ಅಧಿಕಾರಿಗಳು ಕೇಂದ್ರ ಸ್ಥಾನ ಬಿಡಬಾರದು

ಕೋವಿಡ್‌ ಸೋಂಕು ತಡೆಗೆ ಅಗತ್ಯ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ

474

Get real time updates directly on you device, subscribe now.

ತುಮಕೂರು: ಜಿಲ್ಲೆಯಲ್ಲಿ ದಿನೇ ದಿನೆ ಹೆಚ್ಚಳವಾಗುತ್ತಿರುವ ಕೋವಿಡ್‌ ಸೋಂಕು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಯಾವುದೇ ಅಧಿಕಾರಿಗಳು ಜಿಲ್ಲಾಡಳಿತದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡಬಾರದು ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಸೂಚಿಸಿದರು.
ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಜಿಲ್ಲೆಯಲ್ಲಿ ಜನವರಿ 11ರ ವರದಿಯನ್ವಯ ಕೋವಿಡ್‌ ಸೋಂಕು ಪ್ರಕರಣಗಳ ಪಾಸಿಟಿವಿಟಿ ದರ ಶೇ.13.4 ರಷ್ಟಿರುವುದರಿಂದ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ಕೋವಿಡ್‌ ಹರಡುವಿಕೆ ತಡೆಯಬೇಕೆಂದು ಸೂಚಿಸಿದರು.
ಜಿಲ್ಲೆಯಲ್ಲಿ ಕೋವಿಡ್‌ ಲಸಿಕಾಕರಣ ಶೇ.100 ರಷ್ಟು ಪೂರ್ಣಗೊಳಿಸಿಲ್ಲದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುವ ಮುನ್ನ ಎರಡೂ ಡೋಸ್‌ ಲಸಿಕೆ ನೀಡುವ ಮೂಲಕ ಶೇ.100 ರಷ್ಟು ಲಸಿಕಾಕರಣ ಪೂರ್ಣಗೊಳಿಸಬೇಕು ಎಂದರಲ್ಲದೆ ಶಾಲೆಗಳಲ್ಲಿ ಕೋವಿಡ್‌ ಸೋಂಕು ಹೆಚ್ಚುತ್ತಿದ್ದು, ಮಕ್ಕಳು ಕಡ್ಡಾಯವಾಗಿ ಕೋವಿಡ್‌ ನಿಯಮಗಳನ್ನು ಪಾಲಿಸುವುದರ ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಬೇಕು ಎಂದು ನಿರ್ದೇಶಿಸಿದರು.
ಸರ್ಕಾರದ ಆದೇಶದನ್ವಯ ಜನವರಿ 19ರ ವರೆಗೆ ಜಾರಿಯಲ್ಲಿದ್ದ ರಾತ್ರಿ ಹಾಗೂ ವಾರಾಂತ್ಯದ ಕರ್ಫ್ಯೂ ಸೇರಿದಂತೆ ಕೋವಿಡ್‌ ಮಾರ್ಗಸೂಚಿಗಳನ್ನು ಜನವರಿ 31ರ ವರೆಗೆ ವಿಸ್ತರಿಸಲಾಗಿದ್ದು, ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಸಂಕ್ರಾಂತಿ, ಏಕಾದಶಿ ಸಾಮೂಹಿಕ ಆಚರಣೆಗೆ ನಿರ್ಬಂಧ
ಜನರು ಗುಂಪು ಸೇರುವುದರಿಂದ ಕೋವಿಡ್‌ ಸೋಂಕು ಹರಡುವಿಕೆ ಹೆಚ್ಚಾಗುತ್ತಿದ್ದು, ಈ ಪ್ರಮಾಣ ನಿಯಂತ್ರಿಸುವ ಸಲುವಾಗಿ ಜನವರಿ 13 ರಂದು ನಡೆಯಲಿರುವ ವೈಕುಂಠ ಏಕಾದಶಿ ಹಾಗೂ ಜನವರಿ 15 ರಂದು ನಡೆಯುವ ಸಂಕ್ರಾಂತಿ ಹಬ್ಬವನ್ನು ಸಾಮೂಹಿಕವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡಿ ಆಚರಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಆದೇಶಿಸಿದರು.
ವೈಕುಂಠ ಏಕಾದಶಿ ಹಾಗೂ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ದೇವಾಲಯದ ಶಾಸ್ತ್ರ ಸಂಪ್ರದಾಯದಂತೆ ದೇವಾಲಯಗಳ ಒಳ ಆವರಣದಲ್ಲಿ ಮಾತ್ರ ದೈನಂದಿನ ಪೂಜಾ ಕೈಂಕರ್ಯ ನಡೆಸಲು ಅನುಮತಿ ನೀಡಲಾಗುವುದು. ವೈಕುಂಠ ಏಕಾದಶಿ ದಿನದಂದು ಪೂರ್ಣ ಪ್ರಮಾಣದಲ್ಲಿ ಕೋವಿಡ್‌-19 ಲಸಿಕೆ ಪಡೆದ 50 ಜನರಿಗೆ ಮಾತ್ರ ಒಂದು ಬಾರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲು ಅನುಮತಿಸಲಾಗುವುದು, ಇನ್ನಿತರೆ ಯಾವುದೇ ರೀತಿಯ ಪೂಜಾ ಸೇವೆಗಳಿಗೆ ಅವಕಾಶವಿರುವುದಿಲ್ಲ, ಜನ ದಟ್ಟಣೆ ಉಂಟಾಗದಂತೆ ಸಂಬಂಧಪಟ್ಟ ದೇವಾಲಯಗಳ ಆಡಳಿತ ಮಂಡಳಿಯವರು ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಮಕರ ಸಂಕ್ರಾಂತಿ ಹಬ್ಬದಂದು ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಎಲ್ಲಾ ರೀತಿಯ ಆಚರಣೆ ಹಾಗೂ ದೇವಾಲಯಗಳಲ್ಲಿ ಸಾರ್ವಜನಿಕರ ದರ್ಶನ ಇತ್ಯಾದಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸಾರ್ವಜನಿಕರು ಮನೆಯಿಂದ ಮನೆಗೆ ತೆರಳಿ ಹಬ್ಬ ಆಚರಿಸಬಾರದು, ಹಬ್ಬಗಳ ಆಚರಣೆಯ ಸಲುವಾಗಿ ಯಾವುದೇ ರೀತಿಯ ಮೆರವಣಿಗೆ, ಮನೋರಂಜನಾ ಕಾರ್ಯಕ್ರಮಗಳು ಇತ್ಯಾದಿಗಳನ್ನು ಆಯೋಜಿಸುವಂತಿಲ್ಲ, ದೇವಾಲಯಗಳಲ್ಲಿ ದರ್ಶನಕ್ಕೆ ಆಗಮಿಸುವ ಸಾರ್ವಜನಿಕರು ಕಡ್ಡಾಯವಾಗಿ ಮಾಸ್‌್ಕ ಧರಿಸುವುದು, ಸಾಮಾಜಿಕ ಆಂತರ ಕಾಯ್ದುಕೊಳ್ಳುವ ಮೂಲಕ ಕೋವಿಡ್‌ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ಕೋವಿಡ್‌ ಮಾರ್ಗಸೂಚಿ ಪಾಲಿಸಿ
ಸರ್ಕಾರ ಹೊರಡಿಸಿರುವ ಕೋವಿಡ್‌ ಮಾರ್ಗಸೂಚಿ ಆದೇಶವು ಜನವರಿ 31ರ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿದ್ದು, ಯಾವುದೇ ವ್ಯಕ್ತಿ ಈ ಮಾರ್ಗಸೂಚಿ ಆದೇಶ ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆಯ ಕಲಂ 188ರ ರೀತ್ಯಾ ಕಾನೂನು ಕ್ರಮ ಜರುಗಿಸಲಾಗುವುದು ಎಂದರಲ್ಲದೆ, ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಆದೇಶದ ನಿಯಮಗಳನ್ನು ಅಂಟಿಸುವ ಮೂಲಕ ಮತ್ತು ಧ್ವನಿವರ್ಧಕ ಬಳಸಿ ಪ್ರಚಾರ ಮಾಡಲು ಪೊಲೀಸ್‌ ಇಲಾಖೆಗೆ ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಸಭೆಗೆ ಮಾಹಿತಿ ನೀಡುತ್ತಾ, ಜನವರಿ 11ರ ವರದಿಯನುಸಾರ ಜಿಲ್ಲೆಯಲ್ಲಿ 888 ಕೋವಿಡ್‌ ಸಕ್ರಿಯ ಪ್ರಕರಣಗಳಿದ್ದು, ಜನವರಿ 12 ರಂದು ಒಂದೇ ದಿನದಲ್ಲಿ 729 ಕೋವಿಡ್‌ ಪ್ರಕರಣ ವರದಿಯಾಗಿವೆ. ಕೋವಿಡ್‌ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ, ಜಿಲ್ಲೆಯಲ್ಲಿ ಈಗಾಗಲೇ ಶೇ. 98ರಷ್ಟು ಕೋವಿಡ್‌ ಮೊದಲ ಡೋಸ್‌ ಲಸಿಕಾಕರಣ ಪೂರ್ಣಗೊಂಡಿದ್ದು, ಎರಡನೇ ಡೋಸ್‌ ಲಸಿಕಾಕರಣವನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು. ಈವರೆಗೆ ಶೇ.48ರಷ್ಟು 15-18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್‌ ಲಸಿಕಾಕರಣ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ರಾಹುಲ್‌ಕುಮಾರ್‌ ಶಹಪೂರ್‌ ವಾಡ್‌, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪ ವಿಭಾಗಾಧಿಕಾರಿಗಳಾದ ವಿ.ಅಜಯ್‌ ಹಾಗೂ ಸೋಮಪ್ಪ ಕಡಕೋಳ, ಪಾಲಿಕೆ ಆಯುಕ್ತೆ ರೇಣುಕಾ, ಡಾ.ಮೋಹನ್‌ದಾಸ್‌, ಡಾ.ಮಹಿಮಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!