ಕುಣಿಗಲ್: ತಾಂತ್ರಿಕ ಸಮಸ್ಯೆಯಿಂದಾಗಿ ಸರ್ವರ್ ಕೈಕೊಟ್ಟ ಕಾರಣ ರಾಗಿ ಖರೀದಿಗೆ ನೋಂದಣಿ ಮಾಡಿಸಲು ಬಂದಿದ್ದ ರೈತರು ಪರದಾಡಿದ್ದು, ಸ್ಥಳಕ್ಕೆ ಅಗಮಿಸಿದ ಬಿಜೆಪಿ ಮುಖಂಡ ಪಿಎಲ್‌ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಪಟ್ಟಣದ ಆರ್‌ಎಂಸಿ ಯಾರ್ಡ್ ನಲ್ಲಿರುವ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಹಾಕಲು ರೈತರ ನೋಂದಣಿ ಕಾರ್ಯ ನಡೆಯುತ್ತಿದೆ, ಸೋಮವಾರ ತಾಲೂಕಿನ ವಿವಿಧೆಡೆಯಿಂದ 800 ಕ್ಕೂ ಹೆಚ್ಚು ರೈತರು ನೋಂದಣಿಗೆ ಆಗಮಿಸಿದ್ದರು. ಸರ್ವರ್ ಕೈಕೊಟ್ಟ ಕಾರಣ ನೋಂದಣಿ ಪ್ರಕ್ರಿಯೆ ಸ್ಥಗಿತವಾಗಿದ್ದು, ಅಧಿಕಾರಿಗಳು ಸ್ಥಳದಿಂದ ಬೇರೆಡೆ ತೆರಳಿದ್ದರು. ಮಧ್ಯಾಹ್ನವಾದರೂ ಅಧಿಕಾರಿಗಳು ಬಾರದ ಕಾರಣ ಬಿಸಿಲಿನಲ್ಲಿ ಸೂಕ್ತ ಮೂಲಭೂತ ಸೌಕರ್ಯ ಇಲ್ಲದೆ ರೈತರು ಹೈರಾಣಾದರು, ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬಿಜೆಪಿ ಮುಖಂಡ, ಪಿಎಲ್‌ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್ ಅವರಿಗೆ ರೈತರು ಸಮಸ್ಯೆಯ ಸರಮಾಲೆ ಮುಂದಿಟ್ಟರು. ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿಕೊಂಡ ಅವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ರಾಗಿ ಖರೀದಿ ಕೇಂದ್ರ ಕನಿಷ್ಟ ಮೂಲ ಸೌಕರ್ಯಗಳಾದ ನೀರು, ನೆರಳಿನ ವ್ಯವಸ್ಥೆ ಮಾಡಿಲ್ಲ, ವರ್ಷ ಪೂರ್ತಿ ದೇಶಕ್ಕೆ ಅನ್ನ ಹಾಕುವ ಅನ್ನದಾತನಿಗೆ ನೀರು, ನೆರಳು ಕೊಡದ ಅಧಿಕಾರಿಗಳ ಧೋರಣೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತಾಗಿದೆ. ನಿಮಗೆ ಮನುಷತ್ವ ಇಲ್ಲವೆ, ಕುಡಿಯುವ ನೀರಿನ ವ್ಯವಸ್ಥೆ ಮಾಡದೆ, ನೆರಳಿನ ವ್ಯವಸ್ಥೆಯೂ ಮಾಡದೆ ರೈತರನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿದ್ದೀರಾ ಎಂದು ಝಾಡಿಸಿದರು. ಅಧಿಕಾರಿಗಳು ನೀರಿನ ವ್ಯವಸ್ಥೆ ಮಾಡಿದ್ದೇವೆ ಎಂಬ ಸಬೂಬು ಹೇಳಿ ಸರ್ವರ್ ಸಮಸ್ಯೆ ಕಾರಣ ತೊಂದರೆ ಆಗಿದೆ ಎಂದರು.
ಡಿ.ಕೃಷ್ಣಕುಮಾರ್ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿದ ಮೇರೆಗೆ ಸರ್ವರ್ ಸಮಸ್ಯೆ ಆದಷ್ಟು ಶೀಘ್ರ ಬಗೆಹರಿಸುವ ಭರವಸೆ ನೀಡಿದರು. ಕೆಲ ರೈತರು ಮೂರು ಎಕರೆ ಮೇಲ್ಪಟ್ಟು ಸಮರ್ಪಕ ನೋಂದಣಿ ಆಗುತ್ತಿಲ್ಲ ಎಂದು ದೂರಿದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಕೋರಿದ್ದು, ಸಚಿವರು ಈ ನಿಟ್ಟಿನಲ್ಲಿ ಶೀಘ್ರದಲ್ಲೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ನಂತರ ತಹಶೀಲ್ದಾರ್ ಅವರನ್ನು ಸ್ಥಳಕ್ಕೆ ಕರೆಸಿ ಕೇಂದ್ರಕ್ಕೆ ಬರುವ ರೈತರಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮಾಡಬೇಕು, ಸಮಸ್ಯೆ ಆಗದ ರೀತಿಯಲ್ಲಿ ಖರೀದಿ ಕೇಂದ್ರ ನಡೆಸಬೇಕೆಂದು ತಾಕೀತು ಮಾಡಿದರು.
ತಹಶೀಲ್ದಾರ್ ಮಹಾಬಲೇಶ್ವರ್ ಮಾತನಾಡಿ, ಇದೇ ತಿಂಗಳ 31 ವರೆಗೂ ನೋಂದಣಿ ಪ್ರಕ್ರಿಯೆ ನಡೆಯುತ್ತದೆ, ರೈತರು ಆತಂಕಪಡುವುದು ಬೇಡ, ಹೆಚ್ಚಿನ ರೈತರು ಬಂದಲ್ಲಿ ಇನ್ನು ಎರಡು ನೋಂದಣಿ ಕೌಂಟರ್ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದರು. ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ್, ಮುಖಂಡರಾದ ದೊಡ್ಡ ಮಾವತ್ತೂರು ಶಶಿಧರ, ರಾಜೇಂದ್ರ, ರಮೇಶ, ಇತರರು ಇದ್ದರು.
Get real time updates directly on you device, subscribe now.
Next Post
Comments are closed.