ಉಚಿತ ಶ್ರವಣದೋಷ ಪರೀಕ್ಷಾ ವಾಹನಕ್ಕೆ ಚಾಲನೆ

114

Get real time updates directly on you device, subscribe now.

ತುಮಕೂರು: ವಾಣಿ ಡೆಫ್‌ ಚಿಲ್ಡ್ರನ್‌ ಪೌಂಢೇಷನ್‌ ವತಿಯಿಂದ ರೆಡ್‌ ಕ್ರಾಸ್‌ ಸಹಯೋಗದಲ್ಲಿ ಸಮುದಾಯ ಆಧಾರಿತ ಉಚಿತ ಶ್ರವಣದೋಷ ತಪಾಸಣಾ ಸಾಧನ ಹಾಗೂ ನೂತನ ವಾಹನ ಲೋಕಾರ್ಪಣೆಯನ್ನು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ವೈದ್ಯಕೀಯ ಇಲಾಖೆಯ ಸಿಬ್ಬಂದಿ, ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಅನ್‌ ಮೊಬೈಲ್‌ ಸಂಸ್ಥೆಯ ಸಿಎಸ್‌ಆರ್‌ ನಿಧಿಯಿಂದ ಇಎನ್‌ಟಿ ರಾವಿವ್‌ ಎಂಬ ಮೊಬೈಲ್‌ ಸಾಧನದ ಮೂಲಕ ಜಿಲ್ಲೆಯ ಗ್ರಾಮೀಣ ಭಾಗದಲ್ಲಿರುವ ಶ್ರವಣದೋಷ ಇರುವವರನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ಒಳಪಡಿಸುವ ಸಾಧನ ಹಾಗೂ ಇದನ್ನು ಗ್ರಾಮೀಣ ಪ್ರದೇಶಗಳಿಗೆ ತೆಗೆದುಕೊಂಡು ಹೋಗುವ ವಾಹನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ವಾಣಿ ಡೆಫ್‌ ಚಿಲ್ಡ್ರನ್‌ ಪೌಂಢೇಷನ್‌ನ ಕಾರ್ಯಕ್ರಮ ವ್ಯವಸ್ಥಾಪಕ ವೈ.ಎಸ್‌.ವೀರೇಶ್‌, ಇಎನ್‌ಟಿ ರಾವಿವ್‌ ಸಾಧನದ ಮೂಲಕ 6- 60 ವರ್ಷದವರಲ್ಲಿ ಕಂಡು ಬರಬಹುದಾದ ಎಲ್ಲಾ ರೀತಿಯ ಶ್ರವಣ ದೋಷಗಳನ್ನು ಸ್ಪಷ್ಟವಾಗಿ ಗುರುತು ಹಚ್ಚಿ ಅಗತ್ಯವಾದ ಚಿಕಿತ್ಸೆಗೆ ಒಳಪಡಿಸುವ ಕೆಲಸವನ್ನು ವಾಣಿ ಡೆಫ್‌ ಚಿಲ್ಡ್ರನ್‌ ಪೌಂಡೇಷನ್‌ ಮಾಡುತ್ತಿದೆ, ಬೀದರ್‌ ನಂತರ ಅತಿ ಹಿಂದುಳಿದಿರುವ ಜಿಲ್ಲೆಗಳಲ್ಲಿ ಒಂದಾಗಿರುವ ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮುಂದಿನ ಆರು ತಿಂಗಳ ಒಳಗಾಗಿ ಕನಿಷ್ಠ 40- 50 ಶಿಬಿರಗಳನ್ನು ನಡೆಸಿ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಒಳಪಡಿಸಲು ಸಂಸ್ಥೆ ಮುಂದಾಗಿದೆ, ಈ ಕಾರ್ಯದಲ್ಲಿ ರೆಡ್‌ಕ್ರಾಸ್‌ ಸಂಸ್ಥೆ ನಮ್ಮೊಂದಿಗೆ ಕೈಜೋಡಿಸಿದೆ ಎಂದರು.
ವಾಣಿ ಚಿಲ್ಡ್ರನ್‌ ಪೌಂಢೇಷನ್‌ ವತಿಯಿಂದ ಮೊದಲಿಗೆ ಜನರಲ್ಲಿ ಶ್ರವಣದೋಷದ ಬಗ್ಗೆ ಜಾಗೃತಿ ಮೂಡಿಸಿ, ತದ ನಂತರ ಅಗತ್ಯವಿರುವವರನ್ನು ಪರೀಕ್ಷೆಗೆ ಒಳಪಡಿಸಿ, ಶ್ರವಣದೋಷ ದೃಢಪಟ್ಟ ನಂತರ ಅವರನ್ನು ಚಿಕಿತ್ಸೆಗೆ ಒಳಪಡಿಸುವ ಕೆಲಸವನ್ನು ಉಚಿತವಾಗಿ ಮಾಡುತ್ತಿದೆ, ನಮ್ಮ ತಪಾಸಣಾ ವಾಹನ ಒಂದು ಗ್ರಾಮಕ್ಕೆ ಹೋಗುವ ಮೂರು ದಿನ ಮುಂದೆ ಆ ಗ್ರಾಮದಲ್ಲಿ ಸ್ಥಳೀಯ ಕಲಾವಿದರ ಮೂಲಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು, ಶಿಬಿರಕ್ಕೆ ಬರುವ ಜನರ ಕಿವಿಯ ತಮಟೆಯ ಚಿತ್ರವನ್ನು ಇಎನ್‌ಟಿ ರಾವಿವ್‌ ಯಂತ್ರದ ಮೂಲಕ ತೆಗೆದು ಹಿರಿಯ ತಜ್ಞ ವೈದ್ಯರಿಗೆ ಕಳುಹಿಸಿ, ಅವರನ್ನು ಟೆಲಿ ಮೆಡಿಷನ್‌ಗೆ ಒಳಪಡಿಸಿ, ವೈದ್ಯರು ನೀಡುವ ವರದಿಯ ಆಧಾರದಲ್ಲಿ ಚಿಕಿತ್ಸೆ ಪ್ರಾರಂಭಿಸಲಾಗುವುದು ಎಂದರು.
ಈ ಮೊಬೈಲ್‌ ಯಂತ್ರವನ್ನು ಚಾಲನೆ ಮಾಡಲು ಅತ್ಯಂತ ನಿಪುಣ ತಾಂತ್ರಿಕತೆ ಹೊಂದಿರುವ ತಂತ್ರಜ್ಞರ ಅಗತ್ಯವಿಲ್ಲ, ಮೊಬೈಲ್‌ ಬಗ್ಗೆ ಸಾಮಾನ್ಯ ಜ್ಞಾನ ಇರುವ ವ್ಯಕ್ತಿಗಳು ಇದನ್ನು ಬಳಸಬಹುದಾಗಿದೆ, ದಿನವೊಂದಕ್ಕೆ 6- 8 ಗಂಟೆಯೊಳಗೆ ಸುಮಾರು 40- 50 ಜನರನ್ನು ಪರೀಕ್ಷಿಸಿ ಅವರ ವಿವರಗಳನ್ನು ಪಡೆದುಕೊಂಡು ಶ್ರವಣದೋಷ ಇದೆಯೇ ಇಲ್ಲವೇ ಎಂಬುದನ್ನು ಪತ್ತೆ ಹಚ್ಚಬಹುದಾಗಿದೆ ಎಂದು ಕಾರ್ಯಕ್ರಮ ವ್ಯವಸ್ಥಾಪಕ ವೈ.ಎಸ್‌.ವೀರೇಶ್‌ ತಿಳಿಸಿದರು.
ಈ ವೇಳೆ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌, ಜಿಲ್ಲಾ ಪಂಚಾಯಿತಿ ಸಿಇಓ ಡಾ.ಕೆ.ವಿದ್ಯಾಕುಮಾರಿ, ಡಿಹೆಚ್‌ಓ ಡಾ.ನಾಗೇಂದ್ರಪ್ಪ, ಡಿಎಸ್‌ ಡಾ.ಟಿ.ಎ.ವೀರಭದ್ರಯ್ಯ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಕೃಷ್ಣಯ್ಯ, ಬಸವರಾಜು, ವಾಣಿ ಡೆಫ್‌ ಚಿಲ್ಡ್ರನ್‌ ಪೌಂಢೇಷನ್‌ನ ಹೆಚ್‌ಆರ್‌ಎ ಕುಸುಮ, ಸೋನಿಯ, ಸಂಚಾಲಕರಾದ ಶಶಿಧರ್‌ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!