3ನೇ ಅಲೆಗೆ ಆತಂಕ ಬೇಕಿಲ್ಲ: ಮಾಧುಸ್ವಾಮಿ

171

Get real time updates directly on you device, subscribe now.

ತುಮಕೂರು: ಕೋವಿಡ್‌ 2ನೇ ಅಲೆಗೆ ಹೋಲಿಸಿದರ 3ನೇ ಅಲೆಯಲ್ಲಿ ಜಿಲ್ಲೆಯ ಜನ ಸಾಕಷ್ಟು ಸುರಕ್ಷಿತವಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಕೋವಿಡ್‌ ತೀವ್ರತೆ ಕಡಿಮೆಯಾಗಿದೆ ಎಂದು ಜನತೆ ಅಸಡ್ಡೆ ಮಾಡಬಾರದು, ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡಬೇಕು, ಮಾಸ್ಕ್ ಧರಿಸಬೇಕು, ಕಾರ್ಯಕ್ರಮ ನಡೆಸಿ ಜನಸಂದಣಿ ಸೇರುವ ಕೆಲಸ ಮಾಡಬಾರದು, ವಿನಾ ಕಾರಣ ಆತಂಕ ಸೃಷ್ಟಿಸಬಾರದು ಎಂದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಗರದಲ್ಲಿ 3600 ಕೊರೊನಾ ಪ್ರಕರಣಗಳಿದ್ದು, ಉಳಿದೆಡೆ 50, 60, 200-300 ಕೇಸ್‌ಗಳಿವೆ, ಹಾಗಾಗಿ 2ನೇ ಅಲೆಗೆ ಹೋಲಿಸಿದರೆ 3ನೇ ಅಲೆಯಲ್ಲಿ ಸಾಕಷ್ಟು ಸುರಕ್ಷಿತರಾಗಿದ್ದೇವೆ ಎಂದರು.
ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಿಗೆ ಅಗತ್ಯ ಇರುವ ಔಷಧದ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸರಬರಾಜು ಮಾಡುವಂತೆ ತೀರ್ಮಾನ ಕೈಗೊಳ್ಳಲಾಗಿದೆ, ಯಾವುದಾದರೂ ಔಷಧ ಕಡಿಮೆ ಇದ್ದರೆ ಜಿಲ್ಲಾಧಿಕಾರಿಗಳೆ ಖರೀದಿಸಿ ಕೊಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 1 ರಿಂದ 18 ವರ್ಷದ ಮಕ್ಕಳ ಮೇಲೂ ಬಹಳ ನಿಗಾ ವಹಿಸಲಾಗಿದೆ, 60 ವರ್ಷ ಮೇಲ್ವಟ್ಟವರು, ಗರ್ಭಿಣಿಯರ ಮೇಲೂ ನಿಗಾ ವಹಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದ ಅವರು, ಆರೋಗ್ಯ ಇಲಾಖೆ ಸಿಬ್ಬಂದಿ, ಪ್ಯಾರಾ ಮೆಡಿಕಲ್‌ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತರು ಸಕ್ರಿಯರಾಗಿ ಕಾರ್ಯ ನಿರ್ವಹಿಸುವಂತೆಯೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕೋವಿಡ್‌ 2ನೇ ಅಲೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾದವರಿಗೆ ಸರ್ಕಾರದ ಸೌಲಭ್ಯ ಕಲ್ಪಿಸಲಾಗಿತ್ತು, ಆದರೆ ಈಗ 3ನೇ ಅಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾದವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ದೊರೆಯುವುದಿಲ್ಲ, ಈ ಬಗ್ಗೆ ಸರ್ಕಾರ ಈವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ, ಹಾಗಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾದವರಿಗೆ ಸರ್ಕಾರದ ಯಾವುದೇ ಸೌಲಭ್ಯ ಸಿಗುವುದಿಲ್ಲ, ಆದ್ದರಿಂದ ಸಾಧ್ಯವಾದಷ್ಟು ಸರ್ಕಾರಿ ಆಸ್ಪತ್ರೆಗೆ ದಾಖಲಾಗಬೇಕು ಎಂದರು.
ಎಲ್ಲಾ ಹಳ್ಳಿಗಳಲ್ಲಿ ಆಸ್ಪತ್ರೆ ಇರುವ ಕಡೆ ಎರಡೆರಡು ಆಕ್ಸಿಜನ್‌ ಕಾನ್ಸನ್‌ಟ್ರೇಟ್‌ ಒದಗಿಸಲಾಗಿದೆ, ಪ್ರತಿ ಹಳ್ಳಿಗಳಲ್ಲಿ ತುರ್ತು ಸ್ಥಿತಿ ಆರಂಭವಾದರೆ ಅಲ್ಲೇ ಮೂಲ ಮತ್ತು ತುರ್ತು ಚಿಕಿತ್ಸೆ ಕೊಡಲು ಕ್ರಮ ಕೈಗೊಳ್ಳಲಾಗಿದೆ, ಹೀಗಾಗಿ ತುಮಕೂರು ಜಿಲ್ಲೆಯಲ್ಲಿ ಯಾವುದೇ ಆತಂಕಪಡುವ ಸ್ಥಿತಿ ಇಲ್ಲ ಎಂದರು.
ಈ ಬಾರಿ ಸೋಂಕು ಬಹಳ ಹರಡಿದ್ದರೂ ತೀವ್ರತೆ ಮಾತ್ರ ಕಡಿಮೆ ಇದೆ, ಹಾಗಂತ ಯಾರೂ ಸಹ ಅಸಡ್ಡೆ ಮಾಡಬಾರದು. ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಕೆಲ ಶಾಲೆಗಳಲ್ಲಿ ಮಕ್ಕಳಿಗೆ ಸೋಂಕು ತಗುಲಿದೆ, ಈವರೆಗೆ 1376 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಬಗ್ಗೆ ವರದಿಯಾಗಿದೆ, ಈ ಪೈಕಿ 1 ರಿಂದ 18 ವರ್ಷದ ಮಕ್ಕಳು ಸೇರಿದ್ದಾರೆ, ಒಂದು ಶಾಲೆಯಲ್ಲಿ 20 ರಿಂದ 25 ಮಕ್ಕಳಿಗೆ ಸೋಂಕು ತಗುಲಿದ್ದರೆ ಆ ಶಾಲೆ ಬಂದ್‌ ಮಾಡುವ ಬಗ್ಗೆ ಸ್ಥಳೀಯ ಬಿಇಓ ಮತ್ತು ತಹಶೀಲ್ದಾರ್‌ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಜಿಲ್ಲೆಯಲ್ಲಿ ಪ್ರತಿನಿತ್ಯ 7 ಸಾವಿರ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ, ಸರ್ಕಾರ 4 ರಿಂದ 4500 ಪರೀಕ್ಷೆ ಮಾಡುವಂತೆ ನಿಗದಿ ಮಾಡಿತ್ತು, ಹಾಗೆಯೇ ಕೇಂದ್ರ ಸರ್ಕಾರ ಕೂಡ ಹೇಳಿತ್ತು, ಆದರೆ ಮೊದಲಿನಿಂದಲೂ ನಮ್ಮ ಜಿಲ್ಲೆಯಲ್ಲಿ 7 ಸಾವಿರ ಪರೀಕ್ಷೆ ಮಾಡಿಕೊಂಡು ಬರುತ್ತಿರುವುದರಿಂದ ಈಗಲೂ ಅದನ್ನೆ ಮುಂದುವರೆಸಿದ್ದೇವೆ ಎಂದರು.
ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂ ಬಗ್ಗೆ ಜ.23 ರಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು, ಸಾಮಾನ್ಯವಾಗಿ ಈ ಶನಿವಾರ ಮತ್ತು ಭಾನುವಾರ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದರು.

Get real time updates directly on you device, subscribe now.

Comments are closed.

error: Content is protected !!