ತುರ್ತು ಚಿಕಿತ್ಸೆಗಾಗಿ ಮಾತ್ರ ಆಸ್ಪತ್ರೆಗೆ ಬನ್ನಿ

171

Get real time updates directly on you device, subscribe now.

ಶಿರಾ: ಕೋವಿಡ್‌ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು, ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇರುವವರು, ಗರ್ಭಿಣಿಯರು, ಹಲ್ಲಿನ ತೊಂದರೆ, ಕಣ್ಣಿನ ತೊಂದರೆ ಇರುವವರು ಆದಷ್ಟು ಸರಕಾರಿ ಆಸ್ಪತ್ರೆ, ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಮುಂದಿನ ಎರಡು ವಾರ ಅಥವಾ ಮುಂದಿನ ಆದೇಶದವರೆಗೆ ಭೇಟಿ ನೀಡಬೇಡಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆದೇಶ ಮಾಡಿದ್ದಾರೆ.
ಸದ್ಯ ರಾಜ್ಯದಲ್ಲಿ ಕೋವಿಡ್‌ ಪ್ರಕರಣ ತೀವ್ರಗತಿಯಲ್ಲಿ ಹರಡುತ್ತಿವೆ, ಇಂತಹ ಸಂದರ್ಭಗಳಲ್ಲಿ ಕೋವಿಡ್‌ ಸೋಂಕಿತರು ಆಸ್ಪತ್ರೆಗೆ ಬರುತ್ತಿರುತ್ತಾರೆ, ಸೋಂಕಿತರು ಹಾಗೂ ಆರೋಗ್ಯದಿಂದ ಇರುವವರು ಒಂದೇ ಕಡೆ ಇದ್ದಾಗ ಕೋವಿಡ್‌ ಸೋಂಕು ಆರೋಗ್ಯವಂತರಿಗೂ ಸಹ ಹರಡುವ ಸಂಭವ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಸಣ್ಣಪುಟ್ಟ ಕಾಯಿಲೆ ಇರುವವರು ವಿನಾಕಾರಣ ಆಸ್ಪತ್ರೆಗೆ ಅಲೆದಾಡುವ ಬದಲು ಮನೆಯಲ್ಲಿಯೇ ದೂರವಾಣಿ ಕರೆ ಮೂಲಕ ತಮ್ಮ ವೈದ್ಯರನ್ನು ಸಂಪರ್ಕಿಸಿ ಅದಕ್ಕೆ ಬೇಕಾದ ಔಷಧಿ ಪಡೆದುಕೊಳ್ಳುವುದು ಒಳ್ಳೆಯದು ಎಂದು ವೈದ್ಯರು ಹೇಳಿದ್ದಾರೆ.
ಗರ್ಭಿಣಿಯರು: ಗರ್ಭಿಣಿಯರು ಸಹ ಪ್ರತಿ ತಿಂಗಳು ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಬಂದು ಆಸ್ಪತ್ರೆಯಲ್ಲಿ ಓಡಾಡುವುದರಿಂದ ಕೋವಿಡ್‌ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಗರ್ಭಿಣಿಯರಿಗೆ ಕೋವಿಡ್‌ ಸೋಂಕು ತಗುಲಿದರೆ ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಅಕಾಲಿಕ ಹೆರಿಗೆಯೂ ಆಗಬಹುದು ಆದ್ದರಿಂದ ಗರ್ಭಿಣಿಯರು ಮನೆಯಲ್ಲಿಯೇ ಇದ್ದು ಸಮಸ್ಯೆ ಇದ್ದಾಗ ಮಾತ್ರ ತಮ್ಮ ವೈದ್ಯರಿಗೆ ಕರೆ ಮಾಡಿ ಔಷಧೋಪಚಾರದ ಬಗ್ಗೆ ಮಾಹಿತಿ ಪಡೆದು ಮನೆಯಲ್ಲಿಯೇ ಔಷಧಿ ತೆಗೆದುಕೊಳ್ಳುವುದು ಒಳ್ಳೆಯದು ಎಂಬುದು ವೈದ್ಯರ ಅಭಿಪ್ರಾಯ.
ರಕಾರಿ ಆಸ್ಪತ್ರೆಯಲ್ಲಿ ಕಣ್ಣಿನ ರೋಗಿಗಳಿಗೆ ತಾತ್ಕಾಲಿಕವಾಗಿ ಶಸ್ತ್ರಚಿಕಿತ್ಸೆ ಮಾಡುವುದನ್ನು ನಿಲ್ಲಿಸಲಾಗಿದೆ. ಆದ್ದರಿಂದ ಕಣ್ಣಿನ ಸಮಸ್ಯೆ ಇರುವವರು ಇನ್ನೂ ಎರಡು ವಾರಗಳ ಕಾಲ ಆಸ್ಪತ್ರೆಗೆ ಬರುವುದು ಬೇಡ. ಎರಡು ವಾರಗಳ ನಂತರ ಅಥವಾ ಕೋವಿಡ್‌ ಸೋಂಕು ಕಡಿಮೆಯಾದ ನಂತರ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವುದು ಒಳಿತು.
ಹಲ್ಲಿನ ಸಮಸ್ಯೆ ಇರುವವರೂ ಸದ್ಯದ ಪರಿಸ್ಥಿತಿಯಲ್ಲಿ ಆಸ್ಪತ್ರೆಗಳಿಗೆ ಬರುವ ಬದಲು ಮನೆಯಲ್ಲಿಯೇ ಇದ್ದು ತಮ್ಮ ವೈದ್ಯರಿಗೆ ದೂರವಾಣಿ ಕರೆ ಮಾಡುವ ಮೂಲಕ ಸಮಸ್ಯೆಗೆ ಔಷಧಿಗಳನ್ನು ಪಡೆಯುವುದು ಒಳಿತು. ಏಕೆಂದರೆ ಆಸ್ಪತ್ರೆಗೆ ಬಂದು ಹೋಗುವುದರಿಂದ ಕೋವಿಡ್‌ ಸೋಂಕು ಹರುಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ಸದ್ಯದ ಮಟ್ಟಿಗೆ ಹಲ್ಲಿನ ಸಮಸ್ಯೆ ಇರುವವರು ಮನೆಯಲ್ಲಿಯೇ ಇದ್ದು ಔಷಧಿ ಪಡೆಯುವುದು ಒಳ್ಳೆಯದು. ತೀವ್ರತರವಾದ ಸಮಸ್ಯೆ ಇದ್ದವರು ಮಾತ್ರ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬಹುದು.
ಒಟ್ಟಾರೆ ಇನ್ನೂ ಎರಡರಿಂದ ನಾಲ್ಕು ವಾರಗಳಲ್ಲಿ ಕೋವಿಡ್‌ ತೀವ್ರವಾಗಿ ಹರಡುವ ಸಾಧ್ಯತೆ ಇದೆ, ಆದ್ದರಿಂದ ಸಾರ್ವಜನಿಕರು ಆದಷ್ಟು ಸರಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ತಮ್ಮ ಕೆಲಸ ಕಾರ್ಯ ಮಾಡಬೇಕು, ಜನಸಂದಣಿ ಇರುವ ಕಡೆ ಕಡ್ಡಾಯವಾಗಿ ಮಾಸ್‌್ಕ ಧರಿಸಬೇಕು. ಆಗಾಗ ಕೈ ತೊಳೆಯುವುದು, ಸ್ಯಾನಿಟೈಸರ್‌ ಬಳಸುವುದು ಮರೆಯಬಾರದು, ಸಾಮಾಜಿಕ ಅಂತರ ಪಾಲನೆ ಮಾಡಬೇಕು, ಮುಂಜಾಗ್ರತೆ ಇದ್ದರೆ ರೋಗ ಬಾರದಂತೆ ತಡೆಗಟ್ಟಬಹುದು.

ಶಿರಾ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ದಿನ ನಿತ್ಯ ಹೊರ ರೋಗಿಗಳು ಸುಮಾರು 500 ರಿಂದ 800 ಮಂದಿ ಆಗಮಿಸುತ್ತಾರೆ, ಅದರಲ್ಲಿ ತುರ್ತು ಚಿಕಿತ್ಸೆ ಪಡೆಯುವ ಅವಶ್ಯಕತೆ ಇರುವವರು ಸುಮಾರು 50 ಮಂದಿ ಇರುತ್ತಾರೆ, ಉಳಿದವರು ಸಣ್ಣಪುಟ್ಟ ಸಮಸ್ಯೆಗಳವರೇ ಇರುತ್ತಾರೆ, ಆದ್ದರಿಂದ ಆಸ್ಪತ್ರೆಗೆ ಸಣ್ಣ ಸಮಸ್ಯೆಗೆಲ್ಲಾ ಬರುವುದನ್ನು ತಪ್ಪಿಸಿ, ತುರ್ತು ಸಂದರ್ಭ ಇದ್ದಾಗ ಮಾತ್ರ ಆಗಮಿಸಿ ಚಿಕಿತ್ಸೆ ಪಡೆಯಬೇಕು, ತುರ್ತು ಶಸ್ತ್ರ ಚಿಕಿತ್ಸೆ ಇರುವವರು, ಹೆರಿಗೆ ಸಮಯ ಹತ್ತಿರ ಬಂದಿರುವವರು ಮಾತ್ರ ಆಸ್ಪತ್ರೆಗೆ ಬರಬೇಕು, ಅನವಶ್ಯಕವಾಗಿ ಬರುವುದರಿಂದ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿತರು ಬಂದು ಹೋಗುವುದರಿಂದ ಸೋಂಕು ಇಲ್ಲದವರಿಗೂ ಹರಡುವ ಸಾಧ್ಯತೆ ಇದೆ, ಸಾಧ್ಯವದಷ್ಟು ಇನ್ನೂ ಎರಡು ವಾರ ಅಥವಾ ಸರಕಾರದ ಆದೇಶದವರೆಗೆ ಅನವಶ್ಯಕವಾಗಿ ಜನರು ಆಸ್ಪತ್ರೆಗೆ ಬರುವುದು ಬೇಡ.
-ಡಾ.ಶ್ರೀನಾಥ್‌, ಆಡಳಿತ ವೈದ್ಯಾಧಿಕಾರಿ, ಸರಕಾರಿ ಆಸ್ಪತ್ರೆ, ಶಿರಾ.

ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಆದೇಶದಂತೆ ಸಾರ್ವಜನಿಕರು ಕೇವಲ ತುರ್ತು ಆರೋಗ್ಯ ಚಿಕಿತ್ಸೆಗಳಿಗೆ ಮಾತ್ರ ಆಸ್ಪತ್ರೆಗೆ ಭೇಟಿ ನೀಡಿ, ಸಾಮಾನ್ಯ ಆರೋಗ್ಯ ತಪಾಸಣೆಗೆ ಮತ್ತು ಸಣ್ಣ ಪ್ರಮಾಣದ ಆರೋಗ್ಯ ಸಮಸ್ಯೆಗಳಿಗೆ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳು ಮುಂದಿನ ಎರಡು ವಾರಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ಆಸ್ಪತ್ರೆಗಳಿಗೆ ಹೋಗಬೇಡಿ, ಜನಸಂದಣಿ ಹೆಚ್ಚಾದಷ್ಟು ಕೋವಿಡ್‌-19 ಸೋಂಕು ಹೆಚ್ಚುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಸಹಕರಿಸಿ.
-ಮಮತ.ಎಂ, ತಹಶೀಲ್ದಾರ್‌, ಶಿರಾ ತಾಲ್ಲೂಕು.

Get real time updates directly on you device, subscribe now.

Comments are closed.

error: Content is protected !!