ದಾಸೋಹ ದಿನಾಚರಣೆಗೆ ಸಿಎಂ ಚಾಲನೆ

ಶಿವಕುಮಾರ ಶ್ರೀಗಳ ದಾಸೋಹ ಕಾರ್ಯ ಶ್ಲಾಘನೀಯ: ಬೊಮ್ಮಾಯಿ

205

Get real time updates directly on you device, subscribe now.

ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹ ಮೂರ್ತಿ, ಕರ್ನಾಟಕ ರತ್ನ ಸಿದ್ದಗಂಗಾ ಮಠಾಧ್ಯಕ್ಷರಾಗಿದ್ದ ಶಿವೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ದಿನದ ಅಂಗವಾಗಿ ದಾಸೋಹ ದಿನಾಚರಣೆಗೆ ಸರ್ಕಾರದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಂಕೇತಿಕವಾಗಿ ಶ್ರೀಮಠದಲ್ಲಿ ಚಾಲನೆ ನೀಡಿದರು.
ಶ್ರೀಗಳ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ರೀಗಳ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿ ನಂತರ ದಾಸೋಹ ಮನೆಗೆ ತೆರಳಿ ಶ್ರೀಮಠದ ವಿದ್ಯಾರ್ಥಿಗಳಿಗೆ ದಾಸೋಹ ಬಡಿಸುವ ಮೂಲಕ ದಾಸೋಹ ದಿನಾಚರಣೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಕೋವಿಡ್‌ ಆರ್ಭಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಯಾವುದೇ ಅದ್ದೂರಿ ಆಡಂಬರದ ಸಮಾರಂಭ ನಡೆಸದೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರೀಗಳ ಪುಣ್ಯಸ್ಮರಣೆ ಮತ್ತು ದಾಸೋಹ ದಿನವನ್ನು ಸಾಂಕೇತಿಕವಾಗಿ ಆಚರಿಸಲಾಯಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅನ್ನ, ಅಕ್ಷರ, ಆಶ್ರಯ ದಾಸೋಹ ನೀಡುವ ಮೂಲಕ ಸಿದ್ಧಗಂಗಾ ಮಠ ಭಾರತೀಯ ಪರಂಪರೆ ಮುಂದುವರೆಸಿದೆ ಎಂದು ಹೇಳಿದರು.
ಮಠದಲ್ಲಿ ಒಂದು ವಿಶಿಷ್ಟ ಅನ್ನ ದಾಸೋಹದ ಮೂಲಕ ವಿದ್ಯೆ ಕೊಡುವ ಕೆಲಸವನ್ನು ಶಿವಕುಮಾರ ಸ್ವಾಮೀಜಿ ಮಾಡಿದರು, ಶ್ರೀಗಳವರು ನಾಡು ಕಂಡ ಕರ್ಮಯೋಗಿ, ಅವರ ಸಂಸ್ಮರಣೆ ಪ್ರಯುಕ್ತ ಸರ್ಕಾರದ ವತಿಯಿಂದ ಕಾರ್ಯಕ್ರಮ ನಾಡಿನೆಲ್ಲೆಡೆ ಆಚರಿಸಲಾಗುತ್ತಿದ್ದು, ಸಾಂಕೇತಿಕವಾಗಿ ದಾಸೋಹ ದಿನಕ್ಕೆ ಚಾಲನೆ ನೀಡಲಾಗಿದೆ ಎಂದರು.
ದಾಸೋಹ ಪರಂಪರೆ ಶುರು ಮಾಡಿದ ಡಾ.ಶಿವಕುಮಾರ ಸ್ವಾಮೀಜಿಗಳ ದಾಸೋಹವನ್ನು ಸರ್ಕಾರದ ವತಿಯಿಂದ ಮಾಡಲು ವ್ಯವಸ್ಥಿತವಾಗಿ ಕಾರ್ಯಕ್ರಮ ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಈ ಆಧುನಿಕ ಕಾಲದಲ್ಲಿ ದಾಸೋಹಕ್ಕೆ ಮಹತ್ವ ಕೊಡಬೇಕು ಎಂಬ ನಿಟ್ಟಿನಲ್ಲಿ ದಾಸೋಹ ದಿನ ಆಚರಣೆ ಮಾಡುತ್ತಿದ್ದೇವೆ, ನಮ್ಮಷ್ಟಕ್ಕೆ ನಾವೇ ದಾಸೋಹ ಪರಂಪರೆಗೆ ಸಮರ್ಪಣೆ ಮಾಡಿಕೊಳ್ಳುವ ಧ್ಯೇಯ ನಮ್ಮ ಸರ್ಕಾರದ್ದಾಗಿದೆ ಎಂದರು.
ಹಿರಿಯ ಶ್ರೀಗಳು ಶ್ರೀಮಠದಲ್ಲಿ ದಾಸೋಹ ಪರಂಪರೆ ಮಾಡಿದ್ದಾರೆ. ಅದಕ್ಕೆ ನಾವು ದಾಸೋಹದ ದಿನಾಚರಣೆಯ ಮೂಲಕ ಗೌರವ ಸಲ್ಲಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ಶ್ರೀಗಳಿಗೆ ಭಾರತರತ್ನ ನೀಡುವ ಬಗ್ಗೆ ಭಕ್ತರು ಸಾಕಷ್ಟು ಒತ್ತಾಯ ಮಾಡಿದ್ದಾರೆ, ಈ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಾರ್ಮಿಕರ ಮಕ್ಕಳಿಗೆ ವಿದ್ಯೆ ನೀಡುವ ಯೋಜನೆಗೆ 150 ಕೋಟಿ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಆಶ್ರಯ ದಾಸೋಹ ನೀಡುವ ನಿಟ್ಟಿನಲ್ಲಿ 5000 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌, ಸಂಸದ ಬಸವರಾಜು, ಶಾಸಕ ಜ್ಯೋತಿ ಗಣೇಶ್‌, ಮಾಜಿ ಶಾಸಕ ಸುರೇಶ್‌ಗೌಡ, ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಮತ್ತಿತರರು ಇದ್ದರು.

ಪೊಲೀಸ್‌ ಅಧಿಕಾರಿಗಳಿಗೆ ಸಿಎಂ ತರಾಟೆ
ತುಮಕೂರು: ನಡೆದಾಡುವ ದೇವರೆಂದೇ ನಾಡಿನ ಉದ್ದಗಲಕ್ಕೂ ಹೆಸರುವಾಸಿಯಾಗಿದ್ದ ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿರವರ ಪುಣ್ಯ ಸ್ಮರಣೆ ಮತ್ತು ದಾಸೋಹ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಠದ ಆವರಣದಲ್ಲಿ ಸುಮಾರು 300 ಕ್ಕೂ ಹೆಚ್ಚು ಜನ ಸೇರಿದ್ದನ್ನು ಕಂಡು ಕರ್ತವ್ಯದಲ್ಲಿದ್ದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಿಂದ ಮಠದ ಆವರಣಕ್ಕೆ ಬಂದಿಳಿಯುತ್ತಿದ್ದಂತೆಯೇ ಸಾಮಾಜಿಕ ಅಂತರ ಕಾಪಾಡದ ಭಕ್ತರನ್ನು ನೋಡುತ್ತಿದ್ದಂತೆಯೇ ಐಜಿಪಿ ಚಂದ್ರಶೇಖರ್‌ ಮತ್ತು ಡಿವೈಎಸ್‌ಪಿ ಶ್ರೀನಿವಾಸ್‌ ಅವರನ್ನು ಕರೆದು ಈ ರೀತಿ ಜನರನ್ನು ಸೇರಿಸಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.
ಮಠದ ಗದ್ದುಗೆ ಮಂದಿರದ ಮುಂಭಾಗ ನೆರದಿದ್ದ ಭಕ್ತರು ಮುಖ್ಯಮಂತ್ರಿಗಳನ್ನು ನೋಡಲೂ ಮುಂದಾದಾಗ ತಕ್ಷಣ ಕರ್ತವ್ಯದಲ್ಲಿ ನಿರತರಾಗಿದ್ದ ಪೊಲೀಸರನ್ನು ಕರೆದ ಮುಖ್ಯಮಂತ್ರಿಗಳು, ಜನ ಸೇರಿಸಬಾದರು ಎಂದು ಸೂಚನೆ ನೀಡಿದ್ದೇವು, ಆದರೆ ಈ ರೀತಿ ಜನ ಸೇರಿಸಿದ್ದೀರಾ ಏಕೆ ಎಂದು ಪ್ರಶ್ನಿಸಿದರು.

Get real time updates directly on you device, subscribe now.

Comments are closed.

error: Content is protected !!