–ಆನಂದ್ ಸಿಂಗ್ ಟಿ.ಹೆಚ್
ಕುಣಿಗಲ್: ಕೊರೋನ ಭೀತಿ ನಡುವೆ ಸಂಕ್ರಾಂತಿ ಹಬ್ಬಾಚರಣೆ ಬಂದಿದ್ದು ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಅಬ್ಬರದ ಜೊತೆ ರಾಸು ಮಾಲೀಕರಿಗೆ ಕಳೆದ ಸಾಲಿನಲ್ಲಿ ತಮ್ಮ ಜೊತೆಯಿದ್ದ ರಾಸುಗಳು ಕಾಲುಬಾಯಿ ರೋಗದಿಂದ ಮೃತಪಟ್ಟ ಕರಾಳ ನೆನಪಿನ ಜೊತೆ 2022ರ ಸಂಕ್ರಾಂತಿಯನ್ನು ತಾಲೂಕಿನ ರೈತರು ಆಚರಿಸುವಂತಾಗಿದೆ.
2022ರ ಸಂಕ್ರಾಂತಿ ರೈತರಿಗೆ ಒಂದು ರೀತಿ ಕರಾಳ ನೆನಪು ಸೃಷ್ಟಿಸುವ ಹಬ್ಬವಾದರೆ, ಗ್ರಾಹಕರಿಗೆ ಬೆಲೆ ಏರಿಕೆ ಜೊತೆ ಕೊವಿಡ್ ಕರಿ ನೆರಳಿನ ಕರಾಳತೆ ಸೃಷ್ಟಿಸಿದೆ. ವರ್ಷಪೂರ್ತಿ ಬೆಳೆದ ಬೆಳೆ ಕಣದಲ್ಲಿ ರಾಶಿ ಹಾಕಿ ಪೂಜೆ ಸಲ್ಲಿಸಿ ಮನೆಗೆ ಕೊಂಡೊಯ್ದು, ತಮ್ಮ ದುಡಿಮೆಗೆ ಸಾಥ್ ನೀಡಿದ ರಾಸುಗಳನ್ನು ಸಿಂಗರಿಸಿ ಅವುಗಳನ್ನು ಪೂಜಿಸಿ ಸಂಭ್ರಮಿಸುವ ಹಬ್ಬ ಸಂಕ್ರಾಂತಿಯಾಗಿದೆ, ಅದರೆ 21- 22ನೇ ಸಾಲಿಗೆ ತಾಲೂಕಿನಾದ್ಯಂತ 85 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ರಾಗಿ ಬೆಳೆ ಕೈಗೊಳ್ಳಲಾಗಿದ್ದು ಅಕಾಲಿಕ ಮಳೆ ಸೃಷ್ಟಿಸಿದ ಅವಾಂತರಕ್ಕೆ ಶೇ.60 ರಷ್ಟು ಬೆಲೆ ನೆಲ ಕಚ್ಚಿದ್ದು ಒಂದೆಡೆ ಸಂಕ್ರಾಂತಿ ಹಬ್ಬಕ್ಕೆ ಕಣ ಮಾಡಲು ಅತ್ಯಲ್ಪರಾಗಿ ಸಂಗ್ರಹಿಸುವ ಮೂಲಕ ಅಕಾಲಿಕ ಮಳೆಯ ಕರಾಳತೆಯ ನೆನಪಾದರೆ, ಕಳೆದ ಸಾಲಿನಲ್ಲಿ ಕಾಲುಬಾಯಿ ರೋಗಕ್ಕೆ ಸಾಕಷ್ಟು ಜಾನುವಾರು ಮೃತಪಟ್ಟಿದ್ದು 2021ರ ಸಂಕ್ರಾಂತಿಗೆ ಇದ್ದ ಜೊತೆಗಾರ ರಾಸುಗಳು 2022ರ ಸಂಕ್ರಾಂತಿಗೆ ಇಲ್ಲವಾಗಿರುವ ಕರಾಳ ನೆನಪು ಅನ್ನದಾತನ ಕಾಡುತ್ತಿದೆ.
ತಾಲೂಕಿನಲ್ಲಿ ಒಟ್ಟಾರೆ 69 ಸಾವಿರ ಎತ್ತು, ಎಮ್ಮೆ, ಹಸುಗಳಿದ್ದು ಪಶುಸಂಗೋಪನೆ ಇಲಾಖೆ ಪ್ರಕಾರ ಕೇವಲ 8- 10 ಹಸು ಕಾಲುಬಾಯಿ ರೋಗಕ್ಕೆ ಸತ್ತಿವೆ ಎನ್ನಲಾಗುತ್ತಿದೆ, ಆದರೆ ಪಟ್ಟಣದಲ್ಲಿ ಹೈನುಗಾರಿಕೆ ಮಾಡುವ ವಾಸು ಮಾತನಾಡಿ, ಪಟ್ಟಣ ಒಂದರಲ್ಲೆ ಸುಮಾರು 50- 60 ಹಸು ಕಾಲುಬಾಯಿ ರೋಗಕ್ಕೆ ತುತ್ತಾಗಿದ್ದು, ಹೈನುಗಾರಿಕೆ ಮಾಡಿ ಜೀವನ ಸಾಗಿಸುತ್ತಿದ್ದ ಹತ್ತಾರು ಕುಟುಂಬಗಳು ಇಂದು ಇರುವ ಹಸುಗಳನ್ನು ಆರು ಕಾಸು ಮೂರು ಕಾಸಿಗೆ ಮಾರಿ ಕೂಲಿ ಕೆಲಸ ಮಾಡುವಂತಾಗಿದೆ, ಹೀಗಾಗಿ ಈಬಾರಿ ಸಂಕ್ರಾಂತಿ ನಮಗೆ ಕಳೆದ ಬಾರಿ ಸಂಕ್ರಾಂತಿಯಲ್ಲಿ ಜೊತೆಯಲ್ಲಿದ್ದ ಜೊತೆಗಾರ ಹಸುಗಳ ಅಕಾಲಿಕ ಮರಣದ ನೆನಪು ಕಾಡುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ. ಕೊತ್ತಗೆರೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕಾಣಿಸಿಕೊಂಡ ಕಾಲುಬಾಯಿ ರೋಗಕ್ಕೆ ಹಸುಗಳು ಮೃತಪಟ್ಟಿದ್ದು ಅಲ್ಲಿನ ರೈತರು ಸಹ ಅತ್ತ ಹಸು, ಎತ್ತುಗಳು ಇಲ್ಲದೆ, ಇತ್ತ ಬೆಳೆದ ಬೆಳೆ ಕೈಗೆ ಬಾರದೆ ಸಂಕಟ ಅನುಭವಿಸುತ್ತಿದ್ದಾರೆ.
ಪಶುಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ಕಾಲುಬಾಯಿ ರೋಗ ಈಗ ಪೂರ್ಣ ಹತೋಟಿಯಲ್ಲಿದೆ, ಸರ್ಕಾರದಿಂದ ಲಸಿಕೆ ಪೂರೈಕೆಯಲ್ಲಿ ವ್ಯತ್ಯಯವಾದ ಕಾರಣ ಕೆಲವೆಡೆ ಅಲ್ಪ ಪ್ರಮಾಣದಿ ರಾಸುಗಳು ಮೃತಪಟ್ಟಿವೆ, ಇನ್ನು ಹಾಲು ಒಕ್ಕೂಟದಲ್ಲಿ ವಿಮೆ ಮಾಡಿಸಿರುವ ಕಾರಣ ಅಲ್ಲಿನ ಸದಸ್ಯರಿಗೆ ಅನುಕೂಲವಾಗಿದೆ, ಖಾಸಗಿಯವರಿಗೆ ವಿಮೆ ಸವಲತ್ತು ಇಲ್ಲದೆ ನಷ್ಟ ಅನುಭವಿಸುವಂತಾಗಿದೆ ಎಂದಿದ್ದಾರೆ.
2022ರ ಸಂಕ್ರಾಂತಿ ಅನ್ನದಾತನಿಗೆ ಅತಿವೃಷ್ಟಿಯ ಹಾನಿ ಜೊತೆ ಕಾಲು ಬಾಯಿ ರೋಗದಿಂದ ಜಾನುವಾರು ಮೃತಪಟ್ಟ ಕರಾಳ ನೆನಪು ಕಾಡಿದರೆ, ಹಬ್ಬಾಚರಣೆಗೆ ಸಿದ್ಧತೆ ನಡೆಸಿರುವ ಗೃಹಿಣಿಯರು, ನಾಗರಿಕರಿಗೆ ಬೆಲೆಏರಿಕೆ, ಲಾಕ್ ಡೌನ್, ಕೊರೊನ ಭೀತಿ ಕಾಡುತ್ತಿದೆ, ಕೆಜಿ ಅವರೆಕಾಯಿ 50ರಿಂದ 60 ರೂ., ಸೇರಿನ ಲೆಕ್ಕದ ಕಡಲೆಕಾಯಿ ಮಾಯವಾಗಿ ಕೆಜಿ ಲೆಕ್ಕಕ್ಕೆ ಬಂದಿದ್ದು ಕೆಜಿ ಯೊಂದಕ್ಕೆ 60 ರಿಂದ 80ರೂ., ಕಬ್ಬಿನ ಜಲ್ಲೆ ಒಂದಕ್ಕೆ 30ರಿಂದ 50 ರೂ, ಸಿಹಿ ಗೆಣಸು ಕೆಜಿಯೊಂದಕ್ಕೆ 40 ರಿಂದ 60 ರೂ. ಆಗಿದೆ, ಇನ್ನು ಎಳ್ಳು ಮಾಡುವ ಪರಿಪಾಠ ಬಹುತೇಕ ಮಾಯವಾಗಿ ರೆಡಿಮೇಡ್ ಎಳ್ಳಿನ ಭರಾಟೆ ಜೋರಿದೆ. ಹೂವು, ಹಣ್ಣು, ತರಕಾರಿ ದರದಲ್ಲು ಏರಿಕೆ ಕಂಡಿದ್ದು ವಾರಾಂತ್ಯ ಕರ್ಫು ಇತರೆ ಕಾರಣದಿಂದ ಆದಾಯ ಕಡಿಮೆಯಾಗಿರುವ ನಡುವೆ ಹಬ್ಬಾಚರಣೆ ಮಾಡಬೇಕು, ಸಂಪ್ರದಾಯ ಸ್ವಲ್ಪ ಮಟ್ಟಿಗೆ ಮಾಡುತ್ತೇವೆ, ಇನ್ನೇನು ಮಾಡೋದು ಎನ್ನುತ್ತಾರೆ ಗೃಹಿಣಿ ಉಷಾ.
ಒಟ್ಟಾರೆ 2022ರ ಸಂಕ್ರಾಂತಿ ಫಲಾಫಲ ಜ್ಯೋತಿಷ್ಯದಲ್ಲಿ ಏನೆ ಇದ್ದರೂ ಬೆಳೆಯುವ ಅನ್ನದಾತ ಸೇರಿದಂತೆ ಕೊಳ್ಳುವ ಗ್ರಾಹಕರ ತನಕ ಅಷ್ಟೇನು ಶುಭ ಫಲ ಇಲ್ಲದಂತಾಗಿದೆ.
Get real time updates directly on you device, subscribe now.
Prev Post
Next Post
Comments are closed.