ಕುಣಿಗಲ್‌ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸುವೆ

ಲೋಕಸಭೆ ಟಿಕೆಟ್‌ ಕೈತಪ್ಪಲು ಕುಣಿಗಲ್‌ ರಾಜಕಾರಣಿಗಳ ಪಾತ್ರವಿದೆ: ಎಸ್‌ಪಿಎಂ

183

Get real time updates directly on you device, subscribe now.

ಕುಣಿಗಲ್‌: 2019ರ ತುಮಕೂರು ಲೋಕಸಭೆ ಚುನಾವಣೆ ಟಿಕೆಟ್‌ ಕೈತಪ್ಪಲು ಕುಣಿಗಲ್‌ ತಾಲೂಕಿನ ರಾಜಕಾರಣಿಗಳ ಪಾತ್ರವೂ ಇದೆ, ಹೀಗಾಗಿ ಆದ ಅನ್ಯಾಯವನ್ನು ಜನತೆ ಮುಂದಿಟ್ಟು 2023ರ ವಿಧಾನಸಭೆ ಚುನಾವಣೆಯಲ್ಲಿ ಜನತೆಯಿಂದ ನ್ಯಾಯ ಬಯಸಿ ಕುಣಿಗಲ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಆಕಾಂಕ್ಷಿಯಾಗಿ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಹೇಳಿದರು.
ಸೋಮವಾರ ತಾಲೂಕಿನ ದೇವ ಮೂಲೆಯಾದ ಗಿಡದಪಾಳ್ಯ ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ತಮ್ಮ ಬೆಂಬಲಿಗರೊಂದಿಗೆ ಪೂಜೆ ಸಲ್ಲಿಸಿ ತಾಲೂಕಿನಲ್ಲಿ ಪ್ರಚಾರಸಭೆ ಆರಂಭಿಸಿ ಮಾತನಾಡಿ ರಾಜ್ಯದಲ್ಲಿ 2019ರಲ್ಲಿ 10 ಮಂದಿ ಕಾಂಗ್ರೆಸ್‌ ಸದಸ್ಯರಿದ್ದು ಎಲ್ಲರಿಗೆ ಟಿಕೆಟ್ ನೀಡಿ ನನಗೆ ಮಾತ್ರ ನೀಡಿಲ್ಲ, ಸಂಸದನಾಗಿ ನನ್ನ ಕರ್ತವ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಿ, ಭಾರತವನ್ನು ವಿಶ್ವಸಂಸ್ಥೆಯಲ್ಲಿ ಪ್ರತಿನಿಧಿಸಿದ್ದೇನೆ, ಇಷ್ಟು ಕೆಲಸ ಮಾಡಿದ ನನಗೆ ಆದ ವಂಚನೆ ಬಗ್ಗೆ ಪಕ್ಷದ ಹೈಕಮಾಂಡ್‌ ಸೋನಿಯಾ ಗಾಂಧಿ, ರಾಜೀವ್ ಗಾಂಧಿಯವರಲ್ಲಿ ಹೇಳಿಕೊಂಡಿದ್ದೇನೆ, ರಾಜ್ಯದ ವರಿಷ್ಠರ ಬಳಿಯೂ ಹೇಳಿದ್ದೇನೆ, ನನಗೆ ಅನ್ಯಾಯವಾಗಲು ತಾಲೂಕಿನ ರಾಜಕಾರಣಿಗಳು ಸಹ ಕಾರಣವಾಗಿರುವುದರಿಂದ ಕುಣಿಗಲ್‌ ನನ್ನ ಕರ್ಮ ಭೂಮಿಯಾಗಿರುವುದರಿಂದ ಇಲ್ಲಿಂದಲೆ ನಾನು ಸ್ಪರ್ಧಿಸಿ ನನಗೆ ಆಗಿರುವ ಅನ್ಯಾಯವನ್ನು ತಾಲೂಕಿನ ಜನತೆ ಮುಂದಿಟ್ಟು ನ್ಯಾಯ ಕೋರಿಕೊಳ್ಳುತ್ತೇನೆ, ಹತ್ತು ವರ್ಷ ಶಾಸಕನಾಗಿ, ಐದು ವರ್ಷ ಸಂಸದನಾಗಿ ಸೇವೆ ಸಲ್ಲಿಸಿರುವ ನನಗೆ ವ್ಯವಸ್ಥಿತವಾಗಿ ಐದು ಬಾರಿ ಟಿಕೆಟ್‌ ವಂಚಿಸಲಾಗಿದೆ.
ನನಗೆ ಅನ್ಯಾಯ ಮಾಡಿದ ಮಹಾನುಭಾವರ ಎಲ್ಲಾ ವಿವರ ದಾಖಲೆಗಳೂ ನನ್ನ ಬಳಿ ಇದೆ, ಸೂಕ್ತ ಸಮಯ ಬಂದಾಗ ಜನತೆಯ ಮುಂದಿಡುತ್ತೇನೆ, ಒಂದುವೇಳೆ 2019ರಲ್ಲಿ ನನಗೆ ಟಿಕೆಟ್‌ ನೀಡಿ ನಾನು ಜನತೆಯಿಂದ ತಿರಸ್ಕಾರವಾಗಿದ್ದಲ್ಲಿ ನನ್ನ ಆಕ್ಷೇಪಣೆ ಇಲ್ಲ, ಆದರೆ ಜಿಲ್ಲೆಯ ಜನತೆ ನನ್ನ ಸೇವೆ ಬಯಸಿದ್ದರು, ಆದರೂ ನನಗೆ ವ್ಯವಸ್ಥಿತವಾಗಿ ಟಿಕೆಟ್‌ ವಂಚನೆ ಮಾಡಲು ಬಹಳಷ್ಟು ಮಂದಿ ಶ್ರಮಿಸಿದರು, ಅವರ ಬಗ್ಗೆ ಸಮಯ ಬಂದಾಗ ಎಲ್ಲವನ್ನು ತಾಲೂಕಿನ ಜನತೆಯ ಮುಂದಿಡುತ್ತೇನೆ, ನ್ಯಾಯಾಧೀಶನಾಗಿ ಸೇವೆ ಸಲ್ಲಿಸುತ್ತಿದ್ದ ನಾನು ಜನಪರ ಸೇವೆಗೆ ನನ್ನ ಹುದ್ದೆ ತೊರೆದು ಜನಪರ ಸೇವೆಗೆ ಬಂದೆ, ನಾನು ಇನ್ನು ಕುಣಿಗಲ್‌ ಕ್ಷೇತ್ರದ ಮತದಾರರನಾಗಿದ್ದು, ಕುಣಿಗಲ್‌ ತಾಲೂಕಿನಿಂದ ಎರಡುಬಾರಿ ಶಾಸಕನಾಗಿ ಆಯ್ಕೆಯಾಗಿದ್ದು ಇದೀಗಲೂ ಇಲ್ಲಿಂದ ಸ್ಪರ್ಧಿಸುತ್ತೇನೆ, ನಾನು ಸಂಸದನಾಗಿದ್ದ ಅವಧಿಯಲ್ಲಿ ನನ್ನ ಮೇಲೆ ಮಾಡಿದ ಆರೋಪಗಳಿಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಆಣೆ, ಪ್ರಮಾಣಕ್ಕೆ ಕರೆಸಿದಾಗ ಯಾರು ಬರಲಿಲ್ಲ, ಸ್ವಚ್ಛವಾಗಿದ್ದೇನೆ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದು ಕಾಂಗ್ರೆಸ್‌ ಪಕ್ಷದಿಂದಲೇ 2023 ರಲ್ಲಿ ಸ್ಪರ್ಧಿಸಿ, ಟಿಕೆಟ್‌ ನೀಡುವಂತೆ ಕೇಂದ್ರ, ರಾಜ್ಯ ಹೈಕಮಾಂಡ್‌ ಮೇಲೆ ಒತ್ತಡ ಹಾಕುತ್ತೇನೆ. ನನಗಾಗಿರುವ ಅನ್ಯಾಯಕ್ಕೆ ತಾಲೂಕಿನ ಜನತೆ ಸಮರ್ಪಕ ನ್ಯಾಯ ದೊರಕಿಸಿ ಕೊಡುತ್ತಾರೆ ಎಂಬ ಭರವಸೆ ಇದೆ ಎಂದರು.
ಚಿಕ್ಕಣ್ಣಹಟ್ಟಿ ಕ್ಷೇತ್ರದ ಪ್ರಧಾನ ಅರ್ಚಕ ಡಾ.ಪಾಪಣ್ಣ, ತಾಪಂ ಮಾಜಿ ಸದಸ್ಯ ಕೆಂಪೇಗೌಡ, ಗ್ರಾಪಂ ಮಾಜಿ ಉಪಾಧ್ಯಕ್ಷ ಶಿವಣ್ಣಗೌಡ, ಗ್ರಾಪಂ ಸದಸ್ಯರಾದ ಗಂಗಾಧರ, ಅನಂತಯ್ಯ, ಚಂದ್ರಯ್ಯ, ಪ್ರಮುಖರಾದ ಜೆಸಿಬಿ ಭೈರಪ್ಪ, ಹರೀಶ್‌, ನಾರಾಯಣಪ್ಪ, ಕೃಷ್ಣಪ್ಪ, ರಾಮಚಂದ್ರಯ್ಯ, ಅನಿಲ್‌, ನಂಜೇಶ, ಶ್ರೀಕಂಠಯ್ಯ, ಕಾಳೇಗೌಡ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!