ಕುಣಿಗಲ್: ಹಲವು ಹೋರಾಟದ ಪರಿಣಾಮವಾಗಿ ಪುರಸಭೆಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಂಗಸ್ವಾಮಿಯವರ ಮುಂದೆ ಹಲವು ದಶಕಗಳಿಂದ ಬಗೆಹರಿಯದ ಸಮಸ್ಯೆ, ಸವಾಲುಗಳು ಇದ್ದು ಹಾಲಿ ಪುರಸಭೆಯಲ್ಲಿ ಅತ್ಯಂತ ಅನುಭವಿ ಸದಸ್ಯರೆಂದು ಹೆಸರು ಪಡೆದಿರುವ ಅವರು ಎಷ್ಟರ ಮಟ್ಟಿಗೆ ಇರುವ ಸವಾಲು ನಿಭಾಯಿಸುತ್ತಾರೆ ಎಂಬ ಕುತೂಹಲ ನಾಗರಿಕರಲ್ಲಿ ಮೂಡಿದೆ.
ಪುರಸಭೆ ರಾಜಕಾರಣದಲ್ಲಿ ಮೂರು ದಶಕಗಳಿಂದ ಪಳಗಿರುವ ನೂತನ ಅಧ್ಯಕ್ಷರು ಐದು ಬಾರಿ ಸ್ಪರ್ಧಿಸಿ ಮೂರು ಬಾರಿ ಆಯ್ಕೆಯಾಗಿ, ಒಮ್ಮೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಇದೀಗ ಅಧ್ಯಕ್ಷರಾಗಿದ್ದಾರೆ, ಪುರಸಭೆ ಕಾರ್ಯವೈಖರಿ ಬಗ್ಗೆ ಚೆನ್ನಾಗಿ ಅರಿತಿರುವ ಅವರು ಈ ಹಿಂದೆ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವಧಿಯಲ್ಲೆ ಪುರಸಭೆ ಬಸ್‌ನಿಲ್ದಾಣ ನಿರ್ಮಾಣ, ಸಂತೇಮೈದಾನದ ವಾಣಿಜ್ಯ ಮಳಿಗೆಗಳ ಸಮರ್ಪಕ ವಿಲೇವಾರಿ, ನೆನೆಗುದಿಗೆ ಬಿದ್ದಿರುವ ಗ್ರಾಮ ದೇವತೆ ಜಂಕ್ಷನ್‌ನಿಂದ ಹುಚ್ಚಮಾಸ್ತಿಗೌಡ ಸರ್ಕಲ್ ವರೆಗಿನ ಹೆದ್ದಾರಿ ಅಭಿವೃದ್ಧಿ ಕಾಮಗಾರಿ, ಈ ಹಿಂದೆ ಸದಸ್ಯರಾಗಿ ಪ್ರತಿನಿಧಿಸಿದ್ದ ಅವಧಿಯಲ್ಲಿ ಪುರಸಭೆ ಜಾಗಗಳನ್ನು ಗುರುತಿಸಿ ಬೇಲಿ ಹಾಕುವಂತೆ ವಿಷಯ ಮಂಡಿಸಿ ನಿರ್ಣಯ ಅಂಗಿಕರಿಸಿದ್ದು, ಇನ್ನು ಜಾರಿಯಾಗಿಲ್ಲದ ಕಾರಣ ಪುರಸಭೆ ಜಾಗ ರಕ್ಷಣೆ ನಿಟ್ಟಿನಲ್ಲಿ 25 ವರ್ಷ ಕಳೆದರೂ ಪಟ್ಟಣ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಒಂದು ನಿವೇಶನ ನೀಡಿಲ್ಲವಾಗಿದ್ದು, ನಿವೇಶನ ವಿತರಣೆ, ಪೌರ ಕಾರ್ಮಿಕರಿಗೆ ನಿವೇಶನ ನೀಡುವ ನಿಟ್ಟಿನಲ್ಲಿ ಜಾಗ ಇದ್ದರೂ ಇನ್ನು ಅಭಿವೃದ್ಧಿಯಾಗದ ಕಾರಣ ಪೌರ ಕಾರ್ಮಿಕರ ನಿವೇಶನ ವಿತರಣೆ ನಿಟ್ಟಿನಲ್ಲಿ ಯಾವ ರೀತಿಯಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಾರೋ ಇಲ್ಲವೋ ಎಂಬ ಪ್ರಶ್ನೆ ನಾಗರಿಕರ ಮುಂದಿದೆ.
ಪುರಸಭೆ ಹಾಲಿ ವಿಧಿಸಿರುವ ಆಸ್ತಿ ತೆರಿಗೆ ಅವೈಜ್ಞಾನಿಕವಾಗಿದ್ದು ಆಸ್ತಿತೆರಿಗೆ ಕಡಿಮೆ ಮಾಡಿಸುವ ನಿಟ್ಟಿನಲ್ಲಿ ಕಳೆದ ಸಭೆಗಳಲ್ಲಿ ಸದಸ್ಯರಾಗಿ ವಾದ ಮಂಡಿಸಿದ್ದ ಅವರು ಈಗ ಅಧ್ಯಕ್ಷರಾಗಿದ್ದು ಹಾಲಿ ವಿಧಿಸುತ್ತಿರುವ ತೆರಿಗೆ ಅವೈಜ್ಞಾನಿಕ ಎಂದಿದ್ದ ಅವರು ಈಗ ವೈಜ್ಞಾನಿಕವಾಗಿ ಎಷ್ಟರ ಮಟ್ಟಿಗೆ ತೆರಿಗೆ ದರ ಕಡಿಮೆ ಮಾಡಿಸಿ ಜನತೆಗೆ ಅನುಕೂಲ ಮಾಡಿಕೊಡುವರು, ಸಮರ್ಪಕ, ಶುದ್ಧ ಕುಡಿಯುವ ನೀರು ಪೂರೈಕೆ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು, ಜನತೆಗೆ ಇ- ಆಸ್ತಿ ವಿತರಣೆ ನಿಟ್ಟಿನಲ್ಲಿ ಆಗುತ್ತಿರುವ ನ್ಯೂನ್ಯತೆ ಸರಿಪಡಿಸಿ ಶೀಘ್ರ ಇ- ಆಸ್ತಿ ನಕಲು ನೀಡುವ ವ್ಯವಸ್ಥೆ ಮಾಡುವುದು, ಆಸ್ತಿ ನಕಲು ನೀಡುವಲ್ಲಿ ದಲ್ಲಾಳಿಗಳು ಸೇರಿದಂತೆ ಭ್ರಷ್ಟಾಚಾರದಿಂದ ಕೂಡಿದೆ ಎಂದು ಆರೋಪಗಳನ್ನು ನಿಯಂತ್ರಿಸಿ ಮುಕ್ತ, ಪಾರದರ್ಶಕ ರೀತಿಯಲ್ಲಿ ದಲ್ಲಾಳಿಗಳ ನೆರವಿಲ್ಲದೆ ಆಸ್ತಿ ಮಾಲೀಕರಿಗೆ ಆಸ್ತಿ ನಕಲು ತ್ವರಿತವಾಗಿ ಸಿಗುವಂತೆ ಮಾಡಲು ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ನಾಗರಿಕರು ನಿರೀಕ್ಷೆ ಇಟ್ಟಿದ್ದು, ಪುರಸಭೆ ಅಧ್ಯಕ್ಷರಾಗುವ ಕೆಲವೇ ತಿಂಗಳ ಹಿಂದೆ ತಾಲೂಕು ಅಹಿಂದ ವರ್ಗದ ಅಧ್ಯಕ್ಷರಾಗಿ ಆಯ್ಕೆಯಾದ ಅವರು ಅಹಿಂದ ವರ್ಗಕ್ಕೆ ಪುರಸಭೆಯ ಸವಲತ್ತು ಪ್ರಾಮಾಣಿಕವಾಗಿ ತಲುಪಿಸುವ ನಿಟ್ಟಿನಲ್ಲಿ ಎಷ್ಟರ ಮಟ್ಟಿಗೆ ಕಾರ್ಯ ಪ್ರವೃತ್ತರಾಗುತ್ತಾರೆ ಎಂಬ ಕುತೂಹಲ ಇದೆ, ಪುರಸಭೆಯ ಕಾರ್ಯ ವೈಖರಿ ವ್ಯವಸ್ಥೆಯನ್ನು ತಮ್ಮ ಮೂರು ದಶಕದ ಅನುಭವದಿಂದ ಅರೆದು ಕುಡಿದಿರುವ ಅವರು ಎಷ್ಟರ ಮಟ್ಟಿಗೆ ಪಟ್ಟಣದ ನಾಗರಿಕರ ಸಮಸ್ಯೆಗೆ ಧ್ವನಿಯಾಗಿ ಸ್ಪಂದಿಸಿ, ಎಷ್ಟರ ಮಟ್ಟಿಗೆ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಾರೆ ಎಂಬ ಕಾತುರ, ನಿರೀಕ್ಷೆ ಜನರನ್ನು ಕಾಡುತ್ತಿದೆ.
Get real time updates directly on you device, subscribe now.
Prev Post
Comments are closed.