ಜಿ.ಎಸ್.ಬಿ ಯಾರ ಏಳಿಗೆಯನ್ನು ಸಹಿಸಲ್ಲ: ಸೊಗಡು ಕಿಡಿ

285

Get real time updates directly on you device, subscribe now.

ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಬಗ್ಗೆ ಲಘುವಾಗಿ ಮಾತನಾಡಿದ್ದಲ್ಲದೆ, ನಾನು ಮಾತನಾಡಿಯೇ ಇಲ್ಲ ಎಂದು ಹೇಳಿ ಮಾಧ್ಯಮಗಳನ್ನು ದೂಷಿಸುವುದು ಸರಿಯಲ್ಲ ಎಂದು ಸಂಸದ ಜಿ.ಎಸ್‌.ಬಸವರಾಜು, ಸಚಿವ ಭೈರತಿ ಬಸವರಾಜು ನಡುವಿನ ಗುಸುಗುಸು ಮಾತು ಕುರಿತಂತೆ ಮಾಜಿ ಸಚಿವ ಸೊಗಡು ಶಿವಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆ.ಸಿ.ಮಾಧುಸ್ವಾಮಿ ಅವರು ಸಚಿವರಾದ ಮೇಲೆ ಹೇಮಾವತಿ ನೀರು ಸರಾಗವಾಗಿ ಹರಿಯುತ್ತಿದೆ, ಜಿಲ್ಲೆಯ ಕೆರೆ ಕಟ್ಟೆಗಳಿಗೆ ನೀರು ಹಂಚಿದ್ದಾರೆ, ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಾರಂಭಗೊಂಡಿವೆ, ಈ ಕಾಮಗಾರಿಗಳಿಂದಾಗಿ ಇಡೀ ಜಿಲ್ಲೆಯ ನೀರಿನ ಬವಣೆ ನೀಗಲಿದೆ, ಇದನ್ನು ಸಹಿಸದ ಸಂಸದರು ಅವರ ವಿರುದ್ಧ ಅವಹೇಳನಕಾರಿಯಾಗಿ ಸಚಿವರ ಬಳಿ ಮಾತನಾಡಿರುವುದು ಸರಿಯಲ್ಲ, ಆತ ಯಾರ ಏಳಿಗೆಯನ್ನು ಸಹಿಸಲ್ಲ, ಇದಕ್ಕೆ ಈ ಹಿಂದಿನ ಹಲವು ರಾಜಕಾರಣಿಗಳೇ ಸಾಕ್ಷಿಯಾಗಿದ್ದಾರೆ ಎಂದರು.
ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ಹರಿಸಲು ಮಾಧುಸ್ವಾಮಿ ಅವರು ಯೋಜನೆ ರೂಪಿಸಿ ಸಮಗ್ರ ಅಭಿವೃದ್ಧಿ ಮಾಡುತ್ತಿದ್ದಾರೆ, ನೀರಿಗಾಗಿ ವೈ.ಕೆ.ರಾಮಯ್ಯ, ಹುಚ್ಚಮಾಸ್ತಿಗೌಡ ಅವರು ನೀರಿಗಾಗಿ ಹೋರಾಟ ಮಾಡಿದ್ದಾರೆ, ಆದರೆ ಹೋರಾಟ ಮಾಡದವರು ಭಗೀರಥರಾಗಲು ಹೊರಟಿದ್ದಾರೆ, ನೀರಾವರಿ ತಜ್ಞ ಡಾ.ಜಿ.ಎಸ್‌.ಪರಮಶಿವಯ್ಯ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ, ಈಗಾಗಲೇ ಜಿಲ್ಲೆಯಲ್ಲಿ ನಾಲ್ಕು ಹೆದ್ದಾರಿಗಳಿದ್ದರೂ, ಮತ್ತೊಂದು ಹೆದ್ದಾರಿ ತಂದು ರೈತರ ಸಣ್ಣಪುಟ್ಟ ಜಮೀನುಗಳು ಹೆದ್ದಾರಿಗೆ ಹೋಗುವಂತೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಹೆಸರಿನಲ್ಲಿ ಕತ್ತೆ ನಿಲ್ಲಿಸಿದರು ಗೆಲ್ಲುತ್ತೆ ಅಂತ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬಂದರು, ಲ್ಯಾಂಡ್‌ ಮಾಫೀಯಾ, ಗಾಡ್‌ ಮಾಫೀಯ ಮೂಲಕ ಚೆನ್ನಾಗಿ ತಿಂದು ತೇಗಿದ್ದಾರೆ. ಇಂತಹವರಿಂದ ಬಿಜೆಪಿಗೆ ಕೆಡುಕೆ ಹೊರತು ಒಳ್ಳೆಯದು ಆಗುವುದಿಲ್ಲ ಎಂದ ಮಾಜಿ ಸಚಿವರು, ಕಾರ್ಯಕರ್ತರು ಕಷ್ಟಪಟ್ಟು ಕಟ್ಟಿದ ಪಕ್ಷಕ್ಕೆ ಹಾವಿನಂತೆ ಬಂದು ಸೇರಿಕೊಂಡು ಅಲ್ಲಿದ್ದವರನ್ನೇ ನಾಶ ಮಾಡಿದರು, ಇವರ ಚರಿತ್ರೆಯನ್ನು ಇಬ್ಬರು ಜಿಲ್ಲಾಧ್ಯಕ್ಷರೇ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ, ಮುಂದಿನ ದಿನಗಳಲ್ಲಿ ಜನರೇ ಸರಿಯಾದ ಪಾಠ ಕಲಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೆ.ಪಿ.ಮಹೇಶ್‌, ಜಯಸಿಂಹರಾವ್‌, ಹರೀಶ್‌ ಮತ್ತಿತರರಿದ್ದರು.

Get real time updates directly on you device, subscribe now.

Comments are closed.

error: Content is protected !!