ಪ್ರಧಾನಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ: ಕೆಂಪಣ್ಣ

153

Get real time updates directly on you device, subscribe now.

ತುಮಕೂರು: ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕುರಿತಂತೆ ಪ್ರಧಾನಿಗೆ ಪತ್ರ ಬರೆದು ಐದು ತಿಂಗಳಗಳೇ ಕಳೆದರೂ ಅವರಿಂದ ಯಾವುದೇ ಕ್ರಮವಿಲ್ಲ, ಹಾಗಾಗಿ ಮುಂದಿನ 15 ದಿನಗಳ ಒಳಗಾಗಿ ರಾಜ್ಯದ ಎಲ್ಲಾ ಗುತ್ತಿಗೆದಾರರಿಂದ ಪತ್ರ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂದ ಅಧ್ಯಕ್ಷ ಡಿ.ಕೆಂಪಣ್ಣ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಎಸ್‌ವೈಗೆ ಮೂರು ಬಾರಿ ಪತ್ರ ಬರೆದಿದ್ದೇನೆ, ಬೊಮ್ಮಾಯಿ ಅವರಿಗೂ ಪತ್ರ ಬರೆದಿದ್ದೇನೆ, ಅಲ್ಲಿಂದ ಉತ್ತರ ಬಂದಿಲ್ಲ, ಅಂತಿಮವಾಗಿ ಪ್ರಧಾನಿಯವರಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ, ಈ ಭ್ರಷ್ಟಾಚಾರ ನಿಲ್ಲಿಸಲು ಗುತ್ತಿಗೆದಾರರು ಹೋರಾಟ ಮಾಡುತ್ತೇವೆ ಎಂದರು.
ಎಲ್ಲಾ ಜಿಲ್ಲೆಗಳ ಗುತ್ತಿಗೆದಾರರೊಂದಿಗೆ ಚರ್ಚಿಸಿ ಜನವರಿ ಮಧ್ಯದಲ್ಲಿ ಬೃಹತ್‌ ಪ್ರತಿಭಟನೆಗೆ ಉದ್ದೇಶಿಸಲಾಗಿತ್ತು, ಆದರೆ ಕೊರೊನಾ ಕಾರಣದಿಂದ ಹೋರಾಟದ ರೀತಿ ಬದಲಿಸಿ ಪತ್ರ ಚಳವಳಿ ನಡೆಸಲು ಉದ್ದೇಶಿಸಲಾಗಿದೆ, ನಾನು ಗುತ್ತಿಗೆದಾರನಷ್ಟೇ, ಯಾವುದೇ ಪಕ್ಷದ ಮುಖಂಡನಲ್ಲ, ಯಾವ ಮುಖಂಡನನ್ನು ಭೇಟಿ ಮಾಡಿಲ್ಲ, ಹೋರಾಟ ಅನಿವಾರ್ಯವಾಗಿದೆ, ಮಾ. 10ರ ನಂತರ ಪ್ರಧಾನಮಂತ್ರಿ ಭೇಟಿಗೆ ಅವಕಾಶ ನೀಡುವ ಭರವಸೆ ಇದೆ ಎಂದು ಡಿ.ಕೆಂಪಣ್ಣ ನುಡಿದರು.
ಅನುದಾನ ಬಿಡುಗಡೆ, ಎನ್‌ಓಸಿಗೆ ಶೇ.6 ರಿಂದ 10 ಭ್ರಷ್ಟಾಚಾರ ಇದೆ, ಕೆಆರ್‌ಐಡಿಇಎಲ್‌ಗೆ 25 ಸಾವಿರ ಕೋಟಿ ಅನುದಾನ ಬಿಎಸ್‌ವೈ ನೀಡಿದರು, 25 ಪರ್ಸೆಂಟ್‌ ಕೆಲಸ ಆಗಿಲ್ಲ, ಸ್ವತಂತ್ರ ತನಿಖೆ ಆದರೆ ದಾಖಲೆ ಒದಗಿಸುತ್ತೇವೆ, ತುಮಕೂರಿನಲ್ಲಿ ಪ್ಯಾಕೇಜ್ ನಿಂದ ಯಾವ ಕೆಲಸವು ಆಗಿಲ್ಲ, ಬ್ಲಾಕ್‌ ಲಿಸ್ಟ್ ನಲ್ಲಿರುವವರೆಗೆ ಕೆಲಸ ಕೊಡುತ್ತಿದ್ದಾರೆ, ಸ್ಥಳೀಯರು ಯಾರು ಬ್ಲಾಕ್‌ ಲಿಸ್ಟ್ ನಲ್ಲಿ ಇಲ್ಲ, ಬೇರೆ ರಾಜ್ಯದವರಿಗೆ ಗುತ್ತಿಗೆ ನೀಡುವಂತಿಲ್ಲ ಎಂಬ ನಿಯಮ ಇದೆ, ಆದರೂ ಹೊರ ರಾಜ್ಯದವರಿಗೆ ಗುತ್ತಿಗೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ನಿರ್ಮಿತಿ ಕೇಂದ್ರ, ಕೆಆರ್‌ಐಡಿಇಎಲ್ ನವರಿಗೆ ಯಾಕೆ ಕೆಲಸ ಕೊಡ್ತಾರೆ ಎಂಬುದು ಗೊತ್ತಿಲ್ಲ, ಸುಮಾರು 25 ಸಾವಿರ ಕೋಟಿಯಷ್ಟು ಕೆಲಸವನ್ನುಅವರಿಗೆ ಕೊಟ್ಟಿದ್ದಾರೆ. ಶೇ25ರಷ್ಟು ಕೆಲಸ ಆಗಿಲ್ಲ. ಅಧಿಕಾರಿಗಳೊಂದಿಗೆ ಶಾಮೀಲಾಗಿ ನಕಲಿ ಬ್ಯಾಂಕ್‌ ಶ್ಯೂರಿಟಿ ನೀಡಿ ಕೆಲಸ ಮಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ನಮ್ಮ ಸ್ಥಳೀಯ ಗುತ್ತಿಗೆದಾರರ ಪ್ರತಿಯೊಂದು ಕೆಲಸವನ್ನು ಪರಿಶೀಲಿಸುತ್ತಾರೆ, ಅರ್ಧಂಬರ್ಧ ಕೆಲಸ ಮಾಡಿ ಓಡಿ ಹೋಗಿರುವವರ ವಿರುದ್ಧ ಸರಕಾರ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿಯೇ ಪ್ಯಾಕೇಜ್‌ ಪದ್ಧತಿ ಜಾರಿಗೆ ಬಂತು, ಆದರೆ ಈಗ ಅದು ಮಿತಿ ಮೀರಿದೆ, ಈ ಸರಕಾರದ ಅವಧಿಯಲ್ಲಿ ಯಾವ ನಿಯಮವೂ ಇಲ್ಲ, ಅವರು ಮಾಡಿದ್ದೇ ನಿಯಮ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಸ್ಥಳೀಯ ಗುತ್ತಿಗೆದಾರರು ಬದುಕುವುದೇ ಕಷ್ಟವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎ.ಡಿ.ಬಲರಾಮಯ್ಯ, ಖಜಾಂಜಿ ಕೋದಂಡರಾಮು, ತುಮಕೂರು ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಭಾನುಪ್ರಕಾಶ್‌, ಗೌರವಾಧ್ಯಕ್ಷ ಆರ್‌.ವಿಜಯಕುಮಾರ್‌, ಉಪಾಧ್ಯಕ್ಷ ಕೆ.ನಾಗರಾಜು, ಪ್ರಧಾನ ಕಾರ್ಯದರ್ಶಿ ಹೆಚ್‌.ಎನ್‌.ಜಗದೀಶ್‌, ನಾಸೀರ್‌ ಅಹಮದ್‌ ಸೇರಿದಂತೆ ಎಲ್ಲಾ ಪದಾಧಿಕಾರಿಗಳು, ನಿರ್ದೇಶಕರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!