ಸರ್ಕಾರ ಪ್ಯಾಕೇಜ್‌ ಟೆಂಡರ್‌ ರದ್ದು ಮಾಡಲಿ

ತುಮಕೂರಿನಲ್ಲಿ ಗುತ್ತಿಗೆದಾರರಿಂದ ಒಕ್ಕೋರಲ ಒತ್ತಾಯ

149

Get real time updates directly on you device, subscribe now.

ತುಮಕೂರು: ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಪ್ಯಾಕೇಜ್‌ ಟೆಂಡರ್‌ ಪದ್ಧತಿ ರದ್ದು ಪಡಿಸಬೇಕೆಂಬುದು ಕರ್ನಾಟಕ ರಾಜ್ಯದ ಗುತ್ತಿಗೆದಾರರ ಸಂಘದ ಪ್ರಮುಖ ಅಜೆಂಡವಾಗಿದ್ದು, ಇದಕ್ಕಾಗಿ ಯಾವ ರೀತಿಯ ನ್ಯಾಯಾಂಗ ಹೋರಾಟಕ್ಕೂ ಸಂಘ ಸಿದ್ಧವಿದೆ ಎಂದು ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ತುಮಕೂರು ನಗರ ಗುತ್ತಿಗೆದಾರರ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ಯಾಕೇಜ್‌ ಟೆಂಡರ್‌ ರದ್ದು ಪಡಿಸಲು ಹೈಕೋರ್ಟ್‌, ಸುಪ್ರಿಂ ಕೋರ್ಟ್‌ ಯಾವ ಹಂತದ ಹೋರಾಟಕ್ಕೂ ಸಂಘ ಸಿದ್ಧವಿದೆ, ಇದಕ್ಕೆ ರಾಜ್ಯದ ಎಲ್ಲಾ ಗುತ್ತಿಗೆದಾರರು ಕೈಜೋಡಿಸಬೇಕೆಂದರು.
ರಾಜ್ಯ ಸರಕಾರ ಇದುವರೆಗೂ ರಾಜ್ಯದ ಗುತ್ತಿಗೆದಾರರಿಗೆ ಸುಮಾರು 22 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಎಲ್‌ಓಸಿ ನೀಡುವಿಕೆಯಲ್ಲಿಯೂ ಶೇ.6 ರಿಂದ 10 ರಷ್ಟು ಕಮಿಷನ್‌ ಪಡೆಯಲಾಗುತ್ತಿದೆ, ಈ ಎಲ್ಲಾ ಹಗರಣಗಳ ಬಗ್ಗೆ ಸಂಘದ ಬಳಿ ಸ್ಪಷ್ಟ ದಾಖೆಗಳಿವೆ, ಸ್ವತಂತ್ರ ತನಿಖೆ ನಡೆಸಿದರೆ 4 ಜನ ಹಿರಿಯ ಇಂಜಿನಿಯರ್‌ಗಳು, 25 ಕ್ಕೂ ಹೆಚ್ಚು ಎಂಎಲ್‌ಎಗಳು ತಾವಿರುವ ಹುದ್ದೆಗೆ ರಾಜೀನಾಮೆ ನೀಡಿ ಮನೆಗೆ ಹೋಗಬೇಕಾಗುತ್ತದೆ ಎಂದರು.
ಸರಕಾರ 2018 ರಿಂದಲೂ ಲೋಕೋಪಯೋಗಿ ಇಲಾಖೆಯ ಎಸ್‌.ಆರ್‌.ರೇಟ್‌ ಬದಲಾವಣೆ ಮಾಡಿಲ್ಲ, ಕಳೆದ ನಾಲ್ಕು ವರ್ಷಗಳಲ್ಲಿ ಮರಳು, ಸಿಮೆಂಟ್‌, ಜಲ್ಲಿ, ಲೇಬರ್‌ ಕೂಲಿ ಎಲ್ಲವೂ ನಿರೀಕ್ಷೆಗೂ ಮೀರಿ ಹೆಚ್ಚಾಗಿವೆ, ಕೇಳಿದರೆ ಇಂದು, ನಾಳೆ ಎಂದು ಸಬೂಬು ಹೇಳುತ್ತಲೇ ಬಂದಿದ್ದಾರೆ, ಅವರಿಗೆ ಯಾರು ಕಮಿಷನ್‌ ನೀಡುತ್ತಾರೋ ಅವರಿಗೆ ದಾಖಲಾತಿಗಳನ್ನು ಪರಿಶೀಲಿಸದೆ ಟೆಂಡರ್‌ ನೀಡಿ ಅಧಿಕಾರಿಗಳು ಕೈತೊಳೆದುಕೊಳ್ಳುತ್ತಾರೆ, ಹೀಗಾದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ, ಗುಣಮಟ್ಟದ ಕಾಮಗಾರಿ ಸಾಧ್ಯವೇ ಎಂದರು.
ತುಮಕೂರು ನಗರ ಗುತ್ತಿಗೆದಾರರ ಸಂಘ ಉದ್ಘಾಟಿಸಿದ ನಗರ ಶಾಸಕ ಜಿ.ಬಿ.ಜೋತಿಗಣೇಶ್‌ ಮಾತನಾಡಿ, ಸ್ಥಳೀಯ ಗುತ್ತಿಗೆದಾರರು ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಂಡರೆ, ಇ ಟೆಂಡರ್‌, ಗ್ಲೋಬಲ್‌ ಟೆಂಡರ್ ಗಳಲ್ಲಿ ಸ್ಪರ್ಧೆ ಮಾಡಲು ಅವಕಾಶ ಪಡೆಯಬಹುದು, ಇತ್ತೀಚಿನ ದಿನಗಳಲ್ಲಿ ಶೇ.30- 40 ಕಡಿಮೆಗೆ ಬಿಡ್‌ಗೆ ಟೆಂಡರ್‌ ಆಗುತ್ತಿದೆ, ಇದಕ್ಕೆ ನಿಮ್ಮಗಳಲ್ಲಿರುವ ಒಗ್ಗಟ್ಟಿನ ಕೊರತೆಯೂ ಕಾರಣ, ಸಣ್ಣಪುಟ್ಟ ಕೆಲಸಗಳಿಗೆ ಪರಸ್ವರ ಕಿತ್ತಾಡದೆ ಎಲ್ಲರೂ ಒಗ್ಗೂಡಿ ದೊಡ್ಡ ಮಟ್ಟದ ಟೆಂಡರ್‌ ಪಡೆದು ನಡೆಸಲು ಮುಂದಾಗಬೇಕು, ಆಗ ಆರೋಗ್ಯಕರ ಪೈಪೋಟಿ ಉಂಟಾಗುತ್ತದೆ, ನಿಮಗಳ ಬಗ್ಗೆ ನಮ್ಮ ಸಿಂಪಥಿ ಇದ್ದೇ ಇರುತ್ತದೆ ಎಂದು ಭರವಸೆ ನೀಡಿದರು.
ತುಮಕೂರು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎ.ಡಿ.ಬಲರಾಮಯ್ಯ ಮಾತನಾಡಿ, ಪ್ಯಾಕೇಜ್‌ ಟೆಂಡರ್‌ ಎನ್ನುವುದು ಅಧಿಕಾರಿಗಳು, ರಾಜಕಾರಣಿಗಳು ಕಮಿಷನ್ ನನ್ನು ಸೂಟ್‌ಕೇಸ್‌ ಲೆಕ್ಕದಲ್ಲಿ ಪಡೆದುಕೊಳ್ಳಲು ಮಾಡಿಕೊಂಡ ಮಾರ್ಗವಾಗಿದೆ. ಯಾರೋ ಗೊತ್ತು ಗುರಿ ಇಲ್ಲದೆ ವ್ಯಕ್ತಿಗೆ, ಅವನು ಸುಳ್ಳು ದಾಖಲೆ ತೋರಿಸಿದರೂ ಪರಿಶೀಲಿಸದೆ ಟೆಂಡರ್‌ ನೀಡುವ ಪರಿಣಾಮ ಕೆಲವು ಕಾಮಗಾರಿಗಳು ಟೆಂಡರ್‌ ಆಗಿ ವರ್ಷ ಕಳೆದರೂ ಪೂರ್ಣವಾಗಿಲ್ಲ, ಟೆಂಡರ್‌ ಪಡೆಯುವ ವ್ಯಕ್ತಿ ಒಂದು ಗುದ್ದಲಿ, ಹಾರೆ, ಬಾಂಡ್ಲಿ ತರುವುದಿಲ್ಲ, ಎಲ್ಲವನ್ನು ಸ್ಥಳೀಯರಿಗೆ ಸಬ್‌ ಕಾಂಟ್ರಾಕ್ಟರ್ ನೀಡಿ ಹಣ ಬಾಚಿಕೊಂಡು ಪರಾರಿಯಾಗುತ್ತಾನೆ, ಕೆಳಮಟ್ಟದ ಅಧಿಕಾರಿಗಳು ಅವರ ಮೇಲೆ ಹಿಡಿತವಿಲ್ಲದೆ ಜನರ ಕೆಂಗಣ್ಣಿಗೆ ಗುರಿಯಾಗುತ್ತಾರೆ ಎಂದು ದೂರಿದರು.
ಸರಕಾರ ಅನುದಾನ ಹಂಚಿಕೆಯಲ್ಲಿಯೂ ತಾರತಮ್ಯವೆಸಗುತ್ತಿದೆ, ಒಂದು ಕ್ಷೇತ್ರಕ್ಕೆ 50 ಕೋಟಿ ನೀಡಿದರೆ, ಇನ್ನೊಂದು ಕ್ಷೇತ್ರಕ್ಕೆ 500 ಕೋಟಿ ನೀಡುತ್ತಿದೆ, ಬಾಯಿ ಇದ್ದವರೆ ಬದುಕುವಂತಾಗಿದೆ, ಈ ಬಗ್ಗೆ ವಿರೋಧ ಪಕ್ಷಗಳ ಶಾಸಕರು ಬಾಯಿ ಬಿಡುತ್ತಿಲ್ಲ, ಗುತ್ತಿಗೆದಾರರು ತಮ್ಮ ನಡುವಿನ ಕಿತ್ತಾಟ ಬಿಟ್ಟು ಒಗ್ಗೂಡಿದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದೆಂದರು.
ಪಾಲಿಕೆಯ ಅಧೀಕ್ಷಕ ಇಂಜಿನಿಯರ್‌ ಆಶಾ ಮಾತನಾಡಿ, ಕೆಲವೊಂದು ಸಂದರ್ಭದಲ್ಲಿ ಹೊರಗಿನ ಗುತ್ತಿಗೆದಾರರನ್ನು ಹಿಡಿದು ಅವರಿಂದ ಕೆಲಸ ಮಾಡಿಸುವುದೇ ಕಷ್ಟವಾಗುತ್ತದೆ, ಸ್ಥಳೀಯರಾದರೆ ನಾಲ್ಕು ಜನರಿಗೆ ಅಂಜಿಯಾದರೂ ಬೇಗ ಬೇಗ ಕೆಲಸ ಮುಗಿಸುತ್ತಾರೆ, ಹಾಗಾಗಿ ಸಂಘ ಸ್ಥಾಪಿಸಿರುವ ಉದ್ದೇಶ ಒಳ್ಳೆಯದಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ನಯಾಜ್‌ ಅಹಮದ್‌, ಧರಣೇಂದ್ರಕುಮಾರ್‌, ಸದಸ್ಯರಾದ ಮಂಜುನಾಥ್‌, ಮನೋಹರ, ಪಾಲಿಕೆಯ ಎಇಇಗಳಾದ ವಿನಯ್‌, ಸುರೇಶ್‌ ಮಾತನಾಡಿದರು. ತುಮಕೂರು ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಭಾನುಪ್ರಕಾಶ್‌, ಗೌರವಾಧ್ಯಕ್ಷ ಆರ್‌.ವಿಜಯಕುಮಾರ್‌, ಉಪಾಧ್ಯಕ್ಷ ಕೆ.ನಾಗರಾಜು, ಪ್ರಧಾನ ಕಾರ್ಯದರ್ಶಿ ಹೆಚ್‌.ಎನ್‌.ಜಗದೀಶ್‌, ನಾಸೀರ್‌ ಅಹಮದ್‌ ಸೇರಿದಂತೆ ಪದಾಧಿಕಾರಿಗಳು, ನಿರ್ದೇಶಕರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!