ಕೊರೊನಾ ಸಂಕಷ್ಟ- ಆತ್ಮಸ್ಥೈರ್ಯ ತುಂಬಲು ಸಹಾಯವಾಣಿ ಕೇಂದ್ರ

242

Get real time updates directly on you device, subscribe now.

ತುಮಕೂರು: ಜಿಲ್ಲೆಯಲ್ಲಿ ಕೊರೊನ ಬಾಧೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಆತ್ಮಸ್ಥೈರ್ಯ ತುಂಬುವ ಹಾಗೂ ಸೇವೆ ಒದಗಿಸುವ ಸಲುವಾಗಿ ಹಾಲಪ್ಪ ಪ್ರತಿಷ್ಠಾನ, ಮಾತೃಛಾಯಾ ಹಾಗೂ ನಯನಧಾಮ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಸಹಾಯವಾಣಿ ಕೇಂದ್ರ ಆರಂಭಿಸಿದೆ.
ನಗರದ ಬಿ.ಎಚ್‌.ರಸ್ತೆಯ ಬಟವಾಡಿಯಲ್ಲಿರುವ ನಯನಧಾಮ ಕಣ್ಣಿನ ಆಸ್ಪತ್ರೆಯಲ್ಲಿ ಆರಂಭಿಸಲಾಗಿರುವ ಸಹಾಯವಾಣಿ ಕೇಂದ್ರಕ್ಕೆ ಪೋಸ್ಟರ್‌ ಬಿಡುಗಡೆ ಮಾಡಲಯಿತು.
ಈ ವೇಳೆ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಕೋವಿಡ್‌ ಮೂರನೇ ಅಲೆ ಭಯ ನಾಡಿನಾದ್ಯಂತ ಜನಸಾಮಾನ್ಯರನ್ನು ಕಾಡುತ್ತಿದ್ದು, ಜನಸಾಮಾನ್ಯರಿಗೆ ಸೂಕ್ತ ಸಲಹೆ ಮತ್ತು ಸೇವೆ ಒದಗಿಸಲು ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು, ಮೈಸೂರು ಮೆಡಿಕಲ್‌ ಕಾಲೇಜುಗಳು, ಕಸ್ತೂರಬಾ, ಕೆಎಂಸಿ ಹುಬ್ಬಳ್ಳಿ, ಯೂನಾನಿ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜುಗಳ ನಿವೃತ್ತ ಪ್ರಾಂಶುಪಾಲರು ಮತ್ತು ಆಸ್ಪತ್ರೆಗಳ ನಿವೃತ್ತ ಸೂಪರಿಂಟೆಂಡೆಂಟ್‌ಗಳನ್ನು ಹಾಗೂ ನಿವೃತ್ತ ವೈದ್ಯಕೀಯ ಸೇವೆ ಸಲ್ಲಿಸಿದಂತಹವರನ್ನು ಭೇಟಿ ಮಾಡಿದ್ದರ ಹಿನ್ನಲೆಯಲ್ಲಿ ಸುಮಾರು 20 ಮಂದಿ ಹಿರಿಯ ತಜ್ಞರ ತಂಡ ಸಲಹೆ ಮಾರ್ಗದರ್ಶನ ನೀಡಲು ಒಪ್ಪಿಕೊಂಡಿದ್ದಾರೆ ಎಂದರು.
ಜನಸಾಮಾನ್ಯರಿಗೆ ನೆಗಡಿ, ಕೆಮ್ಮು, ಜ್ವರ ಮುಂತಾದ ಯಾವುದೇ ಕೋವಿಡ್‌ ಲಕ್ಷಣಗಳು ಕಂಡು ಬಂದರೆ ಸಹಾಯವಾಣಿ ಸಂಖ್ಯೆ 7676668340 ಇಲ್ಲಿಗೆ ಕರೆ ಮಾಡಿದರೆ ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹಿರಿಯ ತಜ್ಞರು ಅಗತ್ಯ ಸೂಕ್ತ, ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಾರೆ. ಜೊತೆಗೆ 2ನೇ ಲಸಿಕೆ ಮೂರನೇ ಲಸಿಕೆ ಬಗ್ಗೆಯೂ ಅಗತ್ಯ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು ಮೆಡಿಕಲ್‌ ಕಾಲೇಜಿನ ಬಿಎಂಸಿ ನಿವೃತ್ತ ಪ್ರಾಂಶುಪಾಲರು ಮತ್ತು ಶ್ರೀಸತ್ಯಸಾಯಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಡಾ.ರಘುಪತಿ, ಬೆಂಗಳೂರಿನ ಸರ್ಕಾರಿ ಆಯುರ್ವೇದ ಕಾಲೇಜಿನ ಅಧೀಕ್ಷಕ ಡಾ.ಮೋಹನ್‌ ಕುಲಕರ್ಣಿ ಮತ್ತು ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್‌ ಕಾಲೇಜಿನ ನಿವೃತ್ತ ಕಾರ್ಯನಿರ್ವಾಹಕ ಡಾ.ವಿ.ಎಸ್‌.ಅದ್ವಾನಿ ಮತ್ತು ಅವರ ತಂಡ ಈ ಸಹಾಯವಾಣಿ ಕೇಂದ್ರದಲ್ಲಿ ಸೂಕ್ತ ಸಲಹೆ ನೀಡಲಿದ್ದಾರೆ ಎಂದು ಹೇಳಿದರು.
ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ರಾಜ್ಯದಲ್ಲಿ 2.85 ಲಕ್ಷ ಮಂದಿಗೆ ಕೊರೊನ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದ್ದು, ಆರ್‌ಟಿಪಿಸಿಆರ್‌ ಮತ್ತಿತರೆ ಯಾವುದೇ ತಪಾಸಣೆ ಮಾಡಿಸದೆ ಮನೆಯಲ್ಲಿಯೇ ಔಷಧಿ ತೆಗೆದುಕೊಂಡು ಹೋಂ ಐಸೋಲೇಷನ್‌ನಲ್ಲಿರುವವರು ಸುಮಾರು 25 ಲಕ್ಷ ಮಂದಿಗೆ ಜ್ವರ, ನೆಗಡಿ, ಕೆಮ್ಮು ಇಂತಹ ಲಕ್ಷಣಗಳಿಂದ ಬಳಲುತ್ತಿದ್ದಾರೆ ಎಂದರು.
ಕಾರ್ಮಿಕರು, ರೈತರು, ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಲಾಗದಂತಹವರಿಗೆ ಸಹಾಯವಾಣಿ ಕೇಂದ್ರ ತೆರೆದು ಅವರಿಗೆ ಸೂಕ್ತ ಸಲಹೆ, ಆತ್ಮಸ್ಥೈರ್ಯ ತುಂಬುವ ಹಾಗೂ ತಜ್ಞರಿಂದ ಮಾರ್ಗದರ್ಶನ ಕೊಡಿಸುವ ಸಲುವಾಗಿ ನಾವು ಈ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ಈ ಸಹಾಯವಾಣಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಸರ್ಕಾರ ಕೂಡ ಇಂತಹ ಸಹಾಯವಾಣಿ ಕೇಂದ್ರಗಳನ್ನು ಪ್ರತಿ ತಾಲ್ಲೂಕಿನಲ್ಲೂ ತೆರೆದು ಹಿರಿಯ ತಜ್ಞರಿಂದ ಸಲಹೆ ಮಾರ್ಗದರ್ಶನ ಕೊಡಿಸುವ ಪ್ರಯತ್ನಕ್ಕೆ ಮುಂದಾದರೆ ಜನಸಾಮಾನ್ಯರಿಗೂ ಆತ್ಮಸ್ಥೈರ್ಯ ತುಂಬಿದಂತಾಗುತ್ತದೆ, ಈ ಪ್ರಯತ್ನವನ್ನು ಸರ್ಕಾರ ಮಾಡಬೇಕೆಂದು ಸಲಹೆ ನೀಡಿದರು.
ಛೇಂಬರ್ಸ್ ಆಫ್‌ ಕಾಮರ್ಸ್ ಅಸೋಸಿಯೇಷನ್‌ ಅಧ್ಯಕ್ಷ ಎಂ.ಎನ್‌.ಲೋಕೇಶ್‌ ಮಾತನಾಡಿ, ಸಹಾಯವಾಣಿ ಕೇಂದ್ರಕ್ಕೆ ನಮ್ಮ ಅಸೋಸಿಯೇಷನ್‌ ವತಿಯಿಂದ ಮೆಡಿಕಲ್‌ ಕಿಟ್‌ಗಳನ್ನು ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಡಾ.ಎಂ.ಕೆ.ವೀರಯ್ಯ, ಪೊ.ಕೆ.ಚಂದ್ರಣ್ಣ, ಡಾ.ವೈ.ಎಂ.ರೆಡ್ಡಿ, ನಯನಧಾಮ ಕಣ್ಣಿನ ಆಸ್ಪತ್ರೆಯ ನಿರ್ದೇಶಕ ಡಾ.ಪ್ರವೀಣ್‌, ದಾಸರಾಜು, ರೇವಣ ಸಿದ್ಧಯ್ಯ, ಪ್ರಭು ಸಾಗರನಹಳ್ಳಿ, ವೇಣುಗೋಪಾಲ್‌, ಮುರಳೀಕೃಷ್ಣಪ್ಪ, ನಟರಾಜು, ರಿಜ್ವಾನ್‌ ಪಾಷ, ಶಾಂತರಾಜು, ಮರಿಚನ್ನಮ್ಮ, ಕವಿತ ಮುಂತಾದವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!