ಶಿರಾ: ನಗರದ ಹೊರವಲಯದಲ್ಲಿನ ಅಂಬೇಡ್ಕರ್ ವಸತಿ ಶಾಲೆಯ 26 ಮಕ್ಕಳಿಗೆ ಮತ್ತು 4 ಮಂದಿ ಅಡುಗೆ ಸಿಬ್ಬಂದಿಯವರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದ್ದು, ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.
ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯೊಬ್ಬರಿಗೆ ಮೂರು ದಿನಗಳ ಹಿಂದೆ ಸಣ್ಣದಾಗಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಶಿರಾ ಸಾರ್ವಜನಿಕ ಆಸ್ಪತೆಯಲ್ಲಿ ಕೊರೊನಾ ರ್ಯಾಟ್ ಪರೀಕ್ಷೆ ನಡೆಸಲಾಗಿತ್ತು, ಆದರೆ ಫಲಿತಾಂಶ ನೆಗೆಟಿವ್ ಬಂದಿದ್ದ ಕಾರಣ, ಆರ್‌ಟಿಪಿಸಿಆರ್ ಸ್ಯಾಂಪಲ್ ಸಂಗ್ರಹಿಸಿ ಜ್ವರಕ್ಕೆ ಚಿಕಿತ್ಸೆ ನೀಡಿ ವಾಪಸ್ ವಸತಿ ಶಾಲೆಗೆ ಕಳುಹಿಸಲಾಗಿತ್ತು. ಆದರೆ ವಿದ್ಯಾರ್ಥಿಯ ಆರ್‌ಟಿಪಿಸಿಆರ್ ಫಲಿತಾಂಶ ಪಾಸಿಟಿವ್ ಬಂದಿದೆ ಎಂದು ಆಕೆಯ ಪೋಷಕರಿಗೆ ಆಸ್ಪತ್ರೆಯಿಂದ ಮೆಸೇಜ್ ಹೋಗಿದ್ದು, ವಿಷಯ ತಿಳಿಯುತ್ತಿದ್ದಂತೆ ತಾಲ್ಲೂಕು ಆಡಳಿತದ ನಿರ್ದೇಶನದಂತೆ ವಸತಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನೂ ಮಂಗಳವಾರ ರ್ಯಾಟ್ ಪರೀಕ್ಷೆಗೆ ಒಳಪಡಿಸಲಾಗಿತ್ತು.
ವಸತಿ ಶಾಲೆಯಲ್ಲಿ ಒಟ್ಟು 215 ಮಂದಿ ವಿದ್ಯಾಥಿಗಳು ಅಭ್ಯಾಸ ಮಾಡುತ್ತಿದ್ದು, ಮಂಗಳವಾರ ಹಾಜರಿದ್ದ 193 ವಿದ್ಯಾರ್ಥಿಗಳು ಹಾಗೂ ವಸತಿ ಶಾಲೆ ಶಿಕ್ಷಕರು ಮತ್ತು ಸಿಬ್ಬಂದಿಯನ್ನೂ ರ್ಯಾಟ್ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೇಳೆ 26 ವಿದ್ಯಾರ್ಥಿಗಳು ಮತ್ತು ನಾಲ್ವರು ಅಡಿಗೆಯವರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು, ಸೋಂಕಿತರನ್ನು ಪ್ರತ್ಯೇಕವಾಗಿ ಐಸೋಲೇಟ್ ಮಾಡಿ, ಸ್ಥಳದಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸೋಂಕಿತರ ಪೈಕಿ ಮೂವರು ವಿದ್ಯಾರ್ಥಿಗಳಿಗೆ ವಾಂತಿ ಉಂಟಾದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆಯಾಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ, ಸೋಂಕಿತರಲ್ಲದ ವಿದ್ಯಾರ್ಥಿಗಳನ್ನು ಪಕ್ಕದಲ್ಲಿನ ಆಂಜನೇಯ ಸ್ವಾಮಿ ಕಲ್ಯಾಣ ಮಂಟಪಕ್ಕೆ ವರ್ಗಾಯಿಸಿ ನಿಗಾ ವಹಿಸಲಾಗಿದೆ.
ವಸತಿ ಶಾಲೆಯ ಸಮೀಪದ ಆಂಜನೇಯಸ್ವಾಮಿ ದೇವಸ್ಥಾನ ಮತ್ತು ಸುತ್ತಲಿನ ಪ್ರದೇಶದಲ್ಲಿನ ಅಂಗಡಿ ಮುಂಗಟ್ಟುಗಳನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಕೆಲ ದಿನಗಳ ಕಾಲ ಬಂದ್ ಮಾಡುವಂತೆ ಸೂಚನೆ ನೀಡಲಾಗಿದೆ. ತಹಸೀಲ್ದಾರ್ ಮಮತಾ, ಬಿಇಓ ಶಂಕರಯ್ಯ, ಆರ್‌ಐ ಮಂಜುನಾಥ್, ಪಿಡಿಓ ಯೋಗ ಶ್ರೀನಿವಾಸ್, ಗ್ರಾಮ ಲೆಕ್ಕಿಗ ನರೇಂದ್ರ, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಸೇರಿ 30 ಮಂದಿಗೆ ಕೊರೊನಾ ಸೋಂಕು
Get real time updates directly on you device, subscribe now.
Prev Post
Next Post
Comments are closed.