ಜನರ ಸಮಸ್ಯೆ ನಿವಾರಿಸದಿದ್ರೆ ಸುಮ್ಮನಿರಲ್ಲ

ಅಧಿಕಾರಿಗಳಿಗೆ ಪಿಎಲ್‌ಡಿ ಬ್ಯಾಂಕ್‌ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್‌ ಎಚ್ಚರಿಕೆ

170

Get real time updates directly on you device, subscribe now.

ಕುಣಿಗಲ್‌: ತಾಲೂಕಿನ ಜನರು ನನಗೂ 54 ಸಾವಿರ ಮತ ನೀಡಿದ್ದಾರೆ, ಜನರ ಸಮಸ್ಯೆ ಆಲಿಸುವ ಕೆಲಸ ಮಾಡಬೇಕೆಂದು ಪಿಎಲ್‌ಡಿ ಬ್ಯಾಂಕ್‌ ರಾಜ್ಯಾಧ್ಯಕ್ಷ, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್‌ ಹೇಳಿದರು.
ಬುಧವಾರ ತಾಲೂಕು ಕಚೇರಿ ಆವರಣದಲ್ಲಿನ ನಂದಿನಿ ಬೂತ್‌ ಬಳಿ ಜನರ ಸಮಸ್ಯೆ ಆಲಿಸಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ತಾಲೂಕಿನಲ್ಲಿ ಜನರ ಸಮಸ್ಯೆಆಲಿಸುವ ಕೆಲಸವಾಗುತ್ತಿಲ್ಲ, ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು ಜನರಿಗೆ ತಿಳಿಸುತ್ತಿಲ್ಲ, ಶಾಸಕರಿಗೆ ಕೆಡಿಪಿ ಮೀಟಿಂಗ್‌ ಮಾಡುವುದು ಗೊತ್ತಿಲ್ಲ, ಸಂಸದರ ಜೊತೆ ಸಭೆ ನಡೆಸಿ ಫೋಟೋಗೆ ಫೋಸ್‌ ಕೊಡುವುದು ಅಭಿವೃದ್ಧಿ ಎಂದು ಶಾಸಕರು ಭಾವಿಸಿದ್ದಾರೆ, ಆದರೆ ಜನರ ಸಮಸ್ಯೆ ಬಗೆಹರಿಯುತ್ತಿಲ್ಲ, ಕಚೇರಿಯಲ್ಲಿ ಸಮಸ್ಯೆ ಹೊತ್ತ ಜನರ ಮೇಲೆ ಅಧಿಕಾರಿಗಳು ಮುಗಿ ಬೀಳುತ್ತಾರೆ, ಸಮಸ್ಯೆ ಬಗೆ ಹರಿಸುತ್ತಿಲ್ಲ, ಹೀಗಾಗಿ ನಮಗೂ ಜವಾಬ್ದಾರಿ ಇದೆ, ಜನರು, ಕಾರ್ಯಕರ್ತರು ಪದೇ ಪದೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರತಿ ಬುಧವಾರ ತಾಲೂಕು ಕಚೇರಿಯಲ್ಲಿ ಹಾಗೂ ವಾರದಲ್ಲಿ ಮೂರು ದಿನ ಕ್ಷೇತ್ರದಲ್ಲಿ ಸಂಚರಿಸಿ ಜನರ ಸಮಸ್ಯೆ ಆಲಿಸಿ ಪರಿಹರಿಸಲು ಯತ್ನಿಸುತ್ತೇನೆ ಎಂದರು.
ತಾಲೂಕು ಕಚೇರಿ ಆವರಣದಲ್ಲಿ ಶೌಚಾಲಯ ಕಟ್ಟಡ ಅರ್ಧಬಂರ್ಧ ಆಗಿ ನಾಲ್ಕು ವರ್ಷ ಕಳೆಯುತ್ತಾ ಬಂದರೂ ಜನರ ಸೇವೆಗೆ ಸಿಗದ ಬಗ್ಗೆ ತಹಶೀಲ್ದಾರ್‌, ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗದುಕೊಂಡ ಅವರು ಬೇಡದ ಕಡೆ ಶೌಚಾಲಯ ನಿರ್ಮಿಸಲು ಆಸಕ್ತಿ ಇರುವ ಮುಖ್ಯಾಧಿಕಾರಿ ಅಗತ್ಯ ಇರುವೆಡೆ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಶೀಘ್ರದಲ್ಲೆ ಸೂಕ್ತ ಕ್ರಮವಾಗದೆ ಇದ್ದಲ್ಲಿ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಹೇಗೆ ಕೆಲಸ ಮಾಡಿಸಬೇಕೆಂದು ಗೊತ್ತಿದೆ ಎಂದು ಎಚ್ಚರಿಸಿದರು.
ಆಸ್ಪತ್ರೆ ಮುಂದೆ ಶುದ್ಧ ಕುಡಿಯುವ ನೀರು ಘಟಕ ಉದ್ಘಾಟನೆ ಆದರೂ ನೀರು ಬಾರದ ಬಗ್ಗೆ ಮುಖ್ಯಾಧಿಕಾರಿಗೆ ಎಚ್ಚರಿಕೆ ನೀಡಿ ತ್ವರಿತವಾಗಿ ಗಮನ ಹರಿಸುವಂತೆ ಸೂಚಿಸಿದರು, ಸಮರ್ಪಕ ರಸ್ತೆ ನಿರ್ವಹಣೆ ಆಗದ ಬಗ್ಗೆ ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ, ಸೂಕ್ತ ಚಿಕಿತ್ಸೆ ನೀಡದ ಬಗ್ಗೆ ವೈದ್ಯಾಧಿಕಾರಿಗಳಿಗೆ, ಯೋಜನೆ ಸರಿಯಾಗಿ ವಿವರಿಸದ ತೋಟಗಾರಿಕೆ, ಕೃಷಿ ಇಲಾಖಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ನಿವೃತ್ತ ಸೈನಿಕರಿಗೆ ಸಮರ್ಪಕ ಭೂಮಿ ಮಂಜೂರು ಮಾಡದಿರುವ ಬಗ್ಗೆ ನಿವೃತ್ತ ಸೈನಿಕ ರಮೇಶ್‌ ಮನವಿ ಮಾಡಿದ್ದು, ಈ ನಿಟ್ಟಿನಲ್ಲಿ ತಹಶೀಲ್ದಾರ್‌ ಅವರೊಂದಿಗೆ ಚರ್ಚಿಸುವ ಭರವಸೆ ನೀಡಿದರು.
ಮನೆ ಮೇಲೆ ಪವರ್‌ಲೈನ್‌ ಎಳೆಯಲು ಯತ್ನಿಸಿದ ಬೆಸ್ಕಾಂ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ವಿನಾಕಾರಣ ತೊಂದರೆ ನೀಡದಂತೆ ತಾಕೀತು ಮಾಡಿದರು.

ಕೋವಿಡ್‌ನಿಂದ ಸತ್ತವರು ಭೂತವಾಗಿ ಬಂದು ಕಾಡುತ್ತಾರೆ ಎಚ್ಚರ!
ಯಡ್ಡಿಗೆರೆ ಗ್ರಾಮದಲ್ಲ ಕೊವಿಡ್‌ನಿಂದ ಮೃತಪಟ್ಟ ವ್ಯಕ್ತಿಗೆ ಪರಿಹಾರ ನೀಡಲು ಅಗತ್ಯ ದಾಖಲೆ ನೀಡಲು ಸತಾಯಿಸುತ್ತಿದ್ದ ಬಗ್ಗೆ ಗ್ರಾಮಸ್ಥರು ದೂರು ಸಲ್ಲಿಸಿದ ಮೇರೆಗೆ ಕಂದಾಯಾಧಿಕಾರಿಗಳಿಗೆ ಕರೆ ಮಾಡಿದ ಅವರು ಕಳೆದ ಆರು ಮೂರು ತಿಂಗಳಿನಿಂದ ಅರ್ಜಿ ಸಲ್ಲಿಸಿದ್ದಾರೆ, ಆದರೆ ಶವಸಂಸ್ಕಾರಕ್ಕೆ ಪರಿಹಾರ ಹಣ ನೀಡಿ ಇದೀಗ ಕೊವಿಡ್‌ನಿಂದ ಮೃತಪಟ್ಟಿರುವ ದಾಖಲೆ ನಿರ್ವಹಿಸಲು ವಿಳಂಬ ಮಾಡುತ್ತಿರುವುದು ನಿಮಗೆ ಶೋಭೆ ತರುವುದಿಲ್ಲ, ಇದೆ ರೀತಿ ಆದರೆ ಸತ್ತವರು ಭೂತವಾಗಿ ಬಂದು ನಿಮ್ಮನ್ನು ಕಾಡಿದಾಗ ನಿಮಗೆ ಕಷ್ಟ ಗೊತ್ತಾಗುತ್ತೆ ಎಂದು ಎಚ್ಚರಿಸಿದ ಮೇರೆಗೆ ಅಧಿಕಾರಿಗಳು ನಾಳೆಯೊಳಗೆ ದಾಖಲೆ ಸಿದ್ಧಪಡಿಸುವುದಾಗಿ ಹೇಳಿದರು.
ಕೊವಿಡ್‌ ಪರಿಹಾರಕ್ಕೆ ದಾಖಲೆ ನೀಡಲು ಆರೋಗ್ಯಾಧಿಕಾರಿ, ಕಂದಾಯಾಧಿಕಾರಿ ಹಾಗೂ ಪಿಡಿಒಗಳು ಜನರನ್ನು ಸತಾಯಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಡಿ.ಕೃಷ್ಣಕುಮಾರ್‌, ಶವ ಸಂಸ್ಕಾರಕ್ಕೆ ಪರಿಹಾರ ನೀಡುವ ಅಧಿಕಾರಿಗಳು ಕೊವಿಡ್‌ನಿಂದ ಮೃತಪಟ್ಟಿರುವ ಬಗ್ಗೆ ದಾಖಲೆ ನೀಡಲು ಜನರನ್ನು ಅಲೆದಾಡಿಸುತ್ತಿದ್ದಾರೆ, ಇದು ಅಧಿಕಾರಿಗಳಿಗೆ ಶೋಭೆ ತರುವುದಿಲ್ಲ, ಇನ್ನಾದರೂ ಎಚ್ಚರ ವಹಿಸಬೇಕು, ಇಲ್ಲವಾದಲ್ಲಿ ಸಚಿವರ ಗಮನ ಸೆಳೆದು ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದರು.
ಹಲವಾರು ನಾಗರಿಕರು ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದರು, ಬಿಜೆಪಿ ತಾಲೂಕು ಅಧ್ಯಕ್ಷ ಬಲರಾಮ, ಯುವ ಘಟಕದ ಅಧ್ಯಕ್ಷ ಧನುಶ್‌ ಗಂಗಾಟ್ಕರ್‌, ಪುರಸಭೆ ಸದಸ್ಯರಾದ ಆನಂದಕುಮಾರ್‌, ಗೋಪಿ, ಪ್ರಮುಖರಾದ ಸುರೇಶ, ನಾಗಾನಂದ, ಜಗದೀಶ್‌, ಅನೂಪ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!