ಸುಸಜ್ಜಿತ ಶಾಲಾ ಕಟ್ಟಡದ ಬಳಕೆ ಯಾವಾಗ?

ಹೊಸ ಕಟ್ಟಡ ಬಳಸದ ಶಿಕ್ಷಣ ಇಲಾಖೆ ನಿರ್ಲಕ್ಷಕ್ಕೆ ಆಕ್ರೋಶ

308

Get real time updates directly on you device, subscribe now.

ಶಿರಾ: ಸರ್ಕಾರ ನಿರ್ವಹಿಸುತ್ತಿರುವ ಶಾಲಾ ಕಟ್ಟಡಗಳು ಶಿಥಿಲಗೊಂಡು ಮಕ್ಕಳು ಓದಲು ಹೆದರುವಂತಾಗಿದೆ ಎನ್ನುವ ಸುದ್ದಿಗಳ ನಡುವೆಯೇ, ಸುಸಜ್ಜಿತ ಶಾಲಾ ಕಟ್ಟಡವಿದ್ದರೂ ಇಲಾಖೆ ವಶಕ್ಕೆ ಪಡೆದು ಶಾಲೆಗಳನ್ನು ನಡೆಸಲು ಇಲಾಖೆಯೇ ನಿರ್ಲಕ್ಷ ತೋರಿಸುತ್ತಿರುವ ಉದಾಹರಣೆ ಶಿರಾ ತಾಲ್ಲೂಕಿನಲ್ಲಿದೆ.
ತಾಲ್ಲೂಕಿನ ಗೌಡಗೆರೆ ಹೋಬಳಿ, ತಾವರೆಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಇದಕ್ಕೆ ಉದಾಹರಿಸಬಹುದಾಗಿದೆ, ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಟ್ಟಡದಲ್ಲಿ ಕೆಲ ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದ ಕಾರಣ 2018-19ನೇ ಸಾಲಿನಲ್ಲಿ ಮತ್ತು 2019-20 ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿಯಲ್ಲಿ ಮೂಲ ಶಾಲೆಯ ಕೂಗಳತೆ ದೂರದಲ್ಲಿದ್ದ ಶಾಲೆಯ ಹೆಸರಿನಲ್ಲಿದ್ದ 175/150 ಅಡಿ ವಿಸ್ತೀರ್ಣದ ನಿವೇಶನದಲ್ಲಿ ಎರಡು ಕೊಠಡಿ ನಿರ್ಮಿಸಲಾಗಿದೆ. ಸುಮಾರು 30 ರಷ್ಟು ವಿದ್ಯಾರ್ಥಿಗಳು ಕುಳಿತು ಕಲಿಯುವ ಅವಕಾಶ ಇರುವ ಹೊಸ ಕಟ್ಟಡದ ಬಗ್ಗೆ ಇಲಾಖೆಯಾಗಲಿ, ಶಾಲಾಭಿವೃದ್ಧಿ ಮಂಡಳಿಯೇ ಆಗಲಿ ಗಮನ ನೀಡದ ಕಾರಣ, ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ.
ಎರಡೂ ಕೊಠಡಿಗಳನ್ನು ಲೋಕೋಪಯೋಗಿ ಇಲಾಖೆಯೇ ನಿರ್ಮಿಸಿದ್ದು, ಇವುಗಳ ಪೈಕಿ ಒಂದರ ಮೇಲೆ ಲೆಕ್ಕ ಶೀರ್ಷಿಕೆ ವಿವರಗಳು ಮಾಸಿಹೋಗಿದ್ದರೆ, ಮತ್ತೊಂದು 2019-20ನೇ ಸಾಲಿನಲ್ಲಿ ನಬಾರ್ಡ್‌ ಯೋಜನೆ ಅಡಿಯಲ್ಲಿ ಕಟ್ಟಲಾಗಿದೆ. ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ನಾಯಕ ನೀಡಿರುವ ಮಾಹಿತಿಯಂತೆ ಈಗಾಗಲೇ ಒಂದು ಕೊಠಡಿಯ ಕೀಲಿ ಕೈಯನ್ನು ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಲಾಗಿದೆ.
ಇಷ್ಟೇ ಅಲ್ಲದೇ ಹೊಸ ಕಟ್ಟಡದ ಸಮೀಪ ಹೆಣ್ಣು ಮಕ್ಕಳ ಬಳಕೆಗಾಗಿ ಸುಸಜ್ಜಿತ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಗಂಡು ಮಕ್ಕಳ ಶೌಚಾಲಯ ಇಲ್ಲ ಎನ್ನುವ ಕಾರಣಕ್ಕೆ ಕಟ್ಟಡವನ್ನು ಬಳಸಲಾಗುತ್ತಿಲ್ಲ ಎಂದು ಇಲಾಖೆ ಅಧಿಕಾರಿ ಹಾರಿಕೆ ಉತ್ತರ ನೀಡಿದ್ದಾರೆ. ಆದರೆ ಇಲಾಖೆ, ಅಧಿಕಾರಿಗಳ ನಿರ್ಲಕ್ಷದಿಂದ ಮಕ್ಕಳು ಹಳೆ ಕಟ್ಟಡದಲ್ಲಿ ಜೀವ ಕೈಲಿ ಹಿಡಿದುಕೊಂಡು, ಅಭ್ಯಸಿಸುವ ಅನಿವಾರ್ಯತೆ ಎದುರಾಗಿದೆ.
ಪಂಚಾಯತ್‌ ರಾಜ್‌ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಯಾವುದೇ ಇಲಾಖೆ ಅಧಿಕಾರಿಗಳು ಸರಿಯಾಗೆ ಕೆಲಸ ನಿರ್ವಹಿಸುತ್ತಿಲ್ಲ, ಇಡೀ ತಾಲ್ಲೂಕು ಆಡಳಿತವೇ ನಿಷ್ಕ್ರೀಯಗೊಂಡಿದೆ. ಆಡಳಿತಕ್ಕೆ ಚುರುಕು ನೀಡಬೇಕಾಗಿದ್ದ ಶಾಸಕರು ಸೂಕ್ತ ಕ್ರಮ ಕೈಗೊಳ್ಳಲು ಮೀನ ಮೇಷ ಎಣಿಸುತ್ತಿರುವುದರಿಂದ ಎಲ್ಲಾ ಅಧ್ವಾನಗಳಿಗೆ ಕಾರಣವಾಗಿದೆ ಎಂದು ಗ್ರಾಮಪಂಚಾಯಿತಿ ಸದಸ್ಯ ಶಿವಕುಮಾರ ನಾಯಕ ಆರೋಪಿಸಿದ್ದಾರೆ.
ಒಳ್ಳೆ ಶಾಲಾ ಕಟ್ಟಡ ಇಲ್ಲ ಎಂದು ಎಲ್ಲೆಡೆ ಕೇಳಿ ಬರುವ ಮಾತಾಗಿದೆ, ನಮ್ಮೂರಿನಲ್ಲಿ ಹೊಸ ಕಟ್ಟಡ ಬಳಕೆಗೆ ಸಿದ್ಧವಿದ್ದರೂ ಬಳಸಿಕೊಳ್ಳಲು ಸೋಮಾರಿತನ ಪ್ರದರ್ಶಿಸುತ್ತಿರುವ ಅಧಿಕಾರಿಗಳಿಂದಾಗಿ ನೂತನ ಶಾಲಾ ಕಟ್ಟಡ ಕುಡುಕರ ಅಡ್ಡೆ, ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿದೆ. ತಕ್ಷಣ ಶಾಲೆ ಆರಂಭಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದಷ್ಟೇ ಅಲ್ಲದೆ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ನಾಯಕ ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!