ಶಿರಾ ಕ್ಷೇತ್ರದಲ್ಲಿ ಠಿಕಾಣಿಗೆ ಮುಂದಾದ ಸಾಸಲು!

ಅವಕಾಶವಾದಿ ರಾಜಕಾರಣಕ್ಕೆ ಅವಕಾಶ ಕೊಡಲ್ಲ- ಶಿರಾದಲ್ಲಿ ಕೈ ಕಾರ್ಯಕರ್ತರ ಆಕ್ರೋಶ

198

Get real time updates directly on you device, subscribe now.

ಶಿರಾ: ಹಿಂದುಳಿದ ವರ್ಗದ ಯುವ ನಾಯಕ, ಚಿಕ್ಕನಾಯಕನಹಳ್ಳಿ ಕಾಂಗ್ರೆಸ್‌ ಮುಖಂಡ, ಜಿಲ್ಲಾ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸತೀಶ್‌ ಸಾಸಲು ದಿಢೀರ್‌ ಶಿರಾ ಕ್ಷೇತ್ರಕ್ಕೆ ಭೇಟಿ ನೀಡಿ ಚುನಾವಣಾ ಪ್ರಚಾರಕ್ಕೆ ಇಳಿದಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ, ಜೊತೆಗೆ ವಿರೋಧಕ್ಕೂ ಕಾರಣವಾಗಿದೆ.
ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಸೌಹಾರ್ದತೆಯ ಸಂಕೇತ ಗಂಡಿಹಳ್ಳಿ ಮಠ ಹಾಗೂ ಐತಿಹಾಸಿಕ ಪ್ರಸಿದ್ಧ ಕಳುವರಹಳ್ಳಿ ಜುಂಜಪ್ಪನ ಕ್ಷೇತ್ರದಲ್ಲಿ ಕಾಡುಗೊಲ್ಲರ ಆರಾಧ್ಯದೈವ ಜುಂಜಪ್ಪ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಕಾಂಗ್ರೆಸ್‌ ಪಕ್ಷ ತನಗೆ ಟಿಕೆಟ್‌ ನೀಡುವಂತೆ ದೇವರಲ್ಲಿ ಮೊರೆ ಹೋಗಿದ್ದಾರೆ ಎನ್ನಲಾಗಿದೆ, ಸಾಸಲು ಸತೀಶರ ಈ ನಡೆ ಸ್ಥಳೀಯ ಕಾಂಗ್ರೆಸ್‌ ಮುಖಂಡರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಮೂಡುವಂತಾಗಿದೆ.
ಹೈಕಮಾಂಡ್‌ ತಮಗೆ ಟಿಕೆಟ್‌ ಕೊಡಲು ನಿರ್ಧರಿಸಿದ್ಯಾ ಎಂಬ ಪ್ರಶ್ನೆಗೆ ಅವರು ಉತ್ತರಿಸಿ ಸಂಘಟನೆ ಮಾಡುವಂತೆ ಅಷ್ಟೇ ಸೂಚಿಸಿದೆ, ಟಿಕೆಟ್‌ ನೀಡಿದರೆ ಗೆಲುವು ಸಾಧಿಸುವುದಾಗಿ ಹೇಳಿಕೊಂಡಿದ್ದಾರೆ.
ಸ್ಥಳೀಯ ಕಾಂಗ್ರೆಸ್‌ ಮುಖಂಡರನ್ನು ಸಂಪರ್ಕಿಸದೆ ಹೀಗೆ ಏಕಾಏಕಿ ಪ್ರಚಾರ ನಡೆಸುತ್ತಿರುವುದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹಾಗೂ ಕಾರ್ಯಕರ್ತರಿಗೂ ಬೇಸರ ಉಂಟು ಮಾಡಿದೆ ಎನ್ನಲಾಗಿದೆ.
ವಿಧಾನಸಭಾ ಚುನಾವಣೆಗೆ ಒಂದುವರೆ ವರ್ಷ ಇರುವಾಗಲೇ ಹೀಗೆ ತಾನು ಆಕಾಂಕ್ಷಿತ ಅಭ್ಯರ್ಥಿ ಎಂದು ಹೇಳಿಕೊಂಡು ಬಂದಿರುವ ಇವರು ಶಿರಾ ಕ್ಷೇತ್ರದಲ್ಲಿ ಗೊಲ್ಲ ಸಮುದಾಯ ಸೇರಿದಂತೆ ಹಿಂದುಳಿದ ವರ್ಗಗಳ ಮತಗಳೇ ಹೆಚ್ಚಾಗಿದ್ದು 1.5 ಲಕ್ಷ ಹಿಂದುಳಿದ ವರ್ಗಗಳ ಮತಗಳು ಶಿರಾ ಕ್ಷೇತ್ರದಲ್ಲಿದ್ದು ಇವೆಲ್ಲವನ್ನು ಒಗ್ಗೂಡಿಸಿ ಮತ ಪಡೆಯುವ ದೃಷ್ಟಿಯಿಂದ ಶಿರಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಇಚ್ಛೆ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಸತತವಾಗಿ ಹತ್ತು ಬಾರಿ ಶಿರಾ ಕ್ಷೇತ್ರ ಪ್ರತಿನಿಧಿಸಿದ್ದಾರೆ, ಅವರು ಹಿರಿಯರು, ನಮ್ಮಂತಹ ಕಿರಿಯರಿಗೆ ಸ್ಥಳಾವಕಾಶ ಮಾಡುವ ಮೂಲಕ ಕಾಂಗ್ರೆಸ್‌ ಬಲಪಡಿಸುವ ನಮ್ಮ ಪ್ರಯತ್ನಕ್ಕೆ ಸಹಕಾರ ನೀಡಬೇಕು ಎಂದು ಟಿಬಿಜೆಗೆ ಸೆಡ್ಡು ಹೊಡೆಯಲು ಮುಂದಾಗಿರುವುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.

ಅವಕಾಶವಾದಿತನ ನಡೆಯಲ್ಲ…
ಸಾಸಲು ಸತೀಶ್‌ ಚಿಕ್ಕನಾಯಕನಹಳ್ಳಿ ಕೇತ್ರದಲ್ಲಿ ಪಕ್ಷ ಸಂಘಟನೆ ಮಾಡಿರೋದು ಅಷ್ಟರಲ್ಲೇ ಇದೆ, ಒಮ್ಮೆ ಟಿಕೆಟ್‌ ಪಡೆದು ಸೋತ ನಂತರ ಕ್ಷೇತ್ರದಲ್ಲಿ ಜನರ ವಿಶ್ವಾಸ ಗಳಿಸುವ ಕೆಲಸ ಮಾಡಲೇ ಇಲ್ಲ, ಕೆಲ ಹಿಂಬಾಲಕರನ್ನು ಕಟ್ಟಿಕೊಂಡು ಅಲ್ಲೊಂದು ಇಲ್ಲೊಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಮತ್ತೇಲ್ಲೂ ದರ್ಶನ ಕೊಟ್ಟಿಲ್ಲ, ಚಿ.ನಾ.ಹಳ್ಳಿ ತಾಲ್ಲೂಕಿನಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತುಟಿ ಬಿಚ್ಚಲಿಲ್ಲ, ಒಬ್ಬ ನಾಯಕನಾಗಿ ಪಕ್ಷ ಕಟ್ಟುವ ಕೆಲಸವೂ ಆಗಲಿಲ್ಲ, ಇಂಥ ನಾಯಕ ಈಗ ಶಿರಾ ಕ್ಷೇತ್ರದಲ್ಲಿ ಪಕ್ಷ ಕಟ್ಟುತ್ತೇನೆ, ಸಂಘಟನೆ ಮಾಡುತ್ತೇನೆ, ನಾನೇ ನಿಂತು ಗೆಲ್ಲುತ್ತೇನೆ ಎಂದು ಬಮದಿರುವುದು ನೋಡಿದರೆ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ, ಈತ ಅವಕಾಶವಾದಿ ರಾಜಕಾರಣಿ, ಶಿರಾ ಕ್ಷೇತ್ರದ ಜನರು ಈ ವ್ಯಕ್ತಿಯನ್ನು ಒಪ್ಪುವುದಿಲ್ಲ ಎಂದು ಶಿರಾ ಕಾಂಗ್ರೆಸ್‌ ಕಾರ್ಯಕರ್ತರು ಸಾಸಲು ಸತೀಶ್‌ ವಿರುದ್ಧ ಕಿಡಿ ಕಾರಿದ್ದಾರೆ.

ಸಾಸಲು ಸತೀಶ್ ಗೆ ಬೆಂಬಲವಿಲ್ಲ..
ಶಿರಾ ತಾಲ್ಲೂಕಿನ ಕಾಂಗ್ರೆಸ್ ನ ಕಾರ್ಯಾಧ್ಯಕ್ಷ ಸಾಸಲು ಸತೀಶ್‌ ಪ್ರಚಾರಕ್ಕೆ ಮುಂದಾಗಿರುವುದು ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದ್ದು, ಸಾಲಸು ನಡೆಗೆ ಯಾದವ ಮುಖಂಡ ಮಾಗೋಡು ಕಂಬಣ್ಣ ಕಿಡಿ ಕಾರಿದ್ದಾರೆ.
ಸಾಸಲು ಸತೀಶ್‌ ಶಿರಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಲು ಆಕಾಂಕ್ಷಿಯಾಗಿದ್ದೇನೆ, ಈ ನಿಟ್ಟಿನಲ್ಲಿ ಹೈಕಮಾಂಡ್‌ ಪ್ರಚಾರ ಮಾಡಲು ಹೇಳಿದ್ದಾರೆ, ಆದ್ದರಿಂದ ಪ್ರಚಾರಕ್ಕೆ ಚಾಲನೆ ನೀಡಿರುವುದಾಗಿ ಹೇಳಿಕೆ ಕೊಟ್ಟಿದ್ದು, ಯಾವುದೇ ಸಭೆ ಮಾಡದೆ, ಕೋವಿಡ್‌ ಸಂದರ್ಭದ ಸಮಯದಲ್ಲಿ ಪ್ರಚಾರ ಮಾಡುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದ್ದಾರೆ.
ಶಿರಾ ತಾಲ್ಲೂಕಿನಲ್ಲಿಯೇ ಕಾಡುಗೊಲ್ಲ ಸಮುದಾಯದ ಹಲವಾರು ಮುಖಂಡರು ಇದ್ದು, ಇಲ್ಲಿನ ಜನಾಂಗದ ಅಭಿವೃದ್ದಿಗಾಗಿ ಶ್ರಮಿಸಿರುವವರು ಇದ್ದಾರೆ, ಆದರೆ ಜನಾಂಗದ ಹೆಸರೇಳಿಕೊಂಡು ಎಲ್ಲಿಂದಲೋ ಬಂದು ಜನಾಂಗದಲ್ಲಿ ಗೊಂದಲ ಉಂಟು ಮಾಡಬೇಡಿ, ನೀವು ಶಿರಾ ತಾಲ್ಲೂಕಿಗೆ ಬಂದು ಚುನಾವಣೆಗೆ ನಿಲ್ಲುವ ಬದಲು ಚಿಕ್ಕನಾಯಕನಹಳ್ಳಿಯಲ್ಲಿಯೇ ಕಾಂಗ್ರೆಸ್‌ ಪ್ರಚಾರ ನಡೆಸಿ ಅಲ್ಲಿಯೇ ಚುನಾವಣೆಗೆ ಸ್ಪರ್ಧೆ ಮಾಡಿ ಎಂದಿದ್ದಾರೆ.
ಕಾಡುಗೊಲ್ಲ ಸಮುದಾಯವನ್ನು ಎಸ್.ಟಿ ಮೀಸಲಾತಿಗೆ ಸೇರಿಸಬೇಕೆಂದು ವಿಧಾನಸೌಧದಲ್ಲಿ ಮೊದಲು ಧ್ವನಿ ಎತ್ತಿದವರು ಮಾಜಿ ಸಚಿವ ಟಿ.ಬಿ.ಜಯಚಂದ್ರ, ಶಿರಾ ತಾಲ್ಲೂಕಿನಲ್ಲಿ ಕಾಡುಗೊಲ್ಲ ಭವನ ನಿರ್ಮಾಣಕ್ಕೆ ಹಾಗೂ ಹಾಸ್ಟೆಲ್‌ ನಿರ್ಮಿಸುವ ಕಟ್ಟಡಕ್ಕೆ ಅನುದಾನ ನೀಡಿದ್ದಾರೆ, ಕುರಿಗಾಹಿಗಳ ಕುರಿ ಮತ್ತು ಮೇಕೆಗಳು ಅಕಾಲಿಕವಾಗಿ ಸಾವನ್ನಪ್ಪಿ ನಷ್ಟ ಉಂಟಾಗುತ್ತದೆ ಎಂಬುದನ್ನು ಮನಗಂಡು ಪ್ರತಿ ಕುರಿ ಮತ್ತು ಮೇಕೆಗೆ 5000 ರೂ. ಪರಿಹಾರ ನೀಡುವ ಯೋಜನೆ ಜಾರಿಗೆ ತಂದಿದ್ದಾರೆ, ಹೀಗಿದ್ದೂ ಶಿರಾ ಕ್ಷೇತ್ರದಲ್ಲಿ ಟಿ.ಬಿ.ಜಯಚಂದ್ರ ಅವರ ವಿರುದ್ಧ ಟಿಕೆಟ್‌ ಕೇಳಲು ಬಂದಿದ್ದೀರಿ ಇದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ ಸಮುದಾಯದ ಹೆಸರೇಳಿಕೊಂಡು ಬಂದು ಹಲವಾರು ನಾಯಕರು ವಾಪಸ್‌ ಹೋಗಿದ್ದಾರೆ, ಅದೇ ರೀತಿ ನೀವು ಸಹ ಸಮುದಾಯದ ಹೆಸರೇಳಿಕೊಂಡು ಬಂದು ಗೊಂದಲ ಸೃಷ್ಟಿ ಮಾಡಬೇಡಿ, ಶಿರಾ ತಾಲ್ಲೂಕಿನಲ್ಲಿ ಮುಂದಿನ ಕಾಂಗ್ರೆಸ್‌ ಅಭ್ಯರ್ಥಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರೆ ಆಗುತ್ತಾರೆ, ಈ ಬಗ್ಗೆ ಅನುಮಾನ ಬೇಡ ಎಂದು ಮಾಗೋಡು ಕಂಬಣ್ಣ ಹೇಳಿದ್ದಾರೆ.

ನಾನು ಚಿಕ್ಕನಾಯಕನಹಳ್ಳಿ ತಾಲೂಕಿನವನಾಗಿದ್ದರೂ ಸಹ ಶಿರಾ ತಾಲೂಕಿನಲ್ಲಿ ಹೆಚ್ಚು ಬಾಂಧವ್ಯಗಳನ್ನು ಹೊಂದಿದ್ದೇನೆ. ಗೊಲ್ಲ ಸಮುದಾಯ ಸೇರಿದಂತೆ ಹಿಂದುಳಿದ ವರ್ಗದ ಸಮುದಾಯಗಳ ಕಾರ್ಯಕರ್ತರು ನನಗೆ ಸ್ಪರ್ಧೆ ಮಾಡುವಂತೆ ಒತ್ತಡ ಹೇರಿದ ಕಾರಣ ಶಿರಾ ಕ್ಷೇತ್ರವನ್ನು ಆಯ್ಕೆಮಾಡಿಕೊಂಡಿದ್ದೇನೆ. ಕಾಂಗ್ರೆಸ್‌ ವರಿಷ್ಠರ ಮೌಖಿಕ ಸೂಚನೆ ಮೇರೆಗೆ ಪಕ್ಷ ಸಂಘಟನೆಗೆ ಮುಂದಾಗಿದ್ದೇನೆ. ಮುಂಬರುವ 2023 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ನನಗೆ ಟಿಕೆಟ್‌ ನೀಡುತ್ತದೆ ಎಂಬ ವಿಶ್ವಾಸ ನನಗಿದೆ.
ಸಾಸಲು ಸತೀಶ್
ಕಾಂಗ್ರೆಸ್‌ ಮುಖಂಡ

Get real time updates directly on you device, subscribe now.

Comments are closed.

error: Content is protected !!