ಕೊರಟಗೆರೆ: ಬಡವ, ನಿರ್ಗತಿಕ, ಶ್ರಮಿಕರಿಗೆ ಹಾಗೂ ಯಾವುದೇ ಸಾರ್ವಜನಿಕರು ಹಸಿವಿನಿಂದ ಬಳಲಬಾರದು ಎಂಬ ಆಶಯದಿಂದ ಮಾಜಿ ಸಿಎಂ ಸಿದ್ದರಾಮಯ್ಯನವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಹಸಿದವರಿಗೆ ಆಹಾರ ನೀಡಲು ಜಾರಿಗೆ ತಂದ ಇಂದಿರಾ ಕ್ಯಾಂಟಿನ್ ಕಳಪೆ ಆಹಾರ ವಿತರಣೆ ಮೂಲಕ ತಾಲ್ಲೂಕಿನಲ್ಲಿ ಹಳ್ಳ ಹಿಡಿದಿದ್ದು, ಇಲ್ಲಿನ ಇಂದಿರಾ ಕ್ಯಾಂಟಿನ್‌ನಲ್ಲಿ ಕಳಪೆ ಆಹಾರ ನೀಡಿ ಜನರನ್ನು ವಂಚಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿವೆ.
ಕಡಿಮೆ ಬೆಲೆಗೆ ಆಹಾರ: ಈ ಯೋಜನೆಯಡಿ ಬೆಳಗ್ಗೆ 5 ರೂ.ಗೆ ತಿಂಡಿ ಹಾಗೂ 10 ರೂ.ಗೆ ಮಧ್ಯಾಹ್ನ ಮತ್ತು ರಾತ್ರಿಯ ಊಟ ಕೊಡಲಾಗುತ್ತದೆ, ಬಡವರ, ಅಸಹಾಯಕರ, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ನಿರ್ಗತಿಕ ಜನರಿಗೆ ಹಸಿವು ನೀಗಿಸುವ ಈ ಯೋಜನೆಯಡಿ ನಿರ್ಮಾಣವಾಗಿರುವ ಪಟ್ಟಣದ ಇಂದಿರಾ ಕ್ಯಾಂಟಿನ್‌ನಲ್ಲಿ ಕಳಪೆ ಗುಣಮಟ್ಟದಿಂದ ಆಹಾರ ವಿತರಣೆಯಾಗುತ್ತಿದೆ ಎಂದು ಪಟ್ಟಣದ ಕೆಲ ನಾಗರಿಕರು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಹಸಿವಿನಿಂದ ಯಾರು ಇರಬಾರದೆಂಬ ಆಶಯದಿಂದ ಇಂದಿರಾ ಕ್ಯಾಂಟಿನ್‌ನ್ನು ರಾಜ್ಯಾದ್ಯಂತ ಸ್ಥಾಪಿಸಲಾಗಿತ್ತು, ಕೊರಟಗೆರೆ ಪಟ್ಟಣದಲ್ಲಿಯೂ ಡಾ.ಜಿ ಪರಮೇಶ್ವರ್ ಅವರು ಇಂದಿರಾ ಕ್ಯಾಂಟಿನ್‌ಗೆ ಚಾಲನೆ ನೀಡಿ, ಉತ್ತಮ ಗುಣಮಟ್ಟದ ಶುಚಿಯಾದ ಆಹಾರ ವಿತರಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದರು. ಅದರಂತೆ ಪ್ರಾರಂಭದ ಮೊದಲಿನ ದಿನಗಳಲ್ಲಿ ಶುಚಿ ರುಚಿಯಾಗಿ ಆಹಾರ ತಯಾರಿಸಿ ವಿತರಿಸುತ್ತಿದ್ದ ಇಂದಿರಾ ಕ್ಯಾಂಟಿನ್‌ನ ಆಹಾರ ಪೂರೈಕೆಯ ಗುತ್ತಿಗೆದಾರರು ಬರಬರುತ್ತಾ ಕಳಪೆ ಹಾಗೂ ರುಚಿ ಇಲ್ಲದ ಕಳಪೆ ಆಹಾರ ವಿತರಿಸುತ್ತಿದ್ದಾರೆ ಎನ್ನಲಾಗಿದೆ.
ಬೇಸರ ವ್ಯಕ್ತಪಡಿಸಿದ ತಹಶೀಲ್ದಾರ್: ಈ ಘಟನೆ ಬೆಳಕಿಗೆ ಬಂದ ತಕ್ಷಣವೇ ತಹಶೀಲ್ದಾರ್ ನಹೀದಾ ಜಮ್ ಜಮ್ ಇಂದಿರಾ ಕ್ಯಾಂಟಿನ್‌ಗೆ ಭೇಟಿ ನೀಡಿ, ಆಹಾರ ಸೇವಿಸುವ ಮೂಲಕ ಪರಿಶೀಲಿಸಿದರು. ನಂತರ ಆಹಾರದಲ್ಲಿ ಶುಚಿ ರುಚಿ ಇಲ್ಲದ್ದನ್ನು ಕಂಡು ಸಾಂಬಾರ್‌ನಲ್ಲಿ ತರಕಾರಿ ಮತ್ತು ಬೇಳೆ ಕಾಳು ಇಲ್ಲವೆಂದು ಕ್ಯಾಂಟಿನ್ ಸಿಬ್ಬಂದಿ ಮೇಲೆ ಬೇಸರ ವ್ಯಕ್ತಪಡಿಸಿದರು.
ಇಂದಿರಾ ಕ್ಯಾಂಟಿನ್‌ನಲ್ಲಿ ಕುಡಿಯಲು ನೀರು ಇಲ್ಲ, ಗುಣಮಟ್ಟದ ಆಹಾರ ಪೂರೈಕೆ ಆಗುತ್ತಿಲ್ಲ, ತರಕಾರಿ ಮತ್ತು ಕಾಳುಗಳಿಲ್ಲದಂತಹ ರುಚಿ ಇಲ್ಲದ ಆಹಾರ ನೀಡುತ್ತಿದ್ದಾರೆ. ಶುದ್ಧತೆ ಇಲ್ಲ ಆದ್ದರಿಂದ ಸಂಬಂಧ ಪಟ್ಟವರಿಗೆ ನೋಟಿಸ್ ನೀಡಿದ್ದೇವೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಲೋಪ ಕಂಡುಬಂದರೆ ಅಂಥಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
Comments are closed.