ತುಮಕೂರು: ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ಸವಲತ್ತುಗಳ ಕೊರತೆಯಿದ್ದರೂ ತಮ್ಮ ಪರಿಶ್ರಮದಿಂದ ಅಪಾರ ಜ್ಞಾನ ಪಡೆದು ವಿಶ್ವ ಮಟ್ಟದಲ್ಲಿ ಭಾರತದ ಹಿರಿಮೆ ಹೆಚ್ಚಿಸಿದ್ದಾರೆ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಕರ್ನಲ್ ಪೊ.ವೈ.ಎಸ್.ಸಿದ್ದೇಗೌಡ ತಿಳಿಸಿದರು.
ವಿಶ್ವವಿದ್ಯಾನಿಲಯದ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ, ಕಲಾ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಜರುಗಿದ ಡಾ.ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದೇಶದ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಅಂಬೇಡ್ಕರ್ ಕಾರ್ನರ್ ಎಂದು ಹೆಸರಿಡುವ ಮೂಲಕ ಮಹಾ ಜ್ಞಾನಿ ಅಂಬೇಡ್ಕರ್ ಅವರಿಗೆ ವಿಶ್ವ ಮಟ್ಟದಲ್ಲಿ ಗೌರವ ನೀಡಲಾಗಿದೆ ಎಂದು ತಿಳಿಸಿದರು.
ಭಾರತ ಸರ್ಕಾರವು ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿಯ ಪ್ರತಿ ಸಾಲಿನಲ್ಲೂ ನಾವು ಅಂಬೇಡ್ಕರ್, ವಿವೇಕಾನಂದರ ತತ್ವಾದರ್ಶಗಳನ್ನು ಕಾಣಬಹುದು ಎಂದರಲ್ಲದೆ, ನಮ್ಮ ವಿದ್ಯಾರ್ಥಿಗಳಲ್ಲೂ ಅಪಾರವಾದ ಸಾಮರ್ಥ್ಯವಿದ್ದು, ದೃಢ ಸಂಕಲ್ಪ ಮಾಡಿ ವಿದ್ಯಾಭ್ಯಾಸ ಮಾಡಿದರೆ ಅಗಾಧ ಸಾಧನೆ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಅಂಬೇಡ್ಕರ್ ಅವರಂತೆ ಸಕಾರಾತ್ಮಕ ಚಿಂತನೆ ಬೆಳೆಸಿಕೊಂಡು ಸಮಾಜದ ಭಾಗವಾಗಿ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಆದರ್ಶಪ್ರಾಯರಾಗಬೇಕು ಎಂದರು.
ಮೀಸಲಾತಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು ಭಾರತದ 1.38 ಕೋಟಿ ಜನರು ಒಂದಿಲ್ಲೊಂದು ರೀತಿಯಲ್ಲಿ ಮೀಸಲಾತಿ ಸೌಲಭ್ಯ ಪಡೆದಿದ್ದು, ಅಂಬೇಡ್ಕರ್ ರಚಿತ ಸಂವಿಧಾನದಿಂದಲೇ ಈ ಸೌಲಭ್ಯ ಹೊಂದಲು ಸಾಧ್ಯವಾಗಿದೆ ಎಂದು ತಿಳಿಸಿದರು.
ವಿಶ್ವವಿದ್ಯಾನಿಲಯದ ಕುಲಸಚಿವ ಪೊ.ಕೆ.ಶಿವಚಿತ್ತಪ್ಪ ಮಾತನಾಡಿ, ತಂತ್ರಜ್ಞಾನದ ಭರಾಟೆ ಹಾಗೂ ಮೊಬೈಲ್ ಸಂಸ್ಕೃತಿಯಲ್ಲಿ ಮುಳುಗಿರುವ ವಿದ್ಯಾರ್ಥಿಗಳು ಓದುವ ಹವ್ಯಾಸದಿಂದ ದೂರವಾಗುತ್ತಿದ್ದಾರೆ, ಯುವ ವಿದ್ಯಾರ್ಥಿಗಳು ಜ್ಞಾನದ ಮೇರು ಶಿಖರ ಡಾ.ಬಿ.ಆರ್.ಅಂಬೇಡ್ಕರ್ ಅವರ ಓದು ಬರಹ ಬದುಕಿನ ಬಗ್ಗೆ ತಿಳಿದು ಅವರ ದಾರಿಯಲ್ಲಿ ನಡೆಯುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಬೇಕು ಎಂದು ತಿಳಿಸಿದರು.
ಅರ್ಥಶಾಸ್ತ್ರಜ್ಞರಾಗಿ ವೃತ್ತಿ ಜೀವನ ಆರಂಭಿಸಿದ ಡಾ.ಅಂಬೇಡ್ಕರ್ ಅವರು ಕಾನೂನು ತಜ್ಞರಾಗಿ ಪತ್ರಕರ್ತರಾಗಿ, ಸಾಹಿತ್ಯಾಸಕ್ತರಾಗಿ, ರಾಜನೀತಿ ತಜ್ಞರಾಗಿ ಅಪಾರವಾದ ಪಾಂಡಿತ್ಯ ಗಳಿಸಿದರು, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಉನ್ನತ ಅಧ್ಯಯನ ಕೈಗೊಂಡ ಅವರು ರಚಿಸಿರುವ ಪ್ರಾಬ್ಲಮ್ ಆಫ್ ರುಪಿ ಪುಸ್ತಕದಿಂದ ಇಂದಿನ ಹಲವಾರು ಆರ್ಥಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಅರ್ಥ ಶಾಸ್ತ್ರಜ್ಞರಿಗೆ ವರವಾಗಿದೆ ಎಂದು ತಿಳಿಸಿದರು.
ಪೊ.ಶಿವಲಿಂಗಸ್ವಾಮಿ ಮಾತನಾಡಿ ಅಂಬೇಡ್ಕರ್ ಓದು ಎಂಬ ಪರಿಕಲ್ಪನೆಯೇ ವಿಶಿಷ್ಟವಾಗಿದ್ದು, ಭಾರತದ ಪಠ್ಯಕ್ರಮಗಳಲ್ಲಿ ಅಂಬೇಡ್ಕರ್ ಅವರ ಕುರಿತ ವಿಚಾರಧಾರೆಗಳನ್ನು ಹೆಚ್ಚಾಗಿ ಪ್ರಚುರ ಪಡಿಸಿಲ್ಲದಿರುವುದು ಬೇಸರದ ಸಂಗತಿಯಾಗಿದೆ, ಅಂಬೇಡ್ಕರ್ ಅವರು ಜೀವಿಸಿದ್ದ ಕಾಲದಲ್ಲಿ ಮೀಸಲಾತಿ ಇರಲಿಲ್ಲ, ಆದರೆ ದಮನಿತ ವರ್ಗಗಳ ಬದುಕು ಬವಣೆಗಳ ಕುರಿತು ಸವಾಲುಗಳಿದ್ದವು, ಇಂತಹ ಸವಾಲುಗಳನ್ನು ಎದುರಿಸಿ ಅಂಬೇಡ್ಕರ್ ಅವರು ಪಡೆದುಕೊಂಡ ಪದವಿಗಳು ಒಂದು ಪುಟಕ್ಕೂ ಮೀರಿದ್ದು, ಅವರ ಜೀವನದ ಬಹುಭಾಗವನ್ನು ಲೈಬ್ರರಿಯಲ್ಲಿಯೇ ಕಳೆದ ದಿನಗಳಿವೆ, ಪುಸ್ತಕ ಓದುವ ಹವ್ಯಾಸಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡು ಅಂಬೇಡ್ಕರ್ ಅವರ ದಾರಿಯಲ್ಲಿ ನಡೆದಲ್ಲಿ ಉನ್ನತ ಸ್ಥಾನ ಪಡೆಯಬಹುದು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಮಾತನಾಡಿ, ಜಿಲ್ಲೆಯ ಹತ್ತು ಕಾಲೇಜುಗಳಲ್ಲಿ ಅಂಬೇಡ್ಕರ್ ಓದು ಕಾರ್ಯಕ್ರಮ ಯಶಸ್ವಿಗೊಳಿಸಿದ್ದೇವೆ, ಈ ಕಾರ್ಯಕ್ರಮದಡಿ ಅಂಬೇಡ್ಕರ್ ಕುರಿತ ಪ್ರಬಂಧ, ರಸಪ್ರಶ್ನೆ, ಚರ್ಚಾ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ನೀಡಲಾಗಿದೆ, ಕಾರ್ಯಕ್ರಮ ಆಯೋಜಿಸಿ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಕಲಾ ಕಾಲೇಜಿನ ಪ್ರಾಂಶುಪಾಲ ಪೊ.ಕೆ.ರಾಮಚಂದ್ರಪ್ಪ ಅಂಬೇಡ್ಕರ್ ಅವರ ವಿಚಾರಧಾರೆಗಳ ಬಗ್ಗೆ ಮಾತನಾಡಿದರು. ವಿಶ್ವವಿದ್ಯಾನಿಲಯದ ಲಕ್ಷ್ಮೀರಂಗಯ್ಯ, ಪೊ.ಕೆ.ಮಹಾಲಿಂಗ, ಪೊ.ಬಸವರಾಜು ಭಾಗವಹಿಸಿದ್ದರು. ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವಿಶ್ವಕ್ಕೆ ಭಾರತದ ಹಿರಿಮೆ ತೋರಿಸಿದ್ದು ಅಂಬೇಡ್ಕರ್
Get real time updates directly on you device, subscribe now.
Comments are closed.