ವಿಶ್ವ ಮೆಚ್ಚಿದ ಜ್ಞಾನಿ ವಿವೇಕಾನಂದ: ಪೊ.ನಿರ್ಮಲ್‌ ರಾಜು

396

Get real time updates directly on you device, subscribe now.

ಮಧುಗಿರಿ: ಬದುಕಿದ್ದು ಅಲ್ಪಕಾಲವಾದರೂ ವಿಶ್ವದ ಚರಿತ್ರೆಯಲ್ಲಿ ಅಜರಾಮರವಾಗಿ ಉಳಿಯುವಂತ ಸಾಧನೆ ಮಾಡಿದ ಸ್ವಾಮಿ ವಿವೇಕಾನಂದರು, ವಿಶ್ವವ್ಯಾಪಿ ಮನ್ನಣೆಗಳಿಸಿದ ಹಾಗೂ ವಿಶ್ವಮೆಚ್ಚಿದ ಜ್ಞಾನ ಅವರಲ್ಲಿದ್ದಿದ್ದರಿಂದ ಅವರ ಜ್ಞಾನ ಇಂದಿಗೂ ಪ್ರಸ್ತುತತೆ ಪಡೆದಿದೆ, ಅವರ ಜಯಂತಿಯನ್ನು ರಾಷ್ಟ್ರೀಯ ಯುವ ದಿನಾಚರಣೆ ಎಂದು ಆಚರಿಸುತ್ತಿರುವುದು ಶ್ಲಾಘನೀಯ. ರಾಷ್ಟ್ರದೆಲ್ಲೆಡೆ ಅವರ ಜಯಂತಿ ಆಚರಿಸಿ ಅವರ ವಿಚಾರಧಾರೆಗಳನ್ನು ಮನನ ಮಾಡಿಕೊಳ್ಳುವುದರ ಮೂಲಕ ಯುಗಪರಿವರ್ತನೆ ನಾಂದಿಯಾಗಲಿದೆ, ಅವರಲ್ಲಿನ ವಿದ್ವತ್‌ ಜನಮನ್ನಣೆಗಳಿಸಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪೊ.ನಿರ್ಮಲ್‌ರಾಜು ತಿಳಿಸಿದರು.
ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಸ್ವಾಮಿ ವಿವೇಕಾನಂದರ ಜಯಂತಿಯ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಯುವಜನರು ವಿದ್ಯಾರ್ಥಿ ದೆಸೆಯಿಂದಲೇ ಅಧ್ಯಯನಶೀಲರಾಗಿ, ಸದ್ಗುಣ ಮೈಗೂಡಿಸಿಕೊಳ್ಳಬೇಕು. ಕಾಯಾ ವಾಚಾ ಮನಸಾ ತಾವು ಮಾಡುವ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು, ಸ್ವಾಮಿ ವಿವೇಕಾನಂದರು ಯುವಜನರಲ್ಲಿ ಅಚಲವಾದ ವಿಶ್ವಾಸ ನಂಬಿಕೆ ಹೊಂದಿದ್ದು, ಸಧೃಢ ಯುವ ಜನರಿಂದ ದೇಶ ಅಭಿವೃದ್ಧಿಯಾಗಲಿದೆ ಎಂದು ನಂಬಿದ್ದರು, ಯಶಸ್ಸನ್ನು ಸಾಧಿಸುವ ಛಲ ಅಗಾಧವಾಗಿದ್ದಾಗ ಮಾತ್ರ ಬೃಹತ್‌ ಸಾಧನೆ ಸಾಧ್ಯ, ಅವರು ಆದುದರಿಂದ ವಿದ್ಯಾರ್ಥಿಗಳು ಸಾಧನೆಯತ್ತ ಚಿತ್ತ ಹರಿಸಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿದ ಯುವ ಮುಖಂಡರಾದ ಸಿದ್ದೇಶ್‌ ಮಾತನಾಡಿ ಸ್ವಾಮಿ ವಿವೇಕಾನಂದರು ಯುವ ಜನರ ಪ್ರತೀಕವಾಗಿದ್ದು, ಭಾರತದ ಸ್ವಾಭಿಮಾನದ ಸಂಕೇತವಾಗಿದ್ದಾರೆ, ಅವರು ವಿಶ್ವಪರ್ಯಟನೆ ಮಾಡಿ ಅಪಾರ ಜ್ಞಾನ ಗಳಿಸಿದ್ದು, ಅದನ್ನು ಭಾರತದ ಯುಜನರಿಗೆ ಧಾರೆಯೆರೆದಿದ್ದಾರೆ. ಆದುದರಿಂದ ಅವರ ಚರಿತ್ರೆ ಅಧ್ಯಯನ ಮಾಡಿದ ಯುವಜನರು ಸರಿದಾರಿಯಲ್ಲಿರಲು ಮಾರ್ಗದರ್ಶನ ದೊರೆಯಲಿದೆ ಎಂದರು.
ಪ್ರಾಸ್ತಾವಿಕವಾಗಿ ನ್ಯಾಕ್ ಸಂಚಾಲಕ ಎಸ್‌.ಎಂ.ಸತೀಶ್‌ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತದಲ್ಲಿ ಜನಿಸಿದ ಯುವಶಕ್ತಿಯ ಪ್ರವರ್ತಕರಾಗಿದ್ದಾರೆ. ಅವರು ಭಾರತದಲ್ಲಿ ಯುವ ಜನರನ್ನು ಬಡಿದೆಬ್ಬಿಸಲು ಭಾರತದಾದ್ಯಂತ ಎರಡು ಬಾರಿ ಪಾದಯಾತ್ರೆ ಕೈಗೊಂಡು ಯುವಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಬಡವ ಬಲ್ಲಿದ ಶ್ರೀಮಂತರ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ನೋಡಿದ ಸ್ವಾಮಿ ವಿವೇಕಾನಂದರು ಭಾರತವನ್ನು ವಿಶ್ವದ ಅಗ್ರಸ್ಥಾನದಲ್ಲಿ ನಿಲ್ಲಿಸಲು ಶ್ರಮವಹಿಸಿದ್ದರು. ಸ್ವಾಮಿ ವಿವೇಕಾನಂದರು ಬಹುಮುಖ ಪ್ರತಿಭೆಯಾಗಿದ್ದು, ಅದ್ಬುತ ಮಾತುಗಾರರಾಗಿದ್ದರು, ವೈಚಾರಿಕ ಹಾಗೂ ವೈಜ್ಞಾನಿಕ ಮನೋಭಾವಗಳ ಸಮ್ಮಿಳಿತ ವ್ಯಕ್ತಿತ್ವ ಹೊಂದಿದ್ದ ಅವರು ಮನಸ್ಸಿನ ಏಕಾಗ್ರತೆಯಿಂದ ಅಸಾಧ್ಯವಾದುದನ್ನು ಸಾಧಿಸಬಹುದು ಎಂದು ನಂಬಿದ್ದರು, ಅವರ ಹಾದಿಯಲ್ಲಿ ಯುವಜನರು ಸಾಗಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪೊ.ಟಿ.ಎನ್. ನರಸಿಂಹಮೂರ್ತಿ ಮಾತನಾಡಿ ಬಲಿಷ್ಠ ಯುವ ಜನರಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ನಂಬಿದ್ದ ಸ್ವಾಮಿ ವಿವೇಕಾನಂದರ ಜಯಂತಿಯನ್ನು ರಾಷ್ಟ್ರೀಯ ಯುವ ದಿನಾಚರಣೆಯನ್ನಾಗಿ ಆಚರಿಸಿ ಅವರ ಧೀರವಾಣಿ ಕೇಳುವುದರಿಂದ ಯುವ ಮನಸ್ಸುಗಳು ಜಾಗೃತಗೊಳ್ಳಲಿವೆ, ಅವರ ಪ್ರಖರ ಜ್ಞಾನದಿಂದ ವಿಶ್ವ ಮೆಚ್ಚುಗೆ ಗಳಿಸಿದ್ದರು, ಸರ್ವಧರ್ಮ ಸಮ್ಮೇಳನದಲ್ಲಿ ಅದ್ಬುತ ಮಾತುಗಳ ಮೂಲಕ ಕೋಟ್ಯಾಂತರ ಜನರನ್ನು ಆಧ್ಯಾತ್ಮ ಹಾಗೂ ಜನಸೇವೆಗೆ ಪ್ರೇರೇಪಿಸಿದ ಧೀಮಂತರಾಗಿದ್ದರು, ಸನ್ಯಾಸತ್ವಕ್ಕೆ ಹೊಸಭಾಷ್ಯ ಬರೆದ ಸ್ವಾಮಿ ವಿವೇಕಾನಂದರು ಯುವ ಜನರ ಆಕರ್ಷಣೀಯರಾಗಿದ್ದರು, ಅಸಂಖ್ಯಾತ ಗ್ರಂಥಗಳನ್ನು ಓದಿ ಅಪಾರ ಜ್ಞಾನ ಸಂಪಾದಿಸಿದ್ದರು, ಪ್ರಸ್ತುತ ದಿನಗಳಲ್ಲಿ ಯುವಜನರು ಸ್ವಾಮಿ ವಿವೇಕಾನಂದರ ರೀತಿಯಲ್ಲಿ ಸಾಧನೆಗೆ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ನ್ಯಾಕ್‌ ಸಂಚಾಲಕ ಎಸ್‌.ಎಂ.ಸತೀಶ್‌, ಸಹಾಯಕ ಪ್ರಾಧ್ಯಾಪಕ ಮುನೀಂದ್ರ ಕುಮಾರ್‌, ಸಿಂಧು, ಸತೀಶ್‌ ಕುಮಾರ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!