ವೇತನ ಹೆಚ್ಚಳಕ್ಕೆ ಬಿಸಿಯೂಟ ತಯಾರಕರ ಒತ್ತಾಯ

259

Get real time updates directly on you device, subscribe now.

ತುಮಕೂರು: ಬಿಸಿಯೂಟ ತಯಾರಿಕರಿಗೆ ಮುಂದಿನ ಬಜೆಟ್‌ನಲ್ಲಿ ವೇತನ ಹೆಚ್ಚಳ ಹಾಗೂ ಸರ್ಕಾರದ ಸವಲತ್ತು ಒದಗಿಸುವುದರ ಜೊತೆಗೆ ಕೆಲಸ ಖಾಯಂಗೊಳಿಸುವಂತೆ ಅಕ್ಷರ ದಾಸೋಹ ಬಿಸಿಯೂಟ ತಯಾರಕರು ಪ್ರಧಾನ ಮಂತ್ರಿ ನರೇಂದ್ರಮೋದಿಯವರಿಗೆ ತಹಶೀಲ್ದಾರ್‌ ಮೋಹನ್‌ಕುಮಾರ್‌ ಮೂಲಕ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ ರಾಜ್ಯ ಸಮಿತಿಯ ಕರೆಯ ಮೇರೆಗೆ ಬಿಸಿಯೂಟ ತಯಾರಕರ ತುಮಕೂರು ತಾಲ್ಲೂಕು ಸಮಿತಿ ಸಭೆ ಸೇರಿ ಮಧ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ ಕಳೆದ ಹತ್ತೊಂಬತ್ತು ವರ್ಷಗಳಿಂದ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಲ್ಲಿ ಬಿಸಿಯೂಟ ತಯಾರಕರಾಗಿ ಕೆಲಸ ನಿರ್ವಹಿಸುತ್ತಿರುವ ಅಡುಗೆಯವರು ಜೀವನ ಭದ್ರತೆ ಇಲ್ಲದೆ ನಲುಗುತ್ತಿದ್ದು, ದಿನದಲ್ಲಿ ಆರು ತಾಸು ಕೆಲಸ ಮಾಡುತ್ತಿರುವ ಮುಖ್ಯ ಅಡುಗೆಯವರಿಗೆ ತಿಂಗಳಿಗೆ ಸಂಭಾವನೆಯಾಗಿ 2,700 ರೂ. ಸಹಾಯಕ ಅಡುಗೆಯವರಿಗೆ 2,600 ರೂ. ಮಾತ್ರ ದೊರೆಯುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದರಿಂದ ಕುಟುಂಬ ನಿರ್ವಹಣೆ ಸಾಧ್ಯವಾಗುತ್ತಿಲ್ಲ, ಆದ್ದರಿಂದ ಬಿಸಿಯೂಟ ತಯಾರಕರಿಗೆ ಕೇಂದ್ರ ಸರ್ಕಾರ 2021- 22ರ ಬಜೆಟ್‌ನಲ್ಲಿ ಸರ್ಕಾರ ನಿಗದಿಪಡಿಸಿರುವ ಕನಿಷ್ಟ ವೇತನ ಜಾರಿಗೊಳಿಸುವುದು ಸೇರಿದಂತೆ ಇತರ ಬೇಡಿಕೆ ಈಡೇರಿಸಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರನ್ನು ಎಐಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ ತುಮಕೂರು ತಾಲ್ಲೂಕು ಸಮಿತಿ ಒತ್ತಾಯಿಸಿದೆ.
ಬಿಸಿಯೂಟ ತಯಾರಕರಿಗೆ ಸರ್ಕಾರ ಕನಿಷ್ಟ 21,000 ರೂ. ಮಾಸಿಕ ವೇತನ ಜಾರಿಗೊಳಿಸಬೇಕು, ಬಿಸಿಯೂಟ ತಯಾರಕರಿಗೆ ಉತ್ತರ ಪ್ರದೇಶ ರಾಜ್ಯದ ಅಲಹಾಬಾದ್‌ ಹೈಕೋರ್ಟ್‌ ಆದೇಶಿಸಿರುವಂತೆ ಅವರ ಕೆಲಸ ಖಾಯಂಗೊಳಿಸಿ ಎಲ್ಲಾ ರೀತಿಯ ಸೌಲಭ್ಯ ಒದಗಿಸಬೇಕು, ಬಿಸಿಯೂಟ ತಯಾರಿಕೆ ಮತ್ತು ಪೂರೈಕೆಯನ್ನು ಖಾಸಗಿ ಸಂಸ್ಥೆಯವರಿಗೆ ವಹಿಸುವ ನಿರ್ಧಾರವನ್ನು ಸರ್ಕಾರ ಕೂಡಲೆ ಕೈಬಿಡಬೇಕು ಎಂದು ಮನವಿ ಮಾಡಲಾಗಿದೆ.
ಬಿಸಿಯೂಟ ತಯಾರಿಕೆ ಯೋಜನೆ ಎನ್ನುವುದನ್ನು ಬದಲಾಯಿಸಿ ನಿರಂತರ ಕಾರ್ಯಕ್ರಮ ಎಂದು ಮಾರ್ಪಡಿಸಬೇಕು, ಬಿಸಿಯೂಟ ಅಡುಗೆ ತಯಾರಕರನ್ನು ಗೌರವ ಕಾರ್ಯಕರ್ತೆಯರು ಎಂಬುದನ್ನು ಕೈಬಿಟ್ಟು ಕಾರ್ಮಿಕರು ಎಂದು ಘೋಷಿಸಿ ಬಿಸಿಯೂಟ ತಯಾರಕರನ್ನು ಕಾರ್ಮಿಕ ಇಲಾಖೆಯ ವ್ಯಾಪ್ತಿಗೆಒಳಪಡಿಸಬೇಕು, ವರ್ಷ ವಯೋಮಾನ ಮೀರಿ ನಿವೃತ್ತಿಯಾದವರಿಗೆ 2 ಲಕ್ಷ ರೂ. ಇಡುಗಂಟು ನೀಡಬೇಕು ಮತ್ತು ಮಾಸಿಕ ನಿವೃತ್ತಿ ಪಿಂಚಣಿ 3000 ರೂ. ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಿಯೋಗದಲ್ಲಿ ಜಿಲ್ಲಾ ಸಂಚಾಲಕ ಕಂಬೇಗೌಡ, ಅಕ್ಷರ ದಾಸೋಹ ಬಿಸಿಯೂಟ ಕಾರ್ಮಿಕರ ಸಂಘದ ಅಧ್ಯಕ್ಷೆ ರೇಣುಕಮ್ಮ, ಕಾರ್ಯದರ್ಶಿ ಉಮಾದೇಶಿ, ಖಜಾಂಚಿ ಮಂಜುಳ ಮತ್ತಿತರರಿದ್ದರು.

Get real time updates directly on you device, subscribe now.

Comments are closed.

error: Content is protected !!