ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ನೀಡಲು ಒತ್ತಾಯ

195

Get real time updates directly on you device, subscribe now.

ತುಮಕೂರು: ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸುವಂತೆ ಭಾರತೀಯ ಕಿಸಾನ್‌ ಸಂಘವು ತಹಶೀಲ್ದಾರ್‌ ಮೂಲಕ ಕೇಂದ್ರ ಸರ್ಕಾರಕ್ಕೆ ರಾಷ್ಟಪತಿಗಳು ನಿರ್ದೇಶನ ನೀಡುವಂತೆ ಮನವಿ ಸಲ್ಲಿಸಿತು.
ತಾಲ್ಲೂಕು ಕಚೇರಿ ಬಳಿ ಧರಣಿ ಸತ್ಯಾಗ್ರಹ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ರೈಲ್ವೆ, ರಸ್ತೆ, ವಿದ್ಯುನ್ಮಾನ ತಂತ್ರಜ್ಞಾನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದರೂ ಮಂಗಳನ ಅಂಗಳದವರೆಗೂ ತಲುಪಿದೆ, ಆದರೆ ಕೃಷಿ ಕ್ಷೇತ್ರ ದುಸ್ಥಿತಿಯತ್ತ ಸಾಗುತ್ತಿದ್ದು, 1990ರ ದಶಕದಿಂದ 3.5 ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಪ್ರತಿ ವರ್ಷ ಕೃಷಿ ತ್ಯಜಿಸಿ ನಗರದತ್ತ ಸಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಏರುತ್ತಿದೆ, ರೈತರು ತಾವು ಬೆಳೆದ ಬೆಳೆಗಳ ಖರ್ಚು ಹೆಚ್ಚಾಗಿ, ಪ್ರಕೃತಿ ವಿಕೋಪದಿಂದ ನಷ್ಟವುಂಟಾಗಿ ರೈತರು ಕೃಷಿಯಿಂದ ವಿಮುಖರಾಗುತ್ತಿರುವುದು ಬೇಸರ ತಂದಿದೆ ಎಂದು ಮನವಿಯಲ್ಲಿ ತಿಳಿಸಿದೆ.
ಈ ಬಗ್ಗೆ ಮಾತನಾಡಿದ ಭಾರತೀಯ ಕಿಸಾನ್‌ ಸಂಘದ ಅಧ್ಯಕ್ಷ ವಿಜಯ್‌ಕುಮಾರ್‌ ಮಾತನಾಡಿ, ಬೇರೆ ಕ್ಷೇತ್ರಗಳ ಉತ್ಪಾದಕರು ಉತ್ಪಾದಿಸಿದ ಉತ್ಪನ್ನಗಳಿಗೆ ತಾವೇ ದರ ನಿಗದಿ ಮಾಡುತ್ತಾರೆ, ಆದರೆ ರೈತರಿಗೆ ಇದು ಸಾಧ್ಯವಾಗುತ್ತಿಲ್ಲ, ಮಧ್ಯವರ್ತಿಗಳು ದರ ನಿಗದಿ ಮಾಡುತ್ತಿದ್ದಾರೆ, ಇದೇ ಪರಿಸ್ಥಿತಿ ಹೀಗೆ ಮುಂದುವರೆದರೆ ಕೃಷಿ ಕ್ಷೇತ್ರ ಅವನತಿಗೊಂಡು ದೇಶದಲ್ಲಿ ಆಹಾರದ ಅಭಾವ ಉಂಟಾಗಲಿದೆ ಎಂದರು.
ರೈತರ ಆದಾಯ ದ್ವಿಗುಣಗೊಳ್ಳಬೇಕು ಎಂಬುದು ಕೇಂದ್ರದ ಒಳ್ಳೆಯ ಚಿಂತನೆಯೇ ಸರಿ, ಆದರೆ ಸರ್ಕಾರ ಕೇವಲ ಕನಿಷ್ಟ ಬೆಂಬಲ ಬೆಲೆ ಘೋಷಿಸಿದರೆ ಸಾಲದು, ರೈತರ ಉತ್ಪನ್ನಗಳಿಗೆ ಬೆಲೆ ಘೋಷಿಸಿ ಖರೀದಿ ಗ್ಯಾರೆಂಟಿ ನೀಡಿ ಘೋಷಿತ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಯಾಗದಂತೆ ನೋಡಿಕೊಳ್ಳಬೇಕು ಎಂದರು.
ಪ್ರತಿ ವರ್ಷ ಬೆಲೆ ಘೋಷಣೆಯ ಹಣದುಬ್ಬರ ದರಕ್ಕೆ ಅನುಗುಣವಾಗಿರಲಿ, ಮಂಡಿ ಒಳಗೆ ಅಥವಾ ಹೊರಗೆ ಘೋಷಿತ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿಸಿದರೆ ಶಿಕ್ಷಾರ್ಹವಾಗಿಸಬೇಕು ಎಂಬ ಕಾನೂನನ್ನು ಜಾರಿ ಮಾಡಬೇಕೆಂದು ಒತ್ತಾಯಿಸಲು 8-8-2021 ರಂದು ಹರಿಯಾಣ ರಾಜ್ಯದ ಸೋನಿಪತ್‌ ಜಿಲ್ಲೆಯ ಜಿಂಜೋಳಿ ಗ್ರಾಮದಲ್ಲಿ ನಡೆದ ಭಾರತೀಯ ಕಿಸಾನ್‌ ಸಂಘದ ಅಖಿಲ ಭಾರತೀಯ ಪ್ರಬಂಧ ಸಮಿತಿ ಸಭೆಯಲ್ಲಿ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಸೇರಿ ಸುದೀರ್ಘವಾಗಿ ಚರ್ಚಿಸಿ ತೀರ್ಮಾನಿಸಲಾಗಿತ್ತು ಎಂದು ತಿಳಿಸಿದರು.
8-9-2021 ರಂದು ದೇಶದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು, ಧರಣಿ ಸತ್ಯಾಗ್ರಹ ನಡೆಸಿ ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಗಿತ್ತು, ಆದರೆ ಇದುವರೆಗೂ ಪ್ರಧಾನ ಮಂತ್ರಿಗಳು ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ, ಆದ್ದರಿಂದ ಕೇಂದ್ರ ಸರ್ಕಾರಕ್ಕೆ ರಾಷ್ಟ್ರಪತಿಗಳು ಸೂಕ್ತ ಮಾರ್ಗದರ್ಶನ ನೀಡುವಂತೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಕಾರ್ಯದರ್ಶಿ ನರಸೇಗೌಡ, ಪ್ರಾಂತ ಕಾರ್ಯದರ್ಶಿ ಸುರೇಶ್‌, ಸಂಜಯ್‌ ಆರಾಧ್ಯ ಮತ್ತಿತರರಿದ್ದರು.

Get real time updates directly on you device, subscribe now.

Comments are closed.

error: Content is protected !!