ಗುಬ್ಬಿ: ಶ್ರೀಸಿದ್ದರಾಮೇಶ್ವರರು ಕೇವಲ ನಾಡಿಗೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಗುರುವಾಗಿ ಕಂಡವರು ಎಂದು ಬೆಟ್ಟದಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಬೆಟ್ಟದಹಳ್ಳಿ ಗ್ರಾಮದಲ್ಲಿ ಶ್ರೀಗವಿಮಠದಲ್ಲಿ 849 ನೇ ವರ್ಷದ ಶ್ರೀಸಿದ್ದರಾಮೇಶ್ವರ ಸ್ವಾಮಿಯವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿ ಗ್ರಾಮದಲ್ಲೂ ಕೆರೆಗಳನ್ನು ಕಟ್ಟೆಗಳನ್ನು ಕಟ್ಟಿಸುವ ಮೂಲಕ ಜಲದ ಮಹತ್ವವನ್ನು ಇಡೀ ಜಗತ್ತಿಗೆ ಸಾರಿದವರು, ಕೇವಲ ಮಾನವ ಜಗತ್ತು ಮಾತ್ರವಲ್ಲದೆ ಪ್ರಾಣಿ, ಪಕ್ಷಿ ಸಂಕುಲ ಸಹ ಶ್ರೀಸಿದ್ದರಾಮೇಶ್ವರರ ಸೇವೆಯನ್ನು ನೆನೆಯಬೇಕಾಗಿದೆ, ಅವರ ಕಾರ್ಯಗಳ ಬಗ್ಗೆ ನೂರಾರು ಶಾಸನಗಳಲ್ಲಿ ಬರೆಯಲಾಗಿದೆ, ಇವರಿಗೆ ಇರುವಂತಹ ಪೂಜಾ ಗದ್ದುಗೆಗಳು ಯಾವ ಶಿವ ಶರಣರಿಗೂ ಇಲ್ಲ, ಅಂತಹ ಸಾಮಾಜಿಕ ಕಾರ್ಯ ಮಾಡುತ್ತ ಬಂದ ಶರಣರು ಸಿದ್ದರಾಮೇಶ್ವರರು, ತುಮಕೂರು ಜಿಲ್ಲೆಯಲ್ಲೆ ಸಾಕಷ್ಟು ಅವರ ಗದ್ದುಗೆಗಳು ಇದ್ದು ಲಕ್ಷಾಂತರ ಭಕ್ತರು ಅವರನ್ನು ಪೂಜಿಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.
ಚಿಕ್ಕಮಗಳೂರು ಬಸವ ಮಂದಿರದ ಡಾ.ಬಸವಮರುಳಸಿದ್ದ ಸ್ವಾಮೀಜಿ ಮಾತನಾಡಿ, ಸಮಾನತೆಯ ಗಾರುಡಿಗ ಸಿದ್ದರಾಮೇಶ್ವರರು ಆಗಿದ್ದರು ಪುರಾತನ ಕಾಲದಿಂದಲೂ ಅವರಿಗೆ ದೊಡ್ಡ ಭಕ್ತಬಣವೆ ಇದೆ, ಸಿದ್ದರಾಮೇಶ್ವರರು ಸಮಾಜದಲ್ಲಿ ಬದುಕುತ್ತಿರುವ ಎಲ್ಲಾ ಸಮುದಾಯಗಳು ಒಂದೇ ಎಂದು ಭಾವಿಸಿದ್ದ ಅವರು ಸಮಾಜದ ಒಳಿತಿಗಾಗಿ ಇಡೀ ತಮ್ಮ ಜೀವನ ಕಳೆದಿದ್ದಾರೆ, ಪ್ರತಿ ಗ್ರಾಮದಲ್ಲಿಯು ಸಹ ಕೆರೆ, ಕಟ್ಟೆ, ದಾಸೋಹ ಮಂದಿರ, ಗೋವು ದಾನದಂತಹ ಹಲವು ಕೆಲಸವನ್ನು ಮಾಡುವ ಮೂಲಕ ಸಮಾಜಕ್ಕೆ ತಮ್ಮದೆ ಆದ ಮೌಲ್ಯ ನೀಡಿದ ಮಹಾ ವ್ಯಕ್ತಿಯಾಗಿದ್ದರು, ಕೇವಲ ಹೊರ ಜಗತ್ತಿನಲ್ಲಿ ದೇವಾಲಯ ಕಟ್ಟುವುದು ಮುಖ್ಯವಲ್ಲ, ಅಂತರಂಗದಲ್ಲಿ ದೇವಾಲಯ ಕಟ್ಟುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು ಎಂಬುದನ್ನು ತಿಳಿಸಿದ್ದವರು, ಹಾಗಾಗಿ ಅಂದಿನಿಂದ ಇಂದಿನವರೆಗೂ ಅವರ ಭಕ್ತರು ಅವರನ್ನು ಸಮಾಜದ ಆದರ್ಶ ವ್ಯಕ್ತಿಯಾಗಿ ಅವರ ಗದ್ದುಗೆಗಳಲ್ಲಿ ಪೂಜಿಸುತ್ತ ಬಂದಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೋಳಾಲ ಮಠದ ಜಯ ಚಂದ್ರಶೇಖರ ಸ್ವಾಮೀಜಿ, ಕರಡಿಗವಿ ಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ, ಶಿವರುದ್ರಮಹಾ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ವಿದ್ಯಾಶಂಕರ ಸ್ವಾಮೀಜಿ, ಮಾಗಡಿ, ಹರಳೂರು, ಹಿರೇಮಠ ಸೇರಿದಂತೆ ಇನ್ನಿತರೆ ಸ್ವಾಮೀಜಿಗಳು ಹಾಗೂ ಸಾಹಿತಿ ಕೊಂ.ಬಸವರಾಜು, ಮುದ್ದೇನಹಳ್ಳಿ ನಂಜಯ್ಯ, ಡಿ.ಸಿ.ಚಂದ್ರಪ್ಪ, ಕಾರ್ಯದರ್ಶಿ ನಿರಂಜನಮೂರ್ತಿ, ನಂಜುಡಪ್ಪ, ಸದಾಶಿವಯ್ಯ ಇನ್ನಿತರರು ಹಾಜರಿದ್ದರು.
ವಿಶ್ವಕ್ಕೆ ಗುರುವಾಗಿ ಕಂಡವರು ಸಿದ್ದರಾಮೇಶ್ವರರು
Get real time updates directly on you device, subscribe now.
Prev Post
Comments are closed.