸ್.ಬಸವರಾಜ್ ತಮ್ಮ ಒಳ ಮನಸ್ಸಿನ ಕೋಪವನ್ನು ಗೆಳೆಯ ಭೈರತಿ ಬಸವರಾಜುರೊಡನೆ ಹೇಳಿಕೊಂಡು ಇದೀಗ ಸುದ್ದಿಯಾಗಿದ್ದಾರೆ.
ತುಮಕೂರಿನಲ್ಲಿ ಸುದ್ದಿಗೋಷ್ಠಿ ವೇಳೆ ಸಂಸದ ಜಿ.ಎಸ್ ಬಸವರಾಜ್ ಹಾಗೂ ಸಚಿವ ಬೈರತಿ ಬಸವರಾಜ್ ಅವರು ಸಚಿವ ಮಾಧುಸ್ವಾಮಿ ವಿರುದ್ಧ ಗುಸು, ಗುಸು ಎಂದು ಮಾತನಾಡಿಕೊಂಡಿರುವುದು ಈಗ ವೈರಲ್ ಆಗಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಆ ಸಂಭಾಷಣೆಯಲ್ಲಿ ಸಚಿವ ಮಾಧುಸ್ವಾಮಿ ವಿರುದ್ಧ ಸಂಸದ ಬಸವರಾಜು ಆರೋಪಗಳ ಸುರಿಮಳೆಗೈದಿದ್ದಾರೆ. ಜಿ.ಎಸ್. ಬಸವರಾಜು ಬೈಯಲು ಆರಂಭಿಸುತ್ತಾರೆ, ಆಗ ಬೈರತಿ ಬಸವರಾಜ್ ಸುಮ್ಮನಿರು, ಆಮೇಲೆ ಈ ಬಗ್ಗೆ ಮಾತನಾಡೋಣಾ ಎನ್ನುತ್ತಾರೆ, ಆದರೂ ಸುಮ್ಮನಿರದ ಸಂಸದರು ನೋಡು ಜಿಲ್ಲೆಯಲ್ಲಿ ಒಂದು ಸೀಟ್ ಬರಲ್ಲ ನಮ್ಮ ಪಕ್ಷಕ್ಕೆ, ಆ ತರಹ ಮಾಡಿದ್ದಾನೆ ಎನ್ನುತ್ತಾ, ಮಾತಾಡಿದರೆ ಸಾಕು ಹೊಡಿ, ಬಡಿ, ಕಡಿ ಅಂತಾನೆ, ಅವನ್ಯಾರೋ ಎಕ್ಸಿಕ್ಯುಟಿವ್ ಇಂಜಿನಿಯರ್ ಗೆ ಹೆಂಡತಿ ಸೀರೆ ಒಗೆಯುವುದಕ್ಕೆ ಇವನು ಲಾಯಕ್ ಅಂತಾ ಬೈಯುತ್ತಾನೆ, ಒಂದು ಹ್ಯಾಂಡ್ ಬಿಲ್ ಪ್ರಿಂಟ್ ಮಾಡಿಸಲ್ಲ, ಮೊನ್ನೆ ಸಾವಿರ ಕೋಟಿ ಅವನ ಕ್ಷೇತ್ರಕ್ಕೆ ಡಿಕ್ಲೇರ್ ಮಾಡಿಕೊಂಡು ಬಂದಿದ್ದಾನೆ, ನಮಗೆ ಯಾರಿಗೂ ಇನ್ವಿಟೇಶನ್ ಇಲ್ಲ, ಕರೆಯೋದು ಇಲ್ಲ, ನಿಮ್ಮ ಇಲಾಖೆಗೆ ಬಂದು ಹೇಳಿದರೆ ತಲೆಕೆಡಿಸಿಕೊಳ್ಳಬೇಡಿ ಎಂದು ಹೆಸರೆ ಹೇಳದೇ ಮಾಧುಸ್ವಾಮಿ ವಿರುದ್ಧ ಜಿ.ಎಸ್.ಬಸವರಾಜ್ ರೋಶಾವೇಷ ತಾಳಿದ್ದರು. ಈ ಮಾತುಗಳು ಪಕ್ಷದಲ್ಲಿನ ಒಡಕು, ಮುನಿಸು, ದ್ವೇಷ ಇರುವುದನ್ನು ಖಾತ್ರಿ ಪಡಿಸಿದೆ, ಮುಂದೆ ಇದು ಯಾವ ಹಂತಕ್ಕೆ ತಲುಪಲಿದೆಯೋ ಕಾದು ನೋಡಬೇಕು.
ಮಾಧುಸ್ವಾಮಿ ಹೇಳಿದ್ದೇನು?
ನೋಡಿ.. ನನಗೆ ಕ್ಯಾಬಿನೆಟ್ ಮೀಟಿಂಗ್ ಇತ್ತು, ನಾನು 9.30 ಒಳಗೆ ಕಾರ್ಯಕ್ರಮಕ್ಕೆ ಚಾಲನೆ ನೀಡೋದಾದ್ರೆ ಇರ್ತೇನೆ ಅಂತ ಭೈರತಿ ಬಸವರಾಜು ಅವರಿಗೆ ಹೇಳಿದ್ದೆ, ಕಾರ್ಯಕ್ರಮ ಆರಂಭವಾಗೋದು ತಡ ಆಯಿತು, ಸೀದಾ ಅಲ್ಲಿಂದ ಕ್ಯಾಬಿನೆಟ್ ಗೆ ಬಂದಿದ್ದೇನೆ, ನಾನು ದೊಡ್ಡವರ ಬಗ್ಗೆ ಏನೂ ಪ್ರತಿಕ್ರಿಯೆ ನೀಡೋಲ್ಲ, ಅವರ ಮನಸ್ಸಿನ ಮಾತು ಹೊರಬಂದಿದೆ, ಪಕ್ಷದಿಂದ ತೆಗೀತಾರಾ ತೆಗೆದುಬಿಡ್ಲಿ ಬಿಡಿ.
Comments are closed.