ನಗರದ ಅಭಿವೃದ್ಧಿಗೆ ಹೆಚ್ಚು ಒತ್ತು: ಜ್ಯೋತಿಗಣೇಶ್

118

Get real time updates directly on you device, subscribe now.

ತುಮಕೂರು: ಸ್ಮಾರ್ಟ್‌ಸಿಟಿ ವತಿಯಿಂದ ಸರಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ವಿವಿಧೋದ್ದೇಶ ಮಿನಿ ಕ್ರೀಡಾಂಗಣವನ್ನು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದು, ಇದರ ನಿರ್ವಹಣೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಬಳಕೆದಾರರ ಸಮಿತಿ ರಚಿಸಲಾಗುವುದು ಎಂದು ಶಾಸಕ ಜಿ.ಬಿ.ಜೋತಿಗಣೇಶ್‌ ತಿಳಿಸಿದ್ದಾರೆ.
ನಗರದ ಸರಕಾರಿ ಜೂನಿಯರ್‌ ಕಾಲೇಜು ಮೈದಾನದ ಆಲದ ಮರದ ಪಾರ್ಕ್ ನಲ್ಲಿ ಸಿದ್ದಗಂಗಾ ಮೆಡಿಕಲ್‌ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಕಬ್ಬಡಿ, ಖೋಖೊ, ಫುಟ್‌ಬಾಲ್‌, ಬ್ಯಾಡ್ಮಿಂಟನ್‌ಗೆ ಹೆಸರಿಗಾಗಿದ್ದ ಸರಕಾರಿ ಜೂನಿಯರ್‌ ಕಾಲೇಜಿನ ಪೂರ್ವಭಾಗದಲ್ಲಿ ಸುಮಾರು 4.50 ಕೋಟಿ ವೆಚ್ಚದಲ್ಲಿ ವಿವಿಧ ಅಂಕಣ ನಿರ್ಮಿಸಿ ಹೊನಲು ಬೆಳಕಿನ ವ್ಯವಸ್ಥೆ ಸಹ ಮಾಡಲಾಗುತ್ತಿದೆ ಎಂದರು.
ಸದರಿ ಜಾಗದಲ್ಲಿ ವಾಲಿಬಾಲ್‌, ಬ್ಯಾಸ್ಕೆಟ್ ಬಾಲ್‌, ಬ್ಯಾಡ್ಮಿಂಟನ್‌, ಖೋಖೋ, ಕಬ್ಬಡಿಗೆ ಅಗತ್ಯವಿರುವ ಕೋರ್ಟ್ ಗಳನ್ನ ನಿರ್ಮಿಸಲಾಗಿದೆ, ಅಲ್ಲದೆ ಕ್ರಿಕೆಟ್‌ ನೆಟ್‌ಪ್ರಾಕ್ಟಿಸ್‌ಗೂ ಅವಕಾಶ ಕಲ್ಪಿಸಲಾಗಿದೆ, ಇಂತಹ ಬೃಹತ್‌ ಆಟದ ಮೈದಾನದ ನಿರ್ವಹಣೆಗೆ ಅಗತ್ಯವಿರುವ ಅನುದಾನವಾಗಲಿದೆ, ಸಿಬ್ಬಂದಿಯಾಗಲಿ ಸರಕಾರಿ ಜೂನಿಯರ್‌ ಕಾಲೇಜು ಆಡಳಿತ ಮಂಡಳಿಯಲ್ಲಿ ಇಲ್ಲ, ಹಾಗಾಗಿ ಶೈಕ್ಷಣಿಕ ಕಟ್ಟಡಗಳನ್ನು ಹೊರತು ಪಡಿಸಿ ಉಳಿದ ಆಟದ ಮೈದಾನದ ನಿರ್ವಹಣೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹಿರಿಯ ನಾಗರಿಕರು, ಆಟಗಾರರನ್ನು ಒಳಗೊಂಡ ಬಳಕೆದಾರರ ಸಮಿತಿ ರಚಿಸಿ ಅವರಿಗೆ ಇದರ ಜವಾಬ್ದಾರಿ ವಹಿಸಲು ಪ್ರಕ್ರಿಯೆ ಚಾಲನೆಯಲ್ಲಿದೆ, ಒಂದು ವೇಳೆ ನಿರ್ವಹಣೆ ಸರಿಯಿಲ್ಲದಿದ್ದರೆ ಆಲದ ಮರದ ಪಾರ್ಕ್‌ ಸೇರಿದಂತೆ ಮಾಡಿರುವ ಎಲ್ಲಾ ಅಭಿವೃದ್ಧಿ ಕಾರ್ಯ ಕೆಲವೇ ದಿನಗಳಲ್ಲಿ ಉಪಯೋಗಕ್ಕೆ ಬಾರದಂತಾಗುತ್ತವೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್‌ ತಿಳಿಸಿದರು.
ಹೈಸ್ಕೂಲ್‌ ಮೈದಾನದಲ್ಲಿರುವ ತೆರೆದ ರಂಗಮಂದಿರದಲ್ಲಿ ಸಣ್ಣಪುಟ್ಟ ಕಾರ್ಯಕ್ರಮ ಆಯೋಜಿಸಲು ಅಗತ್ಯವಿರುವ ಅಗತ್ಯ ಸೌಲಭ್ಯಗಳನ್ನು ಸುಮಾರು 90- 95 ಲಕ್ಷ ರೂ. ವೆಚ್ಚದಲ್ಲಿ ಮಾಡಲಾಗುತ್ತಿದೆ. ಅಲ್ಲದೆ ಓವರ್‌ ಹೆಡ್‌ ಟ್ಯಾಂಕ್‌ ಇರುವ ಜಾಗದಲ್ಲಿ ಸಾರ್ವಜನಿಕ ಶೌಚಾಲಯಕ್ಕೂ ವ್ಯವಸ್ಥೆ ಕಲ್ಪಿಸಲಾಗುತ್ತಿದೆ, ಒಟ್ಟಾರೆ ಜೂನಿಯರ್‌ ಕಾಲೇಜಿನ ಗತ ವೈಭವ ಉಳಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಸ್ಮಾರ್ಟ್ ಸಿಟಿಯ ಅನುದಾನದಲ್ಲಿ ಮಾಡಲಾಗುತ್ತಿದೆ, ಇದರ ಸದ್ಬಳಕೆಗೆ ನಾಗರಿಕರು ಮುಂದಾಗಬೇಕೆಂದರು.
ಪಾಲಿಕೆಯ 15ನೇ ವಾರ್ಡ್ ನ ಸದಸ್ಯೆ ಗಿರಿಜಾ ಧನಿಯಕುಮಾರ್‌ ಮಾತನಾಡಿ, ಸ್ಮಾರ್ಟ್ ಸಿಟಿ ವತಿಯಿಂದ ಹತ್ತಾರು ಲಕ್ಷ ರೂ. ಖರ್ಚು ಮಾಡಿ ಆಲದ ಮರವನ್ನೇ ಬಳಸಿಕೊಂಡು ಸುಂದರ ಪಾರ್ಕ್‌ ನಿರ್ಮಿಸಲಾಗಿದೆ, ಆದರೆ ಇದರ ನಿರ್ವಹಣೆಗೆ ಅಗತ್ಯ ವ್ಯವಸ್ಥೆಯಾಗಿಲ್ಲ, ಬೆಳಗಿನ ಸಮಯದಲ್ಲಿ ಕನಿಷ್ಠ 2 ಮಂದಿ, ರಾತ್ರಿ ವೇಳೆ ಒಬ್ಬರು ಸೆಕ್ಯೂರಿಟಿ ಗಾರ್ಡ್‌ ಅಗತ್ಯವಿದೆ, ಜೊತೆಗೆ ಆಲದ ಮರದ ಎಲೆಗಳು ಉದುರುವುದರಿಂದ ಕ್ಲೀನ್‌ ಮಾಡಲು ನಾಲ್ಕು ಮಂದಿಯ ಅಗತ್ಯವಿದೆ, ಇದರ ವ್ಯವಸ್ಥೆ ಕಲ್ಪಿಸಬೇಕೆಂದು ಶಾಸಕರಲ್ಲಿ ಮನವಿ ಮಾಡುತ್ತೇನೆ ಎಂದರು.
ಸರಕಾರಿ ಜೂನಿಯರ್‌ ಕಾಲೇಜು ಮೈದಾನಕ್ಕೆ ವಾಯು ವಿಹಾರಕ್ಕೆ ಬರುವ ಜನರಿಗೆ ಆರೋಗ್ಯ ತಪಾಸಣೆ ನಡೆಸಬೇಕೆಂದು ಸಿದ್ದಗಂಗಾ ಆಸ್ಪತ್ರೆಯ ಡಾ.ಪರಮೇಶ್‌ ಅವರ ಬಳಿ ಕೇಳಿದಾಗ ಒಪ್ಪಿ ಇಂದು ಹಲವಾರು ಜನರಿಗೆ ಜನರಲ್‌ ಚೆಕಪ್‌ ಮಾಡುವ ಮೂಲಕ ಹೃದ್ರೋಗ ಬರದಂತೆ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದಕ್ಕಾಗಿ ಆಸ್ಪತ್ರೆಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಸಿದ್ದಗಂಗಾ ಮೆಡಿಕಲ್‌ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಡಾ.ಪರಮೇಶ್‌ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದ ಸಿದ್ದಗಂಗಾ ಆಸ್ಪತ್ರೆ ಈಗ ಮೆಡಿಕಲ್‌ ಕಾಲೇಜಾಗಿದೆ, ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಗರದ ಪ್ರತಿ ವಾರ್ಡ್‌ನಲ್ಲಿಯೂ ಸಾರ್ವಜನಿಕ ಹೆಲ್ತ್ ಫೋರಂ ನಡೆಸಲು ತೀರ್ಮಾನಿಸಲಾಗಿದೆ. ಗಿರಿಜಾ ಧನಿಯಕುಮಾರ್‌ ಅವರ ಕೋರಿಕೆಯ ಮೇರೆಗೆ 15ನೇ ವಾರ್ಡ್‌ನಲ್ಲಿ ಮೊದಲ ಬಾರಿ ಆರಂಭಿಸಲಾಗಿದ್ದು, ಇದನ್ನು ಇಡೀ ನಗರದಾದ್ಯಂತ ವಿಸ್ತರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮೆಡಿಕಲ್‌ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಹೃದ್ರೋಗ ತಜ್ಞ ವೈದ್ಯ ಡಾ.ಶರತ್‌ ಕುಮಾರ್‌, ಪಿಆರ್‌ಓ ಕಾಂತರಾಜು, ಸರಕಾರಿ ಜೂನಿಯರ್‌ ಕಾಲೇಜಿನ ಪ್ರಾಂಶುಪಾಲ ರಾಜಕುಮಾರ್‌, ದಾಸಪ್ಪ, ಹಿರಿಯ ಕ್ರೀಡಾಪಟು ಆನಂದ್‌, ರಾಮಮೂರ್ತಿ, ಧನಿಯಕುಮಾರ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!