ಸರ್ಕಾರ ನ್ಯಾಯಯುತ ಬೇಡಿಕೆ ಈಡೇರಿಸಲಿ

ಅತಿಥಿ ಉಪನ್ಯಾಸಕರ ಸಮಸ್ಯೆ ನಿವಾರಿಸಲಿ: ನಟ ಚೇತನ್

151

Get real time updates directly on you device, subscribe now.

ತುಮಕೂರು: ಕಳೆದ 15 ದಿನಗಳಿಂದ ರಾಜ್ಯದ 31 ಜಿಲ್ಲೆಗಳಲ್ಲಿ ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಅವರಿಂದ ವಿದ್ಯೆ ಕಲಿತ ಎಲ್ಲಾ ಸುಶಿಕ್ಷಿತರು, ಕಾರ್ಮಿಕರು, ರೈತರು, ಪ್ರಗತಿಪರ ಹೋರಾಟಗಾರು ಭಾಗವಹಿಸಿ ಬೆಂಬಲ ಸೂಚಿಸುವ ಮೂಲಕ ಅವರ ಬೇಡಿಕೆ ಈಡೇರುವಂತೆ ಸರಕಾರದ ಮೇಲೆ ಒತ್ತಡ ತರಬೇಕಿದೆ ಎಂದು ಚಲನಚಿತ್ರ ನಟ ಚೇತನ್‌ ಅಹಿಂಸಾ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಅತಿಥಿ ಉಪನ್ಯಾಸಕರು ವೇತನ ಹೆಚ್ಚಳ ಹಾಗೂ ಸೇವಾಭದ್ರತೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿ, ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಈ ಹೋರಾಟ ಕೇವಲ ಇವರಿಗೆ ಮತ್ತು ಇವರ ಕುಟುಂಬಕ್ಕೆ ಸಂಬಂಧಿಸಿದ್ದಲ್ಲ, ಅವರಿಗೆ ಪಾಠ ಕಲಿತ ನಮಗೆಲ್ಲರಿಗೂ ಸಂಬಂಧಿಸಿದ್ದು ಎಂದು ನಾವೆಲ್ಲರು ಮನವರಿಕೆ ಮಾಡಿಕೊಳ್ಳಬೇಕಿದೆ ಎಂದರು.
ಹೋರಾಟದಿಂದಲೇ ಜಗತ್ತಿನಲ್ಲಿ ಬದಲಾಣೆ ತರಲು ಸಾಧ್ಯ, ಇದಕ್ಕೆ ರಷ್ಯಾ ಕ್ರಾಂತಿ, ಪ್ರೆಂಚ್‌ ಕ್ರಾಂತಿಗಳ ಜೊತೆಗೆ ಇತ್ತೀಚಿನ ರೈತರ ಹೋರಾಟಗಳ ಯಶಸ್ಸೇ ನಮಗೆ ಸಾಕ್ಷಿ, ಹಾಗಾಗಿ ಯಾರು ಹೆದರುವ ಅಗತ್ಯವಿಲ್ಲ, ನಿಮ್ಮೊಂದಿಗೆ ಇಡೀ ಕರ್ನಾಟಕವಿದೆ ಎಂಬುದನ್ನು ನಿಮ್ಮೆಲ್ಲರೂ ಅರಿಯಬೇಕಾಗಿದೆ, ಸಂಘ ಸಂಸ್ಥೆಗಳು, ವಿರೋಧಪಕ್ಷಗಳ ಶಾಸಕರು, ಮುಖಂಡರು ಈ ಹೋರಾಟದಲ್ಲಿ ನಿಮ್ಮೊಂದಿಗೆ ಕೈಜೋಡಿಸುವ ಮೂಲಕ ಶಾಸಕ ಗೌರಿಶಂಕರ್‌ ಸೇರಿದಂತೆ ಎಲ್ಲಾ ನಾಯಕರು, ಚುನಾವಣೆಯಲ್ಲಿ ಗೆದ್ದವ ಮಾತ್ರ ನಾಯಕನಲ್ಲ, ಜನರ ಜೀವನ ಬದಲಾವಣೆ ಮಾಡುವವನೇ ನಿಜವಾದ ನಾಯಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಚೇತನ್‌ ಅಹಿಂಸಾ ನುಡಿದರು.
ಇಂದು ನಮ್ಮನ್ನಾಳುತ್ತಿರುವುದು ಕಣ್ಣು, ಕವಿ ಇಲ್ಲದ, ಪಂಚೇಂದ್ರೀಯಗಳನ್ನು ಕಳೆದುಕೊಂಡಿರುವ ಸರಕಾರ, ಕೊರೊನ ಒಂದು, ಎರಡನೇ ಅಲೆಯಲ್ಲಿ ಅತಿಥಿ ಉಪನ್ಯಾಸಕರು ಬದುಕುವುದೇ ಕಷ್ಟ ಎಂಬಂತಹ ಜೀವನ ನಡೆಸಿದ್ದಾರೆ, ಈಗ ಮೂರನೇ ಅಲೆಯಲ್ಲಿ ಅವರ ಬದುಕು ಮತ್ತಷ್ಟು ಅತಂತ್ರ ಸ್ಥಿತಿಗೆ ತಲುಪಲಿದೆ ಎಂಬ ಆತಂಕ ಅವರ ಕುಟುಂಬಗಳನ್ನು ಕಾಡುತ್ತಿದೆ, ಇಂತಹ ಸಂದರ್ಭದಲ್ಲಿ ಸರಕಾರಗಳು ಉದ್ದಿಮೆದಾರರ ಪರವಾಗಿ ಕಾಯ್ದೆಗಳ ಮೂಲಕ ಅದಾನಿ, ಅಂಬಾನಿಯ ವರನ್ನು ಮತ್ತಷ್ಟು ಶ್ರೀಮಂತರನ್ನಾಗಿಸಲು ಹೊರಟಿದೆ, ಇದರ ವಿರುದ್ಧ ನಾವೆಲ್ಲರೂ ಧ್ವನಿ ಎತ್ತಬೇಕಾಗಿದೆ, ಆರ್ಥಿಕ, ಸಾಮಾಜಿಕ, ಲಿಂಗ ಅಸಮಾನತೆಗಳ ವಿರುದ್ಧ ನಾವೆಲ್ಲರೂ ಒಗ್ಗೂಡಿ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ ಎಂದರು.
ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸನೀಲ್ ಕುಮಾರ್‌ ಮಾತನಾಡಿ, ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಕಳೆದ 15 ದಿನಗಳಿಂದ ನಾವು ಸರಕಾರದ ವಿರುದ್ಧ ಧರಣಿ ನಡೆಸುತ್ತಿದ್ದೇವೆ, ಆದರೆ ಇದುವರೆಗೂ ಸರಕಾರ ಯಾವುದೇ ನಿರ್ಣಯ ಕೈಗೊಂಡಿಲ್ಲ, ಬದಲಾಗಿ ಸಚಿವರು ತಮ್ಮ ಮನಸ್ಸಿಗೆ ಬಂದಂತೆ ಹೇಳಿಕೆ ನೀಡುವ ಮೂಲಕ ಹೋರಾಟವನ್ನು ದಾರಿ ತಪ್ಪಿಸಲು ನೋಡುತ್ತಿದ್ದಾರೆ, ಆದರೆ ವಿವಿಧ ಸಂಘ, ಸಂಸ್ಥೆಗಳು, ವಿರೋಧ ಪಕ್ಷಗಳ ಮುಖಂಡರು, ಶಾಸಕರು ನಮಗೆ ಬೆಂಬಲ ನೀಡಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ನೈತಿಕ ಬೆಂಬಲ ನೀಡಿದ್ದಾರೆ. ಇಂದು ಚೇತನ್‌ ಅಹಿಂಸಾ ಅವರು ಭೇಟಿ ನೀಡಿರುವುದು ನಮ್ಮ ಆತ್ಮಸ್ಥೈರ್ಯ ಹೆಚ್ಚಿಸಿದೆ ಎಂದರು.
ಈ ವೇಳೆ ಜೈ ಭೀಮ ಚಲನಚಿತ್ರ ಬಿಡುಗಡೆ ಮಾಡಲಾಯಿತು. ಅತಿಥಿ ಉಪನ್ಯಾಸಕರ ಸಂಘದ ಡಾ.ಕುಮಾರಯ್ಯ, ಮಲ್ಲಿಕಾರ್ಜುನಯ್ಯ, ರಂಗಧಾಮಯ್ಯ, ಜಿ.ಕೆ.ನಾಗಣ್ಣ, ಗುಂಡಣ್ಣ, ನರಸಿಂಹಮೂರ್ತಿ, ಸವಿತಾ, ಆಶಾ ಹಾಗೂ ಅತಿಥಿ ಉಪನ್ಯಾಸಕರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!