ತುಮಕೂರು: ಕೋವಿಡ್ ಮೂರನೇ ಅಲೆ ಹೆಚ್ಚಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊರೋನಾ ವಾರಿಯರ್ಸ್ ಮತ್ತು 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ರಮಕ್ಕೆ ನಗರ ಶಾಸಕ ಜ್ಯೋತಿಗಣೇಶ್ ಚಾಲನೆ ನೀಡಿದರು.
ನಗರದ ಜಿಲ್ಲಾಸ್ಪತ್ರೆಯಲ್ಲಿ ಬೂಸ್ಟರ್ ಡೋಸ್ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಎರಡನೇ ಲಸಿಕೆ ಪಡೆದು ಒಂಭತ್ತು ತಿಂಗಳು ಕಳೆದವರು ಭಯಭೀತಿಗೆ ಒಳಗಾಗದೇ ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕು, ಕೋವಿಡ್ ತಡೆಯಲು ಸಹಕಾರದೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ನಿಯಮಾವಳಿಗಳನ್ನು ರಾಜಕಾರಣಿಗಳಾದಿಯಾಗಿ ಎಲ್ಲರು ಪಾಲಿಸಬೇಕು, ಕೋವಿಡ್ ನಿಯಮ ಪಾಲಿಸದೆ ಕೋವಿಡ್ ಹೆಚ್ಚಳಕ್ಕೆ ನಾವೇ ಕಾರಣಕರ್ತರಾಗುತ್ತಿರುವುದು ಸರಿಯಲ್ಲ, ಈ ನಿಟ್ಟಿನಲ್ಲಿ ಎಲ್ಲರೂ ಕೋವಿಡ್ ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಮಾತನಾಡಿ, ಮುಂಚೂಣಿ ಕಾರ್ಯಕರ್ತರಿಗೆ ಕೇಂದ್ರ ಸರ್ಕಾರದ ಸೂಚನೆಯಂತೆ ಬೂಸ್ಟರ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಇಂದು 26 ಸಾವಿರ ಮಂದಿಗೆ ಲಸಿಕೆ ವಿತರಿಸಲು ಅವಕಾಶವಿದ್ದು, ಅರ್ಹರು ಲಸಿಕೆ ಪಡೆದುಕೊಳ್ಳಬಹುದಾಗಿದೆ ಎಂದರು.
ಎರಡನೇ ಲಸಿಕೆ ಪಡೆದು 9 ತಿಂಗಳಾಗಿದ್ದವರು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪಡೆಯಲು ಅರ್ಹರಿದ್ದು, ಯಾವುದೇ ಭೀತಿ ಇಲ್ಲದೇ ಸಾವಕಾಶವಾಗಿ ಲಸಿಕೆಯನ್ನು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಸೂಚನೆಯಂತೆ 15 ವರ್ಷ ಮೇಲ್ಪಟ್ಟ 18 ವರ್ಷದೊಳಗಿನ ಮಕ್ಕಳಿಗೆ ಶಾಲೆಗಳಲ್ಲಿ ಹಾಗೂ ಶಾಲೆ ತೊರೆದವರನ್ನು ಸಮುದಾಯದಲ್ಲಿ ಗುರುತಿಸಿ ಲಸಿಕೆ ನೀಡುವ ಕಾರ್ಯವನ್ನು ಆರೋಗ್ಯ ಇಲಾಖೆ ಕೈಗೊಂಡಿರುವುದಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ, ಆರ್‌ಎಂಒ ಡಾ.ವೀಣಾ, ಡಾ.ಸನತ್‌ಕುಮಾರ್ ಮೂರನೇ ಡೋಸ್ ಪಡೆದರು. ಡಾ.ರಜನಿ, ಡಾ.ಕೇಶವರಾಜ್, ಡಾ.ಮುಕ್ತಾಂಬ, ಡಾ.ತೀರ್ಥನಾಥ್, ಡಾ.ದಿನೇಶ್, ಡಾ.ವೀಣಾ ಬಿ. ಗೌಡ, ಡಾ.ಮೋಹನ್‌ದಾಸ್ ಮತ್ತಿತರರು ಇದ್ದರು.
Get real time updates directly on you device, subscribe now.
Comments are closed.